ಬೆಳಗಾವಿ: ಗರ್ಭಿಣಿಯರು ಮತ್ತು ಬಾಣಂತಿಯರನ್ನೇ ಗುರಿಯಾಗಿಸಿಕೊಂಡು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಯೋಜನೆ ಹೆಸರಲ್ಲಿ ಸೈಬರ್ ವಂಚನೆ ಪ್ರಕರಣಗಳು ಬೆಳಗಾವಿಯಲ್ಲಿ ಬೆಳಕಿಗೆ ಬಂದಿರುವುದು ಆತಂಕ ಸೃಷ್ಟಿಸಿದೆ.
ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಮಾತೃ ವಂದನಾ ಯೋಜನೆ(ಪೋಷಣ ಅಭಿಯಾನ) ಹೆಸರನ್ನು ಬಳಸಿ ಬಾಣಂತಿಯರಿಗೆ ವಂಚಿಸಿದ ಕುರಿತು ಇಲ್ಲಿನ ಸೈಬರ್ ಠಾಣೆಯಲ್ಲಿ ದೂರುಗಳು ದಾಖಲಾಗಿವೆ. 'ಪೋಷಣ ಅಭಿಯಾನ ಯೋಜನೆಯಡಿಯಲ್ಲಿ ನಿಮ್ಮ ಖಾತೆ ಹಣ ಬರುತ್ತದೆ ಎಂದು ಬಾಣಂತಿಯರಿಗೆ ಕರೆ ಮಾಡುತ್ತಾರೆ. ಬಳಿಕ ಅವರ ಗೂಗಲ್ ಪೇ ಮತ್ತು ವಾಟ್ಸಾಪ್‌ಗೆ ಒಂದು ಲಿಂಕ್ ಕಳಿಸಿ, ಅದರ ಮೇಲೆ ಕ್ಲಿಕ್ ಮಾಡಿ, ಒಟಿಪಿ ಹೇಳಿ ಅಂತಾ ಸೂಚಿಸುತ್ತಾರೆ. ಲಿಂಕ್ ಕ್ಲಿಕ್ ಮಾಡಿ ಒಟಿಪಿ ಹೇಳುತ್ತಿದ್ದಂತೆ ಬಾಣಂತಿಯರ ಖಾತೆಯಲ್ಲಿನ ಎಲ್ಲಾ ಹಣ ಆ ಖದೀಮರ ಪಾಲಾಗಿದೆ' ಎಂದು ದೂರಿನಲ್ಲಿ ತಿಳಿಸಿದ್ದಾರೆ. ಕಳೆದ ಎರಡು ದಿನಗಳಲ್ಲಿ ಬೆಳಗಾವಿ ಸಿಇಎನ್ ಠಾಣೆಗೆ ಐವರು ಬಾಣಂತಿಯರು ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಸಿಇಎನ್ ಪೊಲೀಸರು ಆರೋಪಿಗಳ ಪತ್ತೆಗೆ ಜಾಲ ಬೀಸಿದ್ದಾರೆ.
ಮಾಧ್ಯಮಗಳ ಜೊತೆಗೆ ಮಾತನಾಡಿರುವ ನಗರ ಪೊಲೀಸ್ ಆಯುಕ್ತ ಯಡಾ ಮಾರ್ಟಿನ್ ಮಾರ್ಬನ್ಯಾಂಗ್, ಐವರು ಮಹಿಳೆಯರು ಒಟ್ಟು 82,080 ರೂ. ಹಣವನ್ನು ಕಳೆದುಕೊಂಡಿದ್ದಾರೆ. ಇನ್ನು ಇತ್ತಿಚಿಗೆ ಹೆರಿಗೆ ಆಗಿರುವ ಬಡತನ ರೇಖೆಗಿಂತ ಕೆಳಗಿರುವ ಮಹಿಳೆಯರ ವಿವರವನ್ನು ಕಲೆ ಹಾಕಿರುವ ಆರೋಪಿಗಳು, ಈ ರೀತಿಯ ಕೃತ್ಯ ಎಸಗಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು, ಆರೋಪಿಗಳಿಗೆ ಬಾಣಂತಿಯರ ಹೆಸರು, ಮೊಬೈಲ್ ನಂಬರ್ ಹೇಗೆ ಸಿಕ್ಕಿತು? ಯಾರು ಕೊಟ್ಟಿದ್ದಾರೆ ಎಂಬ ಕುರಿತು ಹೆಚ್ಚಿನ ವಿಚಾರಣೆ ಮಾಡುತ್ತೇವೆ ಎಂದು ಹೇಳಿದರು.