ಬೆಂಗಳೂರು:ರಾಜ್ಯ ಸರ್ಕಾರ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕಾಗಿ ಸಂಪನ್ಮೂಲ ಕ್ರೋಢೀಕರಣದ ಕಸರತ್ತು ನಡೆಸುತ್ತಿದೆ. ಈ ಯೋಜನೆಗಳಿಗಾಗಿ ಎಸ್ಸಿ ಹಾಗೂ ಎಸ್ಟಿ ಅನುದಾನವನ್ನು ಗಣನೀಯ ಪ್ರಮಾಣದಲ್ಲಿ ಬಳಕೆ ಮಾಡುತ್ತಿದೆ. ನವೆಂಬರ್ವರೆಗೆ ಎಸ್ಸಿ/ಎಸ್ಟಿ ಅನುದಾನದಿಂದ ಬರೋಬ್ಬರಿ 6,542 ಕೋಟಿ ರೂ. ಹಣ ಬಳಕೆ ಮಾಡಲಾಗಿದೆ.
ಪಂಚ ಗ್ಯಾರಂಟಿ ಅನುಷ್ಠಾನಕ್ಕಾಗಿ ರಾಜ್ಯ ಸರ್ಕಾರ ಈ ಬಾರಿ ದೊಡ್ಡ ಪ್ರಮಾಣದ ಅನುದಾನ ಮೀಸಲಿಟ್ಟಿದೆ. 2024-25ರ ಸಾಲಿನಲ್ಲಿ ಈ ಯೋಜನೆಗಳಿಗಾಗಿ ಸುಮಾರು 52,000 ಕೋಟಿ ರೂ. ಅನುದಾನ ಮೀಸಲಿರಿಸಲಾಗಿದೆ. ಇದು ವರ್ಷಾಂತ್ಯಕ್ಕೆ ಸುಮಾರು 56,000 ಕೋಟಿ ರೂ. ತಲುಪುವ ಸಾಧ್ಯತೆ ಇದೆ. ಸುಮಾರು ಶೇ 98ರಷ್ಟು ಫಲಾನುಭವಿಗಳಿಗೆ ಗ್ಯಾರಂಟಿ ಯೋಜನೆಗಳು ತಲುಪುತ್ತಿದೆ ಎಂದು ಸರ್ಕಾರ ತಿಳಿಸಿದೆ.
ಬೃಹತ್ ಪ್ರಮಾಣದ ಹೊರೆಯೊಂದಿಗೆ ಗ್ಯಾರಂಟಿಗಳಿಗಾಗಿ ಫಲಾನುಭವಿಗಳಿಗೆ ಹಣ ಸಂದಾಯ ಮಾಡುತ್ತಿದೆ. ಅದರಲ್ಲೂ ಗೃಹ ಲಕ್ಷ್ಮಿ ಹಾಗೂ ಅನ್ನಭಾಗ್ಯ ಡಿಬಿಟಿ ಯೋಜನೆಯಡಿ ಫಲಾನುಭವಿಗಳಿಗೆ ಹಣ ಪಾವತಿ ಎರಡು ಮೂರು ತಿಂಗಳು ವಿಳಂಬವಾಗುತ್ತಿದೆ. ಅನುದಾನ ಹೊಂದಾಣಿಕೆ ಮಾಡಿ ಫಲಾನುಭವಿಗಳಿಗೆ ಹಣ ಪಾವತಿ ಮಾಡಲಾಗುತ್ತಿದೆ. ವಿಪಕ್ಷಗಳ ವಿರೋಧದ ಮಧ್ಯೆಯೂ ಎಸ್ಸಿ/ಎಸ್ಟಿ ಸಮುದಾಯಕ್ಕೆ ಮೀಸಲಿಟ್ಟಿರುವ ಎಸ್ಸಿಎಸ್ಪಿ ಹಾಗೂ ಟಿಎಸ್ಪಿ ಅನುದಾನದಿಂದ ಹಣ ಬಳಕೆ ಮಾಡುತ್ತಿದೆ.
ಈವರೆಗೆ 6,542 ಕೋಟಿ ರೂ. ಬಳಕೆ:ಕೆಡಿಪಿ ಮಾಸಿಕ ಪ್ರಗತಿ ಅಂಕಿ - ಅಂಶಗಳ ಪ್ರಕಾರ, ರಾಜ್ಯ ಸರ್ಕಾರ ಈವರೆಗೆ ಎಸ್ಸಿ/ಎಸ್ಟಿ ಸಮುದಾಯಕ್ಕೆ ಮೀಸಲಿಟ್ಟಿರುವ ಅನುದಾನದಿಂದ ಸುಮಾರು 6,542 ಕೋಟಿ ಹಣ ಬಳಕೆ ಮಾಡಿದೆ. ಎಸ್ಸಿಎಸ್ಪಿ - ಟಿಎಸ್ಪಿಯಿಂದ 2024-25ರ ಸಾಲಿನಲ್ಲಿ ಪಂಚ ಗ್ಯಾರಂಟಿಗಳಿಗಾಗಿ ಬರೋಬ್ಬರಿ 14,280 ಕೋಟಿ ರೂ. ಅನುದಾನ ಹಂಚಿಕೆ ಮಾಡಿದೆ. ಈ ಪೈಕಿ ನವೆಂಬರ್ವರೆಗೆ ಕಾಂಗ್ರೆಸ್ ಸರ್ಕಾರ 6,542 ಕೋಟಿ ರೂ. ಹಣ ಖರ್ಚು ಮಾಡಿದೆ.
ಎಸ್ಸಿಎಸ್ಪಿ ಯೋಜನೆಯಡಿ ಒಟ್ಟು 9,980 ಕೋಟಿ ರೂ. ಅನುದಾನ ಹಂಚಿಕೆ ಮಾಡಲಾಗಿದೆ. ಈ ಪೈಕಿ ಈವರೆಗೆ ಒಟ್ಟು 4,650 ಕೋಟಿ ರೂ. ಹಣ ಬಳಕೆ ಮಾಡಲಾಗಿದೆ. ಇನ್ನು ಟಿಎಸ್ಪಿಯಡಿ ಗ್ಯಾರಂಟಿಗಳಿಗಾಗಿ 4,300 ಕೋಟಿ ರೂ. ಅನುದಾನ ಹಂಚಿಕೆ ಮಾಡಲಾಗಿದೆ. ಈ ಪೈಕಿ ನವೆಂಬರ್ವರೆಗೆ ಸುಮಾರು 1,891 ಕೋಟಿ ರೂ. ಹಣ ಬಳಕೆ ಮಾಡಲಾಗಿದೆ. ಆ ಮೂಲಕ ಕಾಂಗ್ರೆಸ್ ಸರ್ಕಾರ ನವೆಂಬರ್ವರೆಗೆ ಎಸ್ಸಿಎಸ್ಪಿ - ಟಿಎಸ್ಪಿ ಅಡಿ ಗ್ಯಾರಂಟಿಗಳಿಗಾಗಿ ಹಂಚಿಕೆ ಮಾಡಲಾದ ಒಟ್ಟು ಮೊತ್ತದಲ್ಲಿ 46% ಹಣ ಬಳಸಿದೆ.
ಯಾವ ಗ್ಯಾರಂಟಿಗೆ ಎಷ್ಟು ಎಸ್ಸಿ ಹಣ ಬಳಕೆ?:
- ಗೃಹ ಜ್ಯೋತಿಗೆ ಒಟ್ಟು ಹಂಚಿಕೆ 1,770 ಕೋಟಿ ರೂ.; ಬಿಡುಗಡೆ 1,092 ಕೋಟಿ ರೂ.; ವೆಚ್ಚ 1,092 ಕೋಟಿ ರೂ.
- ಅನ್ನಭಾಗ್ಯಕ್ಕೆ ಒಟ್ಟು ಹಂಚಿಕೆ 1,539 ಕೋಟಿ ರೂ.; ಬಿಡುಗಡೆ 561 ಕೋಟಿ ರೂ.; ವೆಚ್ಚ 550 ಕೋಟಿ ರೂ.
- ಶಕ್ತಿ ಯೋಜನೆಗೆ ಒಟ್ಟು ಹಂಚಿಕೆ 1,001 ಕೋಟಿ ರೂ.; ಬಿಡುಗಡೆ 667 ಕೋಟಿ ರೂ.; ವೆಚ್ಚ 667 ಕೋಟಿ ರೂ.
- ಯುವನಿಧಿಗೆ ಒಟ್ಟು ಹಂಚಿಕೆ 123.50 ಕೋಟಿ ರೂ.; ಬಿಡುಗಡೆ 30.88 ಕೋಟಿ ರೂ.; ವೆಚ್ಚ 14.40 ಕೋಟಿ ರೂ.
- ಗೃಹಲಕ್ಷ್ಮಿಗೆ ಒಟ್ಟು ಹಂಚಿಕೆ 5,546.53 ಕೋಟಿ ರೂ.; ಬಿಡುಗಡೆ 2,363 ಕೋಟಿ ರೂ.; ವೆಚ್ಚ 2,327 ಕೋಟಿ ರೂ.
ಯಾವ ಗ್ಯಾರಂಟಿಗೆ ಎಷ್ಟು ಎಸ್ಟಿ ಹಣ ಬಳಕೆ?:
- ಗೃಹ ಜ್ಯೋತಿಗೆ ಒಟ್ಟು ಹಂಚಿಕೆ 815 ಕೋಟಿ ರೂ.; ಬಿಡುಗಡೆ 497.85 ಕೋಟಿ ರೂ.; ವೆಚ್ಚ 497.85 ಕೋಟಿ ರೂ.
- ಶಕ್ತಿ ಯೋಜನೆಗೆ ಒಟ್ಟು ಹಂಚಿಕೆ 450.45 ಕೋಟಿ ರೂ.; ಬಿಡುಗಡೆ 300 ಕೋಟಿ ರೂ.; ವೆಚ್ಚ 300 ಕೋಟಿ ರೂ.
- ಗೃಹ ಲಕ್ಷ್ಮಿಗೆ ಒಟ್ಟು ಹಂಚಿಕೆ 2,335 ಕೋಟಿ ರೂ.; ಬಿಡುಗಡೆ 863.61 ಕೋಟಿ ರೂ.; ವೆಚ್ಚ 863 ಕೋಟಿ ರೂ.
- ಅನ್ನಭಾಗ್ಯಕ್ಕೆ ಒಟ್ಟು ಹಂಚಿಕೆ 648 ಕೋಟಿ ರೂ.; ಬಿಡುಗಡೆ 237.76 ಕೋಟಿ ರೂ.; ವೆಚ್ಚ 231 ಕೋಟಿ ರೂ.
- ಯುವನಿಧಿಗೆ ಒಟ್ಟು ಹಂಚಿಕೆ 52 ಕೋಟಿ ರೂ.; ಬಿಡುಗಡೆ 0; ವೆಚ್ಚ 0
ಇದನ್ನೂ ಓದಿ:ಯಶಸ್ವಿನಿ ಯೋಜನೆಗೆ ಆದಾಯ ಮಿತಿಗೊಳಿಸಿದ ಸರ್ಕಾರ; ನೋಂದಣಿಗೆ ಡಿ.31ರವರೆಗೆ ಅವಕಾಶ