ಬೆಂಗಳೂರು:ಡೆಂಗ್ಯೂ ಪ್ರಕರಣ ಹೆಚ್ಚಳವಾಗುತ್ತಿರುವ ಹಿನ್ನೆಲೆ ಕೊಳೆಗೇರಿ ನಿವಾಸಿಗಳಿಗೆ ಉಚಿತ ಸೊಳ್ಳೆ ಪರದೆ ವಿತರಿಸಲು ಸೂಚಿಸಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.
ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಒಟ್ಟು ಇಲ್ಲಿವರೆಗೆ 7,362 ಪ್ರಕರಣಗಳು ಪತ್ತೆಯಾಗಿವೆ. ಈ ಪೈಕಿ 303 ಸಕ್ರಿಯ ಡೆಂಗ್ಯೂ ಪ್ರಕರಣಗಳಿವೆ. ಈವರೆಗೆ ರಾಜ್ಯದಲ್ಲಿ 7 ಡೆಂಗ್ಯೂನಿಂದ ಸಾವುಗಳಾಗಿವೆ. ಸ್ಲಂ ನಿವಾಸಿಗಳಿಗೆ ಉಚಿತ ಸೊಳ್ಳೆ ಪರದೆ ನೀಡಲು ಸೂಚನೆ ನೀಡಲಾಗಿದೆ. ಎಲ್ಲಿ ಸೊಳ್ಳೆಗಳು ಹೆಚ್ಚಿರುತ್ತವೆ ಅಲ್ಲಿ ಉಚಿತ ಸೊಳ್ಳೆ ಪರದೆ ನೀಡಲಾಗುತ್ತದೆ ಎಂದು ಇದೇ ವೇಳೆ ತಿಳಿಸಿದರು.
ತಾಂತ್ರಿಕ ಸಮಿತಿ ಸಭೆಯಲ್ಲಿ ಸೊಳ್ಳೆಗಳ ನಾಶ ಮಾಡುವ ಕೆಲಸ ಆಗಬೇಕೆಂದು ಸೂಚನೆ ನೀಡಿದ್ದೇವೆ. ಪ್ರತಿ ಜಿಲ್ಲಾಸ್ಪತ್ರೆಯಲ್ಲಿ ಡೆಂಗ್ಯೂ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗಳಲ್ಲಿ ವಿಶೇಷ ವಾರ್ಡ್ ಸಜ್ಜುಗೊಳಿಸಬೇಕು. ಮೆಡಿಕಲ್ ಕಾಲೇಜುಗಳಲ್ಲಿಯೂ ಚಿಕಿತ್ಸೆಗೆ ವ್ಯವಸ್ಥೆ ಕಲ್ಪಿಸಲು ಸೂಚಿಸಲಾಗಿದೆ. ಡೆಂಗ್ಯೂ ಪತ್ತೆಗೆ ಪರೀಕ್ಷೆ ಹೆಚ್ಚಿಸಬೇಕು. ಡೆಂಗ್ಯೂ ಪಾಸಿಟಿವ್ ಇರುವ ವ್ಯಕ್ತಿಗಳ ಆರೋಗ್ಯ ಸ್ಥಿತಿಯ ಮೇಲೆ ನಿಗಾ ಇರಿಸಬೇಕು. ಜಿಲ್ಲಾ ಮಟ್ಟದಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳನ್ನು ಒಳಗೊಂಡ ಟಾಸ್ಕ್ ಫೋರ್ಸ್ ರಚಿಸಬೇಕು. ಮಳೆಗಾಲ ಮುಗಿಯುವ ತನಕ ಅಧಿಕಾರಿಗಳು ನಿತ್ಯ ಪರಿಶೀಲನೆ ನಡೆಸಬೇಕು. ಯಾವುದೇ ರೀತಿಯ ಉದಾಸೀನ ಪ್ರವೃತ್ತಿಯನ್ನು ಸಹಿಸುವುದಿಲ್ಲ ಎಂದು ಮನವರಿಕೆ ಮಾಡಿಕೊಡಲಾಗಿದೆ. ಎಲ್ಲ ರೀತಿಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು. ಒಂದೂ ಸಾವು ಆಗದಂತೆ ಕ್ರಮವಹಿಸಬೇಕೆಂದು ನಿರ್ದೇಶನ ನೀಡಲಾಗಿದೆ ಎಂದರು.
ಅನರ್ಹ ಬಿಪಿಎಲ್ ಕಾರ್ಡ್ ರದ್ದತಿಗೆ ಸೂಚನೆ:ರಾಜ್ಯದಲ್ಲಿ 4,37,23,911 ಜನರು ಬಿಪಿಎಲ್ ಕಾರ್ಡ್ ಸೌಲಭ್ಯ ಪಡೆಯುತ್ತಿದ್ದಾರೆ. ಬಿಪಿಎಲ್ ಅಡಿಯಲ್ಲಿ 1.27 ಕೋಟಿ ಬಿಪಿಎಲ್ ಕುಟುಂಬಗಳಿವೆ. ಹೊಸ ಕಾರ್ಡ್‌ಗಳಿಗೆ 2.95 ಲಕ್ಷ ಅರ್ಜಿ ಬಾಕಿಯಿವೆ. ಈ ಕುರಿತು ಪರಿಶೀಲನೆ ನಡೆಸಿ, ಮೃತ ಸದಸ್ಯರ ಹೆಸರು ತೆಗೆದು ಹಾಕುವ ಪ್ರಕ್ರಿಯೆ ತ್ವರಿತಗೊಳಿಸಬೇಕು. ಒಟ್ಟಾರೆ ಸಾರಾಂಶ ಒಬ್ಬ ಅರ್ಹರೂ ಬಿಟ್ಟು ಹೋಗಬಾರದು. ಅನರ್ಹರು ಸವಲತ್ತು ಪಡೆಯಬಾರದು. ಈ ಕುರಿತು ಅಗತ್ಯ ಕ್ರಮವಹಿಸಬೇಕು ಎಂದು ತಿಳಿಸಲಾಗಿದೆ ಎಂದು ಇದೇ ವೇಳೆ ತಿಳಿಸಿದರು.
ಕರ್ತವ್ಯಲೋಪ ಮಾಡುವವರಿಗೆ ಕಿವಿ ಹಿಂಡುತ್ತೇವೆ:ಸರ್ಕಾರ ಮಾಡಿದ ಕಾರ್ಯಕ್ರಮ ಪರಿಣಾಮಕಾರಿಯಾಗಿ ಜನರಿಗೆ ತಲುಪಲು ಡಿಸಿ, ಸಿಇಒ ಮತ್ತು ಎಸ್ಪಿ ಅಧಿಕಾರಿಗಳು ಮುಖ್ಯ. ಯಾರು ಜಿಲ್ಲೆಯಲ್ಲಿ ಉತ್ತಮ ಕೆಲಸ ಮಾಡುತ್ತಾರೆ ಅವರಿಗೆ ಬೆನ್ನು ತಟ್ಟುವ ಕೆಲಸ ಮಾಡುತ್ತೇವೆ. ಯಾರು ಕರ್ತವ್ಯ ಲೋಪ ಮಾಡುವವರಿಗೆ ಕಿವಿ ಹಿಂಡುವ ಕೆಲಸ ಮಾಡುತ್ತೇವೆ ಎಂದರು.
ಸುಮಾರು 30 ಇಲಾಖೆಗಳು 68 ವಿಷಯಗಳ ಬಗ್ಗೆ ಚರ್ಚೆ ಮಾಡಿದ್ದೇವೆ. ಎಲ್ಲೆಲ್ಲಿ ನ್ಯೂನತೆ ಇದೆ ಅದನ್ನು ಪ್ರಸ್ತಾಪಿದ್ದೇನೆ. ಈ ಬಾರಿ ಎಲ್ಲ ಕಡೆ ಉತ್ತಮ ಮಳೆಯಾಗುತ್ತಿದೆ. ಜಲಾಶಯಗಳು ತುಂಬುತ್ತಿವೆ. ಮುಂಗಾರಿನಲ್ಲಿ 82 ಲಕ್ಷ ಹೆಕ್ಟೇರ್ ಕೃಷಿ ಬೆಳೆ ಬಿತ್ತನೆ ಮಾಡಬೇಕಾಗಿದೆ. ಇಲ್ಲಿವರೆಗೆ 52 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಆಗಿದೆ. ಆಗಸ್ಟ್ ಮೊದಲ ವಾರದವರೆಗೆ ಬಿತ್ತನೆ ನಡೆಯಲಿದೆ. ರಾಜ್ಯದಲ್ಲಿ ಯಾವ ರೈತರಿಗೂ ಬಿತ್ತನೆ ಬೀಜ, ರಸಗೊಬ್ಬರ, ಕೀಟ ನಾಶಕದ ತೊಂದರೆ ಆಗಿಲ್ಲ. ಯಾವ ಕಾರಣಕ್ಕೂ ರೈತರಿಗೆ ಬೀಜ, ಗೊಬ್ಬರ ಕೊರತೆ ಆಗಬಾರದು ಎಂದು ಸಚಿವರಿಗೆ ಸೂಚನೆ ನೀಡಿದ್ದೇನೆ ಎಂದರು.
ಅಣೆಕಟ್ಟಿನಲ್ಲಿ 50% ನೀರು ಸಂಗ್ರಹವಾಗಿದೆ. ಈ ಬಾರಿ ಎಲ್ಲಾ ಡ್ಯಾಂಗಳು ತುಂಬುವ ಭರವಸೆ ಇದೆ. ಕರಾವಳಿ, ಮಲೆನಾಡು ಪ್ರದೇಶದ 175 ತಾಲೂಕುಗಳ 1,247 ಗ್ರಾಮ ಪಂಚಾಯತಿ ವ್ಯಾಪ್ತಿಯ 2,225 ಗ್ರಾಮಗಳಲ್ಲಿ ಪ್ರವಾಹಕ್ಕೆ ತುತ್ತಾಗುವ ಹಳ್ಳಿಗಳಲ್ಲಿ 20.38 ಲಕ್ಷ ಜನರು ಪ್ರವಾಹ ಪೀಡಿತರಾಗಿರುತ್ತಾರೆ. ಬಿಬಿಎಂಪಿಯಲ್ಲಿ 201 ಸ್ಥಳಗಳನ್ನು ಪ್ರವಾಹ ಪೀಡಿತ ಸ್ಥಳವಾಗಿ ಗುರುತು ಮಾಡಲಾಗಿದೆ. ಪ್ರವಾಹದಿಂದ ಈ ಬಾರಿ ಯಾರಿಗೂ ವಿಪತ್ತು ಆಗಬಾರದು. ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಬೇಕು. ಅಧಿಕಾರಿಗಳು ಸನ್ನದ್ದರಾಗಿರುವಂತೆ ಸೂಚನೆ ನೀಡಲಾಗಿದೆ ಎಂದರು.
ಈವರೆಗೆ 3714 ಮನೆಗಳು ಮಳೆ ಹಾನಿಯಿಂದ ನಷ್ಟವಾಗಿದೆ. ಇವುಗಳಿಗೆ ಎಸ್ಡಿಆರ್ಎಫ್ ಪ್ರಕಾರ ಪರಿಹಾರ ಕೊಡಲು ಸೂಚಿಸಿದ್ದೇವೆ. ಡಿಸಿಗಳ ಪಿಡಿ ಖಾತೆಯಲ್ಲಿ ಸುಮಾರು 783.69 ಕೋಟಿ ರೂ.ಹಣ ಇದೆ. ಯಾವುದೇ ಹಣದ ಕೊರತೆ ಇಲ್ಲ ಎಂದು ತಿಳಿಸಿದರು.