ಕರ್ನಾಟಕ

karnataka

ETV Bharat / state

ಮುಡಾ ಹಗರಣ ಚರ್ಚೆಗೆ ಸದನದಲ್ಲಿ ಸಿಗದ ಅವಕಾಶ: ಸಿ ಟಿ ರವಿ ಹೇಳಿದ್ದಿಷ್ಟು - Muda Scam - MUDA SCAM

ಮುಡಾ ಹಗರಣ ಚರ್ಚೆಗೆ ಸದನದಲ್ಲಿ ಅವಕಾಶ ಸಿಗದಿರಬಹುದು. ಆದರೆ, ಇದನ್ನು ಜನರ ಬಳಿ ತೆಗೆದುಕೊಂಡು ಹೋಗುತ್ತೇವೆ. ನಮ್ಮ ಪಕ್ಷದ ಅಧ್ಯಕ್ಷರ ಜೊತೆ ಚರ್ಚೆ ಮಾಡುತ್ತೇವೆ ಎಂದು ವಿಧಾನ ಪರಿಷತ್ ಸದಸ್ಯ ಸಿ ಟಿ ರವಿ ತಿಳಿಸಿದರು.

CT RAVI REACTS ON MUDA SCAM
ಸಿಟಿ ರವಿ (ETV Bharat)

By ETV Bharat Karnataka Team

Published : Jul 24, 2024, 7:52 PM IST

ಬೆಂಗಳೂರು: ಮುಡಾ ಹಗರಣ ಪ್ರಕರಣದಲ್ಲಿ ಸಿಎಂ ರಾಜೀನಾಮೆ ನೀಡಬೇಕು. ಹಾಲಿ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ತನಿಖೆಯಾಗಬೇಕು ಎನ್ನುವ ಆಗ್ರಹದೊಂದಿಗೆ ಪಾದಯಾತ್ರೆ, ಅಹೋರಾತ್ರಿ ಧರಣಿ ಸೇರಿದಂತೆ ಯಾವ ರೀತಿ ಮುಂದಿನ ಹೋರಾಟ ನಡೆಸಬೇಕು ಎನ್ನುವ ಕುರಿತು ಪಕ್ಷದಲ್ಲಿ ಚರ್ಚಿಸಿ ನಿರ್ಧಾರ ಕೈಗೊಳ್ಳಲಿದ್ದೇವೆ. ಈ ಮೂಲಕ ಪ್ರಕರಣವನ್ನು ತಾರ್ತಿಕ ಅಂತ್ಯಕ್ಕೆ ಕೊಂಡೊಯ್ಯಲಿದ್ದೇವೆ ಎಂದು ವಿಧಾನ ಪರಿಷತ್ ಸದಸ್ಯ ಸಿಟಿ ರವಿ ತಿಳಿಸಿದ್ದಾರೆ.

ವಿಧಾನಸೌಧದ ಬಿಜೆಪಿ ಕಚೇರಿಯಲ್ಲಿ ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, ಎರಡೂ ಸದನಗಳಲ್ಲಿ ಮೈಸೂರು ಮುಡಾ ಹಗರಣ ಚರ್ಚೆ ನಡೆಸಲು ಬಿಜೆಪಿ ನಿಲುವಳಿ ಸೂಚನೆ ಮಂಡಿಸಲು ಪ್ರತಿಪಕ್ಷದ ನಾಯಕರನ್ನು ಕೇಳಲಾಗಿತ್ತು. ಎರಡೂ ಕಡೆ ನಿಲುವಳಿ ಸೂಚನೆ ತಿರಸ್ಕಾರ ಮಾಡಿದ್ದಾರೆ. ಸ್ಪೀಕರ್, ಸಭಾಪತಿ ಪೀಠಕ್ಕೆ ಗೌರವ ಕೊಡುತ್ತಲೇ ಹಗರಣ ನಷ್ಟ ಸರ್ಕಾರದ ಬೊಕ್ಕಸಕ್ಕೆ ಬರಬೇಕು ಎನ್ನುವ ಕಾರಣಕ್ಕೆ ಕೆಲ ವಿಷಯ ಪ್ರಸ್ತಾಪಿಸಲಾಗಿದೆ. ರೀಡೂ ಪಿತಾಮಹ ಸಿದ್ದರಾಮಯ್ಯ ಅವರು. ರೀಡೂ ಅನ್ನೋ ಹೊಸ ಪದ ಸೃಷ್ಟಿ ಮಾಡಿ 870 ಎಕರೆ ನಿವೇಶನ ಹಂಚಿಕೆ ಮಾಡಿದ್ದಾರೆ. ಅರ್ಕಾವತಿಯಲ್ಲಿ ಒಂದೇ ಒಂದು ಗುಂಟೆ ಡಿನೋಟಿಫಿಕೇಷನ್ ಆಗಿಲ್ಲ ಅಂದರು. ಕೆಂಪಣ್ಣ ಆಯೋಗ ರಚನೆ ಮಾಡಿದರು. ನೀವು ಕ್ಲೀನ್ ಇಮೇಜ್ ಇರುವವರು ಅಲ್ವಾ? ಕೆಂಪಣ್ಣ ಆಯೋಗದ ವರದಿ ಟೇಬಲ್ ಮಾಡಿ. ರೀಡೂ ಹೆಸರಲ್ಲಿ ಡಿನೋಟಿಫಿಕೇಷನ್ ಮಾಡಿದ್ದಾರೆ. ಇದರಲ್ಲಿ ಸಾವಿರಾರು ಕೋಟಿ ರೂ. ಹಗರಣಕ್ಕೆ ಕಾರಣ ಆಗಿದೆ. ನಿಮ್ಮ ವಿರುದ್ಧ ನೀವೇ ಮಾಡಿಕೊಳ್ಳುವ ಕಮೀಷನ್ ಯಾವ ತನಿಖೆ ಮಾಡುತ್ತದೆ? ನೈತಿಕ ಹೊಣೆ ಹೊತ್ತು ರಾಜೀನಾಮೆ ಕೊಡಬೇಕು. ಸಿಬಿಐ ತನಿಖೆ ನಡೆಸಬೇಕು. ಕೆಂಪಣ್ಣ ಆಯೋಗ ವರದಿ ಕಸದ ಬುಟ್ಟಿ ಸೇರಿದೆ. ದೇಸಾಯಿ ಆಯೋಗ ಕೂಡ ನಿಮ್ಮ ರಕ್ಷಣೆಗೆ ಮಾಡಿಕೊಂಡಿದ್ದೀರಿ. ನಿಮ್ಮ ರಕ್ಷಣೆಗೆ ನಮ್ಮ ತೆರಿಗೆ ಹಣ ಏಕೆ ಬೇಕು? ಹಾಗಾಗಿ ನೀವು ರಾಜೀನಾಮೆ ಕೊಡಿ. ಹಾಲಿ ನ್ಯಾಯಾಧೀಶರು ತನಿಖೆ ಮಾಡಲಿ ಎಂದು ಒತ್ತಾಯಿಸಿದರು.

ಸದನದಲ್ಲಿ ಚರ್ಚೆಗೆ ಅವಕಾಶ ಸಿಗದಿರಬಹುದು. ಆದರೆ, ಇದನ್ನು ಜನರ ಬಳಿ ತೆಗೆದುಕೊಂಡು ಹೋಗುತ್ತೇವೆ. ನಮ್ಮ ಪಕ್ಷದ ಅಧ್ಯಕ್ಷರ ಜೊತೆ ಚರ್ಚೆ ಮಾಡುತ್ತೇವೆ. ಪಾದಯಾತ್ರೆ, ಅಹೋರಾತ್ರಿ ಧರಣಿ ಸೇರಿದಂತೆ ಯಾವ ರೀತಿಯ ಹೋರಾಟ ನಡೆಸಬೇಕು ಎನ್ನುವ ಕುರಿತು ನಿರ್ಧಾರ ಮಾಡುತ್ತೇವೆ ಎಂದರು.

ನಮ್ಮ ಕಾಲದಲ್ಲಿ ಕೆಂಪಣ್ಣ ಆಯೋಗ ವರದಿ ಟೇಬಲ್ ಮಾಡಲಿಲ್ಲ. ನಮ್ಮಿಂದ ತಪ್ಪಾಗಿದೆ. ಅದಕ್ಕೆ ನಾವು ಅಧಿಕಾರ ಕಳೆದುಕೊಂಡಿದ್ದೇವೆ. ನನ್ನ ಬಳಿ ಕೆಂಪಣ್ಣ ಆಯೋಗ ವರದಿಯ ಪ್ರಮುಖಾಂಶ ಇದೆ. ಮುಡಾದಲ್ಲಿ ಯಾವುದೇ ಪಕ್ಷದವರು ಇದ್ರೂ ತನಿಖೆ ಮಾಡಲಿ ಎಂದರು.

ಸಿಎಂ ಪತ್ನಿ ಯಾವ ಕ್ರೀಡಾ ಸಾಧಕಿ, ಸಿದ್ದರಾಮಯ್ಯ ಯಾವ ವಾರ್ ಮಾಡಿದ್ದಾರೆ?;2017ರಲ್ಲಿ ವರುಣ ಕ್ಷೇತ್ರದ ಶಾಸಕರಾಗಿದ್ದಾಗ ಸಿದ್ದರಾಮಯ್ಯ ಅವರ ಪುತ್ರ ಯತೀಂದ್ರ ಅವರು ಮುಡಾ ಸಭೆಯಲ್ಲಿ ಭಾಗಿಯಾಗಿದ್ದಾರೆ. ಅಲ್ಲೇ ಈ ನಿರ್ಧಾರ ತೆಗೆದುಕೊಳ್ತಾರೆ. 2020ರಲ್ಲಿ ಬಿಜೆಪಿ ಸರ್ಕಾರ ಇತ್ತು. ಸರ್ಕಾರಕ್ಕೆ ಅನುಮೋದನೆಯನ್ನು ಕೊಡದೇ ಸಿದ್ದರಾಮಯ್ಯ ಕುಟುಂಬಕ್ಕೆ 50:50 ರೇಶಿಯೋ ಅಡಿಯಲ್ಲಿ ಸೈಟ್ ಪಡೀತಾರೆ. ಇಂದಿಗೂ ಕೂಡ ದೇವನೂರು ಬಡಾವಣೆಯಲ್ಲಿ 700ಕ್ಕೂ ಅಧಿಕ ಸೈಟುಗಳು ಖಾಲಿ ಇವೆ. ಅಲ್ಲಿ ಕೊಡದಿರೋದು ದೊಡ್ಡ ತಪ್ಪು. 14 ಸೈಟುಗಳನ್ನ ಇವರಿಗೆ ನೀಡಿದ್ದಾರೆ. ಕೆಟಿಸಿ ಆ್ಯಕ್ಟ್ ಪ್ರಕಾರ ಬಿಡಿ ನಿವೇಶನ ಕೊಡಬೇಕಾದ್ರೆ 75% ಹರಾಜು ಪ್ರಕ್ರಿಯೆಯಲ್ಲಿ, 25% ಸಾಧಕರಿಗೆ ಕೊಡಬೇಕು ಅಂತಿದೆ. 25% ಕೊಡುವಾಗ ಮೃತ ಸೈನಿಕರ ಪತ್ನಿಯರಿಗೆ, ಕ್ರೀಡಾ ಸಾಧಕರಿಗೆ ಕೊಡಬೇಕು. ಆದರೆ, ನನಗೆ ಗೊತ್ತಿಲ್ಲ.. ಪಾರ್ವತಿ ಸಿದ್ದರಾಮಯ್ಯ ಅವರು ಯಾವ ಕ್ರೀಡೆಯಲ್ಲಿ ಸಾಧನೆ ಮಾಡಿದ್ದಾರೆ. ಸಿದ್ದರಾಮಯ್ಯ ಅವರು ಯಾವ ವಾರ್ ಮೆಮೋರಿಯಲ್‌ನಲ್ಲಿ ಯುದ್ಧ ಮಾಡಿದ್ದಾರೆ? ಎಂದು ಸಿ ಟಿ ರವಿ ಪ್ರಶ್ನಿಸಿದರು.

ಇದನ್ನೂ ಓದಿ:ಮುಡಾ ಹಗರಣದ ಚರ್ಚೆಗೆ ಆಗ್ರಹ: ವಿಧಾನಸಭೆಯಲ್ಲಿ ಅಹೋರಾತ್ರಿ ಧರಣಿಗೆ ಬಿಜೆಪಿ, ಜೆಡಿಎಸ್ ನಿರ್ಧಾರ - Night Protest

ABOUT THE AUTHOR

...view details