ಮೈಸೂರು:''ರಾಮಲಲ್ಲಾ ಮೂರ್ತಿ ಕೆತ್ತನೆಗೆ ಶಿಲೆ ದೊರೆತಿರುವ ಜಾಗದಲ್ಲೇ ರಾಮ ಮಂದಿರವನ್ನು ನಿರ್ಮಾಣ ಮಾಡಲಾಗುವುದು ಹಾಗೂ ಇದಕ್ಕಾಗಿ ಜನವರಿ 22 ರಂದು ಭೂಮಿ ಪೂಜೆ ನೆರವೇರಿಸಲಾಗುವುದು'' ಎಂದು ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ. ದೇವೇಗೌಡ ಹೇಳಿದರು.
ಮೈಸೂರಿನ ಜಲದರ್ಶಿನಿ ಅತಿಥಿ ಗೃಹದಲ್ಲಿ ಏರ್ಪಡಿಸಿದ್ದ ಇಂದು (ಶನಿವಾರ) ಸುದ್ದಿಗೋಷ್ಠಿಯಲ್ಲಿ ಹೇಳಿಕೆ ನೀಡಿದ ಅವರು, ''ಅಯೋಧ್ಯೆಯ ರಾಮ ಮಂದಿರದ ಗರ್ಭಗುಡಿ ಸೇರಲಿರುವ ಬಾಲ ರಾಮನ ಮೂರ್ತಿಯ ಕೆತ್ತನೆಗೆ ಶಿಲೆ ಸಿಕ್ಕ ಸ್ಥಳದಲ್ಲೇ ಮಂದಿರ ನಿರ್ಮಿಸಲಾಗುವುದು. ಜನವರಿ 22ರಂದು ಮಂದಿರ ನಿರ್ಮಾಣಕ್ಕೆ ಭೂಮಿಪೂಜೆ ಮಾಡಲಾಗುತ್ತದೆ. ಎಲ್ಲ ಜನರಿಂದ ದೇಣಿಗೆ ಸಂಗ್ರಹ ಮಾಡಿ ಮಂದಿರ ನಿರ್ಮಾಣ ಮಾಡುತ್ತೇವೆ'' ಎಂದು ಶಾಸಕ ಜಿಟಿ ದೇವೇಗೌಡ ತಿಳಿಸಿದರು.
''ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಆಗಿದೆ. ದೇಶದ ಜನರು ಬಾಲರಾಮನ ವಿಗ್ರಹವನ್ನು ನೋಡಲು ಕಾಯುತ್ತಿದ್ದಾರೆ. ಮೈಸೂರು ತಾಲೂಕು ಚಾಮುಂಡೇಶ್ವರಿ ಕ್ಷೇತ್ರ ವ್ಯಾಪ್ತಿಯ ಹಾರೋಹಳ್ಳಿಯ ದಲಿತ ಸಮುದಾಯದ ಮುಖಂಡರಾದ ರಾಮದಾಸ್ ಜಮೀನಿನಲ್ಲಿ ಕೃಷ್ಣ ಶಿಲೆ ಸಿಕ್ಕಿರುವುದು ನಮಗೆಲ್ಲ ತುಂಬಾ ಸಂತೋಷ ಆಗಿದೆ. ಅಯೋಧ್ಯೆಯಲ್ಲಿ ಪ್ರತಿಷ್ಠಾಪನೆ ಮಾಡಲಾಗಿರುವ ರಾಮಲಲ್ಲಾ ವಿಗ್ರಹ ನಮ್ಮ ದಲಿತ ಬಾಂಧವರ ಜಮೀನಿನಲ್ಲಿ ಮೂಡಿ ಬಂದಿರುವ ಶಿಲೆ. ಈ ಶಿಲೆಯನ್ನು ಕೆತ್ತನೆ ಮಾಡಿರುವವರು ನಮ್ಮ ಮೈಸೂರಿನವರು. ಕೃಷ್ಣ ಶಿಲೆಯನ್ನು ಹುಡುಕಿದ್ದ ಶ್ರೀನಿವಾಸ್ ಕೂಡ ನಮ್ಮ ಮೈಸೂರಿನವರು'' ಎಂದು ಮಾಹಿತಿ ನೀಡಿದರು.
''ಪ್ರಧಾನಿ ನರೇಂದ್ರ ಮೋದಿ ಅವರು ಮೈಸೂರಿಗೆ ಬಂದಿದ್ದ ವೇಳೆ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ಪ್ರಾರ್ಥನೆ ಮಾಡಿದ್ದರು. ಈಗ ಅದೇ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ರಾಮಲಲ್ಲಾ ಮೂರ್ತಿಯ ಶಿಲೆ ಸಿಕ್ಕಿದೆ. ಜನವರಿ 22 ರಂದು ಅಯೋಧ್ಯೆಯಲ್ಲಿ ಬಾಲ ರಾಮನ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ನಡೆಯಲಿದೆ. ಇದೇ ವೇಳೆ, ಕೃಷ್ಣ ಶಿಲೆ ಸಿಕ್ಕ ಸ್ಥಳದಲ್ಲಿ ವಿಶೇಷ ಪೂಜೆ ನಡೆಯುತ್ತದೆ. ಆ ವಿಶೇಷ ಪೂಜೆಯ ಜೊತೆಗೆ ಮಂದಿರ ನಿರ್ಮಾಣಕ್ಕೆ ಭೂಮಿ ಪೂಜೆ ಸಹ ನಡೆಸಲಾಗುವುದು. ಪ್ರಧಾನಿ ನರೇಂದ್ರ ಮೋದಿ ಅವರಿಗೆ ನಾವು ಆಭಾರಿಯಾಗಿರುತ್ತೇನೆ'' ಎಂದು ಶಾಸಕ ಜಿ ಟಿ. ದೇವೇಗೌಡ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಇದನ್ನೂ ಓದಿ:ಶ್ರೀರಾಮ ಮಂದಿರ ಹೋರಾಟದ ವೇಳೆ ದೇವರ ಹುಬ್ಬಳ್ಳಿಯಲ್ಲಿ ನಿರ್ಮಾಣವಾಗಿತ್ತು ಭಾರತ ಮಾತಾ ದೇಗುಲ