ಬೆಂಗಳೂರು: ಹೆಣ್ಣು ಮಗುವಿನ ಆರೈಕೆ ತಂದೆಯ ಕಾನೂನುಬದ್ಧ ಜವಾಬ್ದಾರಿ. ಪತ್ನಿಯಿಂದ ಪತಿ ಬೇರೆಯಾಗಿ ಜೀವನ ಸಾಗಿಸುತ್ತಿದ್ದರು ಸಹ ಮಗುವಿಗೆ ಉತ್ತಮ ಶಿಕ್ಷಣ ನೀಡುವುದು ಆತನ ಕರ್ತವ್ಯ ಎಂದು ಹೈಕೋರ್ಟ್ ತಿಳಿಸಿದೆ.
ಜೀವನಾಂಶ ಕೋರಿ ಕೌಟುಂಬಿಕ ನ್ಯಾಯಾಲಯ ಹೊರಡಿಸಿದ್ದ ಆದೇಶ ಪ್ರಶ್ನಿಸಿ ಬಿ.ಸಿ ಹನುಮಂತರಾಜು ಎಂಬುವರು ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅಶೋಕ್ ಎಸ್. ಕಿಣಗಿ ಅವರಿದ್ದ ಏಕಸದಸ್ಯ ಪೀಠ ಈ ಆದೇಶ ನೀಡಿದೆ.
ಅರ್ಜಿಗೆ ಸಂಬಂಧಿಸಿದಂತೆ ದಾಖಲೆಗಳನ್ನು ಪರಿಶೀಲಿಸಿದ ನ್ಯಾಯಪೀಠ, ಅರ್ಜಿದಾರರು ಲಾರಿ ಮತ್ತು ಕ್ರಷರ್ ಉದ್ಯಮ ನಡೆಸುತ್ತಿದ್ದು, ಮಾಸಿಕ ಒಂದು ಲಕ್ಷ ಹಣ ಸಂಪಾದನೆ ಮಾಡುತ್ತಾರೆ. ಮಾತ್ರವಲ್ಲದೆ ಅವರು ಒಂದು ಎಕರೆ ಅಡಿಕೆ ತೋಟ ಹೊಂದಿದ್ದು ಅದರಿಂದ ಮಾಸಿಕ 8 ಸಾವಿರ ರೂ. ಗಳಿಕೆ ಇದೆ. ಹೀಗಿರುವಾಗ ವಿಚಾರಣಾ ನ್ಯಾಯಾಲಯವು ಇಬ್ಬರು ಪುತ್ರಿಯರಿಗೆ ಮಾಸಿಕ ತಲಾ 6 ಸಾವಿರ ರೂ. ಪಾವತಿಸುವಂತೆ ಆದೇಶಿಸಿರುವುದಲ್ಲಿ ಯಾವುದೇ ದೋಷವಿಲ್ಲ. ಜೊತೆಗೆ ಹೆಣ್ಣು ಮಗುವಿನ ಆರೈಕೆ ತಂದೆಯಾದವನ ಕಾನೂನುಬದ್ಧ ಜವಾಬ್ದಾರಿ ಹಾಗೂ ಪತ್ನಿಯಿಂದ ಬೇರೆಯಾಗಿ ಜೀವನ ಸಾಗಿಸುತ್ತಿದ್ದರೂ ಸಹ ಮಗುವಿಗೆ ಉತ್ತಮ ಶಿಕ್ಷಣ ನೀಡುವುದು ಆತನ ಕರ್ತವ್ಯ ಎಂದು ಅಭಿಪ್ರಾಯಪಟ್ಟು, ಕೌಟುಂಬಿಕ ನ್ಯಾಯಾಲಯದ ಆದೇಶ ಎತ್ತಿಹಿಡಿದಿದೆ.
ಏನಿದು ಪ್ರಕರಣ?ಅರ್ಜಿದಾರರು ಹಾಗೂ ಅವರ ಪತಿ ವೈಯಕ್ತಿಕ ಕಾರಣದಿಂದ 2013 ರಂದು ವಿಚ್ಛೇದನ ಪಡೆದಿದ್ದರು. ಬಳಿಕ ವಿಚಾರಣಾ ನ್ಯಾಯಾಲಯವು ಇಬ್ಬರು ಹೆಣ್ಣು ಮಕ್ಕಳು ಮದುವೆಯಾಗುವವರೆಗೆ ಮಾಸಿಕ ತಲಾ 6 ಸಾವಿರ ರೂ. ಪಾವತಿಸುವಂತೆ ಹಾಗೂ ಪ್ರತಿವಾದಿ ನಂ.1 (ಹಿರಿಯ ಮಗಳ) ವಾರ್ಷಿಕ ಶಿಕ್ಷಣ ಶುಲ್ಕ 1.04 ಲಕ್ಷ ಪಾವತಿಸುವಂತೆ ಜೊತೆಗೆ ದಾವೆ ಶುಲ್ಕ 5 ಸಾವಿರ ಪಾವತಿಸುವಂತೆ ನ್ಯಾಯಾಲಯವು ಆದೇಶ ಹೊರಡಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿದ್ದರು.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ನಮ್ಮ ಕಕ್ಷಿದಾರರು ಸಿಆರ್ಪಿಸಿ ಸೆಕ್ಷನ್ 125 ರ ಅಡಿಯಲ್ಲಿ ಮಗಳು ಸಲ್ಲಿಸಿದ ಅರ್ಜಿಯ ವಿರುದ್ಧ ಸೂಕ್ತವಾದ ಆಕ್ಷೇಪಣೆಗಳನ್ನು ಸಲ್ಲಿಸಲು ಕೌಟುಂಬಿಕ ನ್ಯಾಯಾಲಯವು ಸಾಕಷ್ಟು ಅವಕಾಶ ಒದಗಿಸಿಲ್ಲ. ಅಲ್ಲದೆ ಪ್ರತಿವಾದಿಗಳ ಬೇಡಿಕೆಯಂತೆ ಅವರಿಗೆ ಜೀವನಾಂಶ ಪಾವತಿಸಲು ತಾನು ಅಸಾಹಾಯಕನಾಗಿರುವುದಾಗಿ ಪೀಠದ ಮುಂದೆ ವಿವರಿಸಿದರು.
ಇದಕ್ಕೆ ಪುತ್ರಿಯ ಪರ ವಕೀಲರು ವಾದ ಮಂಡಿಸಿ, ಕೌಟುಂಬಿಕ ನ್ಯಾಯಾಲಯದ ಆದೇಶದಂತೆ ಅರ್ಜಿದಾರ (ತಂದೆ) ಮಕ್ಕಳನ್ನು ಸರಿಯಾಗಿ ನೋಡಿಕೊಳ್ಳುತ್ತಿಲ್ಲ. ಜೀವನಾಂಶವನ್ನೂ ನೀಡುತ್ತಿಲ್ಲ, ಇದರಿಂದ ಅವರಿಗೆ ಬದುಕು ಸಾಗಿಸುವುದು ಕಷ್ಟವಾಗುತ್ತಿದೆ ಎಂದರು.
ಇದನ್ನೂ ಓದಿ:ಪತ್ನಿಯ ಅಕ್ರಮ ಸಂಬಂಧಕ್ಕೆ ಬೇಸತ್ತು ಪತಿ ಆತ್ಮಹತ್ಯೆ: ಹೆಂಡತಿಯನ್ನು ಶಿಕ್ಷೆಗೆ ಗುರಿಪಡಿಸಲಾಗದು - ಹೈಕೋರ್ಟ್