ಕರ್ನಾಟಕ

karnataka

ETV Bharat / state

'ಸರ್ಕಾರ ಸ್ಪಂದಿಸುತ್ತಿಲ್ಲ, ನಾಳೆನೇ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು ಸಿದ್ಧ': ರಾಜು ಕಾಗೆ ಆಕ್ರೋಶ - RAJU KAGE

ಕಳೆದೊಂದು ವರ್ಷದಿಂದ ನನ್ನ ಗೋಳನ್ನು ಸರ್ಕಾರ ಆಲಿಸುತ್ತಿಲ್ಲ ಎಂದು ಶಾಸಕ ರಾಜು ಕಾಗೆ ಬೇಸರ ವ್ಯಕ್ತಪಡಿಸಿದ್ದಾರೆ.

ಕಾಂಗ್ರೆಸ್​ ಶಾಸಕ ರಾಜು ಕಾಗೆ
ಕಾಂಗ್ರೆಸ್​ ಶಾಸಕ ರಾಜು ಕಾಗೆ (ETV Bharat)

By ETV Bharat Karnataka Team

Published : Oct 11, 2024, 6:08 PM IST

Updated : Oct 11, 2024, 6:15 PM IST

ಚಿಕ್ಕೋಡಿ(ಬೆಳಗಾವಿ): ರೈತರ ಪರ ಯಾವುದೇ ಯೋಜನೆಗಳು ಬರ್ತಿಲ್ಲ. ರೈತರು ಬದುಕು ನಡೆಸುವುದು ದುಸ್ತರವಾಗಿದೆ ಎಂದು ತಮ್ಮದೇ ಸರ್ಕಾರದ ವಿರುದ್ಧ ಹರಿಹಾಯ್ದಿರುವ ಕಾಗವಾಡ ಕ್ಷೇತ್ರದ ಕಾಂಗ್ರೆಸ್ ಶಾಸಕ ರಾಜು ಕಾಗೆ, ರಾಜೀನಾಮೆ ನೀಡುವುದಾಗಿ ಎಚ್ಚರಿಕೆ ನೀಡಿದರು.

ಕಾಗವಾಡ ವಿಧಾನಸಭಾ ಕ್ಷೇತ್ರದ ತಾವಂಶಿ ಗ್ರಾಮದಲ್ಲಿಂದು ಮಾತನಾಡಿದ ಅವರು, "ರೈತರು ಒಂದು ವರ್ಷ ಬೆಳೆಗಳನ್ನು ಬೆಳೆಯುವುದನ್ನು ಬಿಟ್ಟರೆ ನೀವೇನು ತಿಂತೀರಿ?. ನಿಮ್ಮ ಬಳಿ ಹಣ, ಬಂಗಾರ ಬೆಳ್ಳಿ ಸಾಕಷ್ಟಿರಬಹುದು. ಅದನ್ನು ತಿಂದು ಬದುಕೋಗಾಗುತ್ತಾ?. ಮೊದಲು ರೈತರನ್ನು ಬದುಕಿಸುವ ಕೆಲಸ ಮಾಡಿ. ರೈತರು ಬದುಕಿದ್ರೆ ಮಾತ್ರ ದೇಶ ಪ್ರಗತಿ ಹೊಂದಲು ಸಾಧ್ಯ" ಎಂದರು.

ಶಾಸಕ ರಾಜು ಕಾಗೆ (ETV Bharat)

"ಕಳೆದ ಒಂದು ವರ್ಷದಿಂದ ನನ್ನ ಗೋಳನ್ನು ಸರ್ಕಾರ ಆಲಿಸುತ್ತಿಲ್ಲ. ಹೀಗೆಯೇ ಪರಿಸ್ಥಿತಿ ಮುಂದುವರಿದರೆ ವಿಧಾನಸೌಧದಲ್ಲೇ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಓರ್ವ ಮಂತ್ರಿಗೆ ಹೇಳಿದೆ. ಆದರೆ ನೀನ್ಯಾಕೆ ಆತ್ಮಹತ್ಯೆ ಮಾಡಿಕೊಳ್ತೀಯಾ, ನಿನ್ನ ಕೆಲಸ ಮಾಡಿಕೊಡ್ತೀವಿ ಅಂತಾ ಮಂತ್ರಿಗಳು ಹೇಳಿದರು" ಎಂದು ಅಸಮಾಧಾನ ಹೊರಹಾಕಿದರು.

"ನಾವೇನು ವಿಧಾನಸೌಧಕ್ಕೆ ಹೋಗಿ ಖಾಲಿ ಕುಂತಿಲ್ಲ, ಮೋಜು, ಮಸ್ತಿ ಮಾಡ್ತಿಲ್ಲ. ರೈತರ ಕಷ್ಟ-ಸುಖಗಳ ಕುರಿತು ಸರ್ಕಾರದ ಗಮನ ಸೆಳೆಯುವ ಕೆಲಸ ಮಾಡ್ತಿದ್ದೇನೆ. ಆದ್ರೆ ಸರ್ಕಾರದವರು ನಮಗೆ ಸ್ಪಂದಿಸುತ್ತಿಲ್ಲ. ಬೇಕಾದರೆ ನಾಳೆನೇ ಹೋಗಿ ರಾಜೀನಾಮೆ ಕೊಡ್ತೀನೆ" ಎಂದು ಆಕ್ರೋಶ ಹೊರಹಾಕಿದರು.

"ಆಡಳಿತ ಪಕ್ಷದ ಒಬ್ಬ ಶಾಸಕನಾಗಿ ಅಸಹಾಯಕತೆ ಬಗ್ಗೆ ಹೇಳ್ತಿದ್ದೀನಿ ಅಂದ್ರೆ ಎಷ್ಟರಮಟ್ಟಿಗೆ ಈ ವ್ಯವಸ್ಥೆಯಲ್ಲಿ ಬದುಕಿದ್ದೇವೆ ಎಂಬುದನ್ನು ಅರ್ಥ ಮಾಡ್ಕೊಳ್ಳಿ. ಸರ್ಕಾರದ ನಡೆಯಿಂದಾಗಿ ನನ್ನ ಮನಸ್ಸಿಗೆ ಬಹಳ ನೋವಾಗಿದೆ. ಹೀಗಾಗಿ ಮುಂದಿನ ನಾನು ಎಂಎಲ್ಎ ಆಗುವುದು ಬೇಕಾಗಿಲ್ಲ" ಎಂದು ಕ್ಷೇತ್ರದ ಜನತೆ ಮುಂದೆಯೇ ತಮ್ಮ ಅಸಹಾಯಕತೆ ತೋಡಿಕೊಂಡರು.

ಇದನ್ನೂ ಓದಿ:ಹುಬ್ಬಳ್ಳಿ ಗಲಭೆ ಪ್ರಕರಣ ಹಿಂಪಡೆದ ಸರ್ಕಾರ: ಸಿಎಂ ಸಮರ್ಥನೆ, ಬಿಜೆಪಿ ನಾಯಕರ ಖಂಡನೆ

Last Updated : Oct 11, 2024, 6:15 PM IST

ABOUT THE AUTHOR

...view details