ಬೆಂಗಳೂರು:ಮುಡಾ ಪ್ರಕರಣದಲ್ಲಿ ಮುಖ್ಯಮಂತ್ರಿಯವರ ಪಾತ್ರ ಏನೂ ಇಲ್ಲ. ಮುಂದಿನ ನ್ಯಾಯಾಂಗ ಹೋರಾಟ ಮಾಡಲು ಅವಕಾಶ ಇರುವುದರಿಂದ ಮುಖ್ಯಮಂತ್ರಿಯವರು ರಾಜೀನಾಮೆ ನೀಡುವ ಅವಶ್ಯಕತೆ ಇಲ್ಲ ಗೃಹ ಸಚಿವ ಡಾ. ಜಿ. ಪರಮೇಶ್ವರ್, ವಸತಿ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಜಮೀರ್ ಅಹಮದ್ ಖಾನ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಸೇರಿದಂತೆ ಹಲವರು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಬೆಂಬಲಕ್ಕೆ ನಿಂತಿದ್ದಾರೆ.
ಸದಾಶಿವನಗರದ ತಮ್ಮ ನಿವಾಸದ ಬಳಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಗೃಹ ಸಚಿವ ಡಾ. ಜಿ. ಪರಮೇಶ್ವರ್, ಮುಖ್ಯಮಂತ್ರಿ ಯಾವುದೇ ಕಡತಕ್ಕೆ ರುಜು ಹಾಕಿಲ್ಲ. ಅಧಿಕಾರ ದುರ್ಬಳಕೆ ಆಗಿಲ್ಲ ಎಂದು ನ್ಯಾಯಕ್ಕಾಗಿ ಹೈಕೋರ್ಟ್‌ಗೆ ಹೋಗಿದ್ದೆವು. ಅದಕ್ಕೆ ವಿರುದ್ಧವಾದ ತೀರ್ಪು ಬಂದಿದೆ. ತೀರ್ಪನ್ನು ಗೌರವಿಸುತ್ತೇವೆ. ಮುಂದಿನ ನ್ಯಾಯಾಂಗ ಹೋರಾಟದ ಬಗ್ಗೆ ಮುಖ್ಯಮಂತ್ರಿ ಈಗಾಗಲೇ ಸ್ಪಷ್ಟಪಡಿಸಿದ್ದಾರೆ ಎಂದರು.
ಬೆಂಗಳೂರಿನ ತಮ್ಮ ನಿವಾಸದಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಸತೀಶ್ ಜಾರಕಿಹೊಳಿ, ಕೋರ್ಟ್ ತೀರ್ಪು ಕೊಟ್ಟಿದೆ. ಅದನ್ನು ಪಾಲನೆ ಮಾಡಬೇಕು ಅಷ್ಟೆ. ತನಿಖೆ ಆದ ತಕ್ಷಣ ಆರೋಪ ಸಾಬೀತಾಗಿದೆ ಎಂದಲ್ಲ. ಲೋಕಾಯುಕ್ತ ತನಿಖೆ ಮಾಡಬೇಕು. ತಪ್ಪಾ, ಒಪ್ಪಾ ಎಂದು ತೀರ್ಮಾನ ಮಾಡಲು ಮೂರು ನಾಲ್ಕು ತಿಂಗಳು ಬೇಕು. ನೈತಿಕತೆ ಪ್ರಶ್ನೆ ಎಲ್ಲಿದೆ? ಕೇಸ್ ಇರುವವರು ಮಂತ್ರಿಗಳಾಗಿ ಮುಂದುವರೆದಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಚುನಾವಣೆ ಆಗಿದೆ. ಎಲ್ಲರೂ ಅವರ ಜೊತೆಗೆ ಇದ್ದಾರೆ. ಸಿದ್ದರಾಮಯ್ಯ ಅವರು ಸಿಎಂ ಆಗಿ ಮುಂದುವರೆಯುತ್ತಾರೆ. ಈಗ ಅವರೇ ಸಿಎಂ ಆಗಿ ಮುಂದುವರೆಯುತ್ತಾರೆ. ರಾಜಕೀಯದಲ್ಲಿ ಎಷ್ಟು ಗಟ್ಟಿಯಾಗಿರುತ್ತಾರೋ ಅಷ್ಟು ಉಳಿಯುತ್ತಾರೆ. ಗಟ್ಟಿ ಇಲ್ಲ ಅಂದರೆ ಗಾಳಿಯಲ್ಲಿ ತೂರಿ ಹೋಗ್ತಾರೆ. ಕೇಜ್ರಿವಾಲ್ ಮಾಡೆಲ್ 2 ಆಗಬಹುದು. ಕೇಂದ್ರದ 25 ಸಚಿವರ ಮೇಲೆ ಕೇಸ್ಗಳಿವೆ. ಅವರೆಲ್ಲ ಮಂತ್ರಿಗಳಾಗಿ ಮುಂದುವರೆದಿಲ್ಲವೇ? ಎಂದು ಪ್ರಶ್ನಿಸಿದರು.
ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಹಾಗೂ ಜನಪ್ರತಿನಿಧಿಗಳ ನ್ಯಾಯಾಲಯ ತೀರ್ಪು ಹಿನ್ನೆಲೆ ಸಿಎಂ ರಾಜೀನಾಮೆ ಕೊಡುವ ಪ್ರೆಶ್ನೆಯೇ ಇಲ್ಲ ಎಂದು ಸಚಿವ ಜಮೀರ್ ಅಹಮದ್ ಖಾನ್ ತಿಳಿಸಿದ್ದಾರೆ. ವಿಧಾನಸೌಧದಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಲೋಕಾಯುಕ್ತ ತನಿಖೆಗೆ ಅದೇಶಿಸಲಾಗಿದೆ. ತನಿಖೆ ನಡೆಯಲಿ, ನಂತರ ಸತ್ಯ ತಿಳಿಯಲಿದೆ. ಸಿದ್ದರಾಮಯ್ಯ ಅವರದು ಇದರಲ್ಲಿ ಏನೂ ಪಾತ್ರ ಇಲ್ಲ ಎಂದು ಹೇಳಿದ್ದಾರೆ. ಹೈಕೋರ್ಟ್ನಲ್ಲೂ ವಿಚಾರಣೆಗೆ ಅನುಮತಿ ಕೊಟ್ಟಿಲ್ಲ. ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ತನಿಖೆಗೆ ಆದೇಶ ಬಂದಿದೆ. ನಾವು ತನಿಖೆ ಎದುರಿಸಲು ಸಿದ್ಧ. ಹೈಕಮಾಂಡ್ ಸಿದ್ದರಾಮಯ್ಯ ಅವರ ಜತೆ ಇದೆ. ಶಾಸಕರು, ಸಚಿವರು ಅವರ ಜತೆ ಇದ್ದೇವೆ. ರಾಜೀನಾಮೆ ಕೊಡಬೇಡಿ ಎಂದು ನಾವೆಲ್ಲರೂ ಹೇಳಿದ್ದೇವೆ. ಕೆ ಸಿ ವೇಣುಗೋಪಾಲ್, ರಣದೀಪ್ ಸಿಂಗ್ ಸುರ್ಜೆವಾಲಾ ಸಹ ಸಿದ್ದರಾಮಯ್ಯ ರಾಜೀನಾಮೆ ಅಗತ್ಯ ಇಲ್ಲ ಎಂದಿದ್ದಾರೆ. ಕಾನೂನಾತ್ಮಕ ಹೋರಾಟ ಮಾಡಲಿದ್ದಾರೆ ಎಂದು ಹೇಳಿದ್ದಾರೆ. ಅವರನ್ನು ಐದು ವರ್ಷ ಯಾರೂ ಅಲುಗಾಡಿಸಲು ಸಾಧ್ಯವಿಲ್ಲ. ಮುಡಾ ಪ್ರಕರಣ ಸಂಪೂರ್ಣ ರಾಜಕೀಯ ಪ್ರೇರಿತ ಎಂದು ಆರೋಪಿಸಿದರು.