ದಕ್ಷಿಣ ಭಾರತದ ಕುಂಭಮೇಳ ಗವಿಮಠ ಜಾತ್ರೆಗೆ ಕ್ಷಣಗಣನೆ ಕೊಪ್ಪಳ : ದಕ್ಷಿಣ ಭಾರತದ ಕುಂಭಮೇಳ ಎಂದೇ ಖ್ಯಾತಿ ಪಡೆದ ಇಲ್ಲಿನ ಪ್ರಸಿದ್ಧ ಗವಿಸಿದ್ಧೇಶ್ವರ ಮಠದ ಜಾತ್ರೆಯ ಮಹಾರಥೋತ್ಸವ ಶನಿವಾರ ಸಂಜೆ 5.30ಕ್ಕೆ ಮಠದ ಆವರಣದಲ್ಲಿ ನಡೆಯಲಿದ್ದು, ಕ್ಷಣಗಣನೆ ಶುರುವಾಗಿದೆ.
ಜಾತ್ರಾ ಮಹೋತ್ಸವದ ಅಂಗವಾಗಿ ಗವಿಮಠದ ಗುಹೆಯಲ್ಲಿರುವ 11ನೇ ಪೀಠಾಧಿಪತಿ ಲಿಂಗೈಕ್ಯ ಗವಿಸಿದ್ಧೇಶ್ವರ ಸ್ವಾಮೀಜಿಯ ಗದ್ದುಗೆಗೆ ಬೆಳಗಿನ ಜಾವವೇ ವಿಶೇಷ ಪೂಜೆ ನಡೆಯಿತು. ಹೂವು, ಬಿಲ್ವಪತ್ರೆಯಿಂದ ಅಲಂಕಾರ ಮಾಡಲಾಗಿದೆ. ಲಕ್ಷಾಂತರ ಭಕ್ತರು ಸೇರುವ ನಿರೀಕ್ಷೆಯಿದೆ. ಬೆಳಗಿನ ಜಾವದಿಂದಲೇ ಭಕ್ತರು ಮಠದತ್ತ ಬರುತ್ತಿದ್ದಾರೆ. ಸುತ್ತಮುತ್ತಲ ಗ್ರಾಮದ ಭಕ್ತರು ಪಾದಯಾತ್ರೆ ಮೂಲಕ ಆಗಮಿಸುತ್ತಿದ್ದಾರೆ.
ಸುತ್ತೂರು ಶ್ರೀಗಳಿಂದ ಮಹಾರಥೋತ್ಸವಕ್ಕೆ ಚಾಲನೆ :ಇಂದುಸಂಜೆ 5:30 ಕ್ಕೆ ನಡೆಯುವ ಮಹಾರಥೋತ್ಸವಕ್ಕೆ ಮೈಸೂರಿನ ಸುತ್ತೂರು ಕ್ಷೇತ್ರದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಚಾಲನೆ ನೀಡಲಿದ್ದಾರೆ. ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್, ನಿವೃತ್ತ ಐಎಎಸ್ ಅಧಿಕಾರಿ ಚಿರಂಜೀವಿ ಸಿಂಘ್, ಇಸ್ರೋ ಚಂದ್ರಯಾನ್–3 ಯೋಜನಾ ನಿರ್ದೇಶಕ ಪಿ. ವೀರಮುತ್ತುವೇಲ್ ಹಾಗೂ ಅದಮ್ಯ ಚೇತನ ಫೌಂಡೇಷನ್ ಅಧ್ಯಕ್ಷೆ ತೇಜಸ್ವಿನಿ ಅನಂತಕುಮಾರ್ ಸೇರಿದಂತೆ ಇನ್ನಿತರರು ಪಾಲ್ಗೊಳ್ಳಲಿದ್ದಾರೆ.
ರಂಗೋಲಿಯೊಂದಿಗೆ ಜನಜಾಗೃತಿ :ಮಹಾರಥೋತ್ಸವಕ್ಕೆ ರಥ ಬೀದಿಯಲ್ಲಿ ಮಹಿಳೆಯರಿಂದ ವಿವಿಧ ಬಗೆಯ ರಂಗೋಲಿ ಹಾಕಲಾಗಿದೆ. ಸುಮಾರು 50ಕ್ಕೂ ಅಧಿಕ ರಂಗೋಲಿ ಹಾಕಲಾಗಿದ್ದು, ಅದರಲ್ಲಿ ಅಯೋಧ್ಯೆ ರಾಮಮಂದಿರ, ನಾರಿಶಕ್ತಿ, ಕಾಯಕದೇವೊ ಭವ ರಂಗೋಲಿ ಕಂಗೊಳಿಸುತ್ತಿವೆ. ಜೊತೆಗೆ ನಾರಿ ಶಕ್ತಿ, ಕಾಯಕ ಕುರಿತ ಜಾಗೃತಿ ರಂಗೋಲಿಯಲ್ಲಿ ಮೂಡಿರುವುದು ನೋಡುಗರನ್ನು ಆಕರ್ಷಿಸುತ್ತಿದೆ. ಮಠಕ್ಕೆ ಬಂದ ಭಕ್ತರು ರಂಗೋಲಿ ನೋಡಿ ಖುಷಿ ಆಗಿದ್ದಾರೆ.
ದಾಸೋಹ ಸೇವೆ :ಜಾತ್ರಾ ಮಹಾದಾಸೋಹ ಕಳೆದ ನಾಲ್ಕು ದಿನದಿಂದಲೇ ಆರಂಭವಾಗಿದೆ. ಜಾತ್ರೆಯ ಅಂಗವಾಗಿ 6 ಎಕರೆ ಪ್ರದೇಶದಲ್ಲಿ ಸುಮಾರು 1000 ಭಕ್ತಾದಿಗಳಿಗೆ ಏಕಕಾಲದಲ್ಲಿ ಪ್ರಸಾದ ಸೇವಿಸಲು ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಸತತ ಒಂದು ತಿಂಗಳ ಕಾಲ ಜಾತ್ರೆಗೆ ಬಂದವರಿಗೆ ಪ್ರಸಾದ ವ್ಯವಸ್ಥೆ ಇರಲಿದೆ.
10 ಲಕ್ಷ ರೊಟ್ಟಿ ಸಂಗ್ರಹ :ಗವಿಸಿದ್ಧೇಶ್ವರ ಜಾತ್ರೆಯಲ್ಲಿನ ಪ್ರಸಾದ ಮೆಚ್ಚಿ ಕೆಲವರು ಇದನ್ನು ರೊಟ್ಟಿ ಜಾತ್ರೆಯೆಂದು ಬಣ್ಣಿಸಿದ್ದಾರೆ. ಬೃಹದಾಕಾರದ 45X50 ವಿಸ್ತೀರ್ಣದ ಎರಡು ಕೋಣೆಗಳನ್ನು ರೊಟ್ಟಿ ಸಂಗ್ರಹಕ್ಕಾಗಿಯೇ ನಿರ್ಮಿಸಲಾಗಿದೆ. ಈಗಾಗಲೇ ಐದು ಲಕ್ಷಕ್ಕೂ ಹೆಚ್ಚು ರೊಟ್ಟಿಗಳು ಸಂಗ್ರಹವಾಗಿವೆ. ಜಾತ್ರೆ ಮುಗಿಯುವುದರೊಳಗೆ ಸುಮಾರು 10 ಲಕ್ಷ ರೊಟ್ಟಿಗಳು ಸಂಗ್ರಹವಾಗುವ ನಿರೀಕ್ಷೆ ಇದೆ. ಅಲ್ಲದೆ ಸಿಹಿ ಪದಾರ್ಥವಾದ ಮಾದಲಿ ಇಲ್ಲಿನ ವಿಶೇಷ ತಿನಿಸಾಗಿದೆ. ಅಲ್ಲದೆ ಎಳ್ಳು ಮತ್ತು ಶೇಂಗಾ ಹೋಳಿಗೆಗಳನ್ನ ಲಕ್ಷ ಲಕ್ಷ ಸಂಖ್ಯೆಯಲ್ಲಿ ತಯಾರಿಸಿ ಭಕ್ತರು ಶ್ರೀ ಮಠಕ್ಕೆ ಅರ್ಪಿಸುತ್ತಿದ್ದಾರೆ. ಅಲ್ಲದೇ ಅನ್ನ, ಸಾಂಬಾರ್ ಜೊತೆಗೆ ಶೇಂಗಾ ಚಟ್ನಿ, ಗುರಳ್ಳ ಚಟ್ನಿ, ಅಗಸಿ ಪುಡಿ ಚಟ್ನಿ, ಉಪ್ಪಿನಕಾಯಿ, ತುಪ್ಪ, ಹಾಲು, ಮಿರ್ಚಿ ಮುಂತಾದ ಪದಾರ್ಥಗಳನ್ನು ಇಲ್ಲಿ ಉಣಬಡಿಸಲಾಗುತ್ತದೆ.
ಪ್ರತಿ ವರ್ಷ ಅಜ್ಜನ ಜಾತ್ರೆ ಬರುವುದಕ್ಕೆ ತುಂಬ ಖುಷಿಯಾಗುತ್ತದೆ. ವಿಶೇಷವಾಗಿರುವ ವಿಷಯದ ಥೀಮ್ ಅನ್ನು ರಂಗೋಲಿಯಲ್ಲಿ ಬಿಡಿಸುತ್ತಾರೆ. ಕಳೆದ ವರ್ಷ ಕಾಂತಾರ ಸಿನಿಮಾ ರಂಗೋಲಿ ಹಾಕಿದ್ದರು. ಈ ವರ್ಷ ಸ್ತ್ರೀ ಶಕ್ತಿ, ರಾಮ ಮಂದಿರ ಥೀಮ್ ಇರುವ ರಂಗೋಲಿ ಹಾಕಿದ್ದಾರೆ. ಮೂರು ದಿನಗಳ ಕಾಲ ಯುವ ಜನತೆಗಾಗಿ ಸಾಧಕರ ವೇದಿಕೆ ಎಂಬ ಕಾರ್ಯಕ್ರಮವನ್ನು ನಡೆಸಲಾಗುತ್ತದೆ ಎಂದು ಗವಿಮಠದ ಭಕ್ತೆ ಸ್ಪೂರ್ತಿ ಎಂಬುವರು ಹೇಳಿದರು.
ಜಿಲ್ಲೆ ಹಾಗೂ ನೆರೆಜಿಲ್ಲೆಗಳ ಭಕ್ತರು ಚಕ್ಕಡಿ, ಟ್ರ್ಯಾಕ್ಟರ್‌ಗಳಲ್ಲಿ ಬಂದು ಗವಿಮಠದ ದರ್ಶನ ಪಡೆಯುತ್ತಿದ್ದಾರೆ. ದಾಸೋಹಕ್ಕೆ ಬೇಕಾದ ಎಲ್ಲಾ ಸಾಮಗ್ರಿಗಳನ್ನು ಭಕ್ತರು ನೀಡುತ್ತಾರೆ. ಈಗಾಗಲೇ ರೊಟ್ಟಿ, ಕಟ್ಟಿಗೆ ಮತ್ತು ಸಿಹಿ ತಿಂಡಿಗಳು ಸಂಗ್ರಹಣೆಯಾಗಿವೆ. ಇನ್ನು ಇವತ್ತು ಆನೇಕ ಸಾಮಗ್ರಿಗಳು ಶ್ರೀಮಠ ತಲುವಲಿವೆ ಎಂದು ದಾಸೋಹ ಉಸ್ತುವಾರಿ ರಾಮನಗೌಡ ಎಂಬುವರು ಮಾಹಿತಿ ನೀಡಿದರು.
ಇದನ್ನೂ ಓದಿ :ಚಿಕ್ಕಲ್ಲೂರು ಜಾತ್ರೆ ಆರಂಭ: ಉತ್ತರಕ್ಕೆ ವಾಲಿದ ಚಂದ್ರಮಂಡಲ