ಬೆಂಗಳೂರು :ಉದ್ಯೋಗ ಅರಸುತ್ತಿರುವ ಯುವಕರಿಗೆ ಸರ್ಕಾರಿ ಸ್ವಾಮ್ಯದ ಪ್ರತಿಷ್ಠಿತ ಸಂಸ್ಥೆಯಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ, ಲಕ್ಷಾಂತರ ರೂಪಾಯಿ ಹಣ ಪಡೆದು ವಂಚಿಸಿದ್ದ ದಂಪತಿಯನ್ನು ವಿದ್ಯಾರಣ್ಯಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಪ್ರಕಾಶ್ ಹಾಗೂ ಮಧು ಪ್ರಕಾಶ್ ಬಂಧಿತ ದಂಪತಿಯಾಗಿದ್ದಾರೆ.
ಆರೋಪಿಗಳು ಕೆಲಸದ ಹುಡುಕಾಟದಲ್ಲಿರುವ ಯುವಕರನ್ನು ಪರಿಚಯ ಮಾಡಿಕೊಂಡು 'ತಮಗೆ ದೊಡ್ಡ ದೊಡ್ಡ ವ್ಯಕ್ತಿಗಳು, ವಿವಿಧ ಇಲಾಖೆಗಳ ಮುಖ್ಯಸ್ಥರು ಪರಿಚಯವಿದ್ದು, ಅವರ ಕಡೆಯಿಂದ ಖಾಲಿ ಇರುವ ಹುದ್ದೆಗಳನ್ನು ಕೊಡಿಸುತ್ತೇವೆ' ಎಂದು ನಂಬಿಸಿ, ಅವರಿಂದ ಹಣವನ್ನು ಪಡೆದುಕೊಳ್ಳುತ್ತಿದ್ದರು. ಆದರೆ, ಬಳಿಕ ಯಾವುದೇ ಕೆಲಸ ಕೊಡಿಸದೇ ವಂಚಿಸುತ್ತಿದ್ದರು. ಸರ್ಕಾರಿ ಸ್ವಾಮ್ಯದ ಪ್ರತಿಷ್ಠಿತ ಸಂಸ್ಥೆಯೊಂದರಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ, 6 ಲಕ್ಷ ರೂಪಾಯಿ ಹಣವನ್ನು ಪಡೆದುಕೊಂಡಿದ್ದರು. ತದನಂತರ ಕೆಲಸವನ್ನೂ ಕೊಡಿಸದೇ, ಹಣವನ್ನೂ ಹಿಂದಿರುಗಿಸದೇ ಮೋಸ ಮಾಡಿದ್ದ ಆರೋಪಿಗಳ ವಿರುದ್ಧ ವಿದ್ಯಾರಣ್ಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣಗಳ ತನಿಖೆ ಕೈಗೆತ್ತಿಕೊಂಡ ವಿದ್ಯಾರಣ್ಯಪುರ ಠಾಣೆ ಪೊಲೀಸರ ವಿಶೇಷ ತಂಡ, ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ಆರೋಪಿಗಳ ಬಂಧನದಿಂದ ವಿದ್ಯಾರಣ್ಯಪುರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ 3 ವಂಚನೆ ಪ್ರಕರಣಗಳು ಪತ್ತೆಯಾಗಿದ್ದು, ಇವರ ವಿರುದ್ಧ ಬೆಂಗಳೂರು ನಗರದಾದ್ಯಂತ ಹಲವಾರು ಪ್ರಕರಣಗಳು ದಾಖಲಾಗಿರುವುದು ಕಂಡುಬಂದಿದೆ.