ಮಂಡ್ಯ:ಮಂಡ್ಯ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಉದ್ಯಮಿ ಸ್ಟಾರ್ ಚಂದ್ರು (ವೆಂಕಟರಮಣೇಗೌಡ) ಸೋಮವಾರ (ಏಪ್ರಿಲ್ 01) ತಮ್ಮ ಉಮೇದುವಾರಿಕೆಯನ್ನು ಸಲ್ಲಿಸಿದ್ದಾರೆ.
ನಾಮಪತ್ರ ಸಲ್ಲಿಕೆಗೂ ಮುನ್ನ ಮಂಡ್ಯದಲ್ಲಿ ಬೃಹತ್ ರೋಡ್ಶೋ ನಡೆಸಿದ ಸ್ಟಾರ್ ಚಂದ್ರುಗೆ ಉಪಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಸಚಿವರಾದ ಚೆಲುವರಾಯಸ್ವಾಮಿ ಜಿಲ್ಲೆಯ ಕಾಂಗ್ರೆಸ್ ಶಾಸಕರು ಹಾಗೂ ನಾಯಕರು ಸಾಥ್ ನೀಡಿದ್ದಾರೆ.
59 ವರ್ಷದ ಸ್ಟಾರ್ ಚಂದ್ರು ಬೆಂಗಳೂರು ಮಹಾಲಕ್ಷ್ಮೀಪುರಂ ನಿವಾಸಿಯಾಗಿದ್ದು, 2022-23ರಲ್ಲಿ ಬರೋಬ್ಬರಿ 16.28 ಕೋಟಿ ರೂ. ವಾರ್ಷಿಕ ಆದಾಯ ಗಳಿಸಿರುವುದಾಗಿ ತಿಳಿಸಿದ್ದಾರೆ. ಇದೇ ವೇಳೆ ತಮ್ಮ ಪತ್ನಿ ಕುಸುಮ ಆದಾಯ 38.45 ಕೋಟಿ ರೂ. ಇದ್ದುದಾಗಿ ಹೇಳಿದ್ದಾರೆ. ಇನ್ನು ಅವಿಭಜಿತ ಕುಟುಂಬದ ಆದಾಯ 36.11 ಲಕ್ಷ ರೂ. ಎಂದು ತಮ್ಮ ನಾಮಪತ್ರದಲ್ಲಿ ದಾಖಲಿಸಿದ್ದಾರೆ.
ಸ್ಟಾರ್ ಬಿಲ್ಡರ್ಸ್ ಎಂಬ ಕಂಪನಿಯ ಒಡೆತನ ಹೊಂದಿರುವ ವೆಂಕಟರಮಣೇಗೌಡ ಅವರು ಒಟ್ಟು 410 ಕೋಟಿ ರೂ. ಒಡೆಯರಾಗಿದ್ದಾರೆ. ವೆಂಕಟರಮಣೇಗೌಡ ಅವರ ಹೆಸರಿನಲ್ಲಿ 237 ಕೋಟಿ ರೂ. ಮೌಲ್ಯದ ಆಸ್ತಿ ಇದ್ದು, ಪತ್ನಿ ಕುಸುಮ ಹೆಸರಲ್ಲಿ 146 ಕೋಟಿ ಹಾಗೂ ಕುಟುಂಬ (HUF)ದ ಹೆಸರಲ್ಲಿ 26 ಕೋಟಿ ಮೌಲ್ಯದ ಆಸ್ತಿ ಇರುವುದಾಗಿ ಉಲ್ಲೇಖಿಸಿದ್ದಾರೆ.
ಸದ್ಯ, ಇವರ ಬಳಿ 29.94 ಕೋಟಿ ರೂ. ಚರಾಸ್ತಿ ಇದ್ದರೆ, ಪತ್ನಿ ಬಳಿ ಬರೋಬ್ಬರಿ 182.33 ಕೋಟಿ ರೂ. ಮೊತ್ತದ ಚರಾಸ್ತಿ ಇದೆ. 15 ಕೋಟಿ ರೂಪಾಯಿ ಸಾಲ ಮಾಡಿರುವ ಸ್ಟಾರ್ ಚಂದ್ರು ಹೆಸರಿನಲ್ಲಿ ಯಾವುದೇ ಕ್ರಿಮಿನಲ್ ಪ್ರಕರಣಗಳಿಲ್ಲ. ಉದ್ಯಮಿಯಾಗಿ ಕಾಲಕಾಲಕ್ಕೆ ತೆರಿಗೆ ಪಾವತಿಸಿಕೊಂಡು ಬಂದಿದ್ದಾರೆ. ಈ ಬಗ್ಗೆ ಚುನಾವಣಾಧಿಕಾರಿಗೆ ಸಲ್ಲಿಸಿರುವ ಅಫಿಡವಿಟ್ನಲ್ಲಿ ಘೋಷಣೆ ಮಾಡಿದ್ದಾರೆ.
ಚಂದ್ರು ಅವರ ಕೈಯಲ್ಲಿ 1.80 ಲಕ್ಷ ರೂ., ಪತ್ನಿ ಕೈಯಲ್ಲಿ 1.90 ಲಕ್ಷ ರೂ. ಹಣವಿದೆ ಮತ್ತು ಕುಟುಂಬದ ಬಳಿ 50 ಲಕ್ಷ ರೂ. ನಗದು ಹಣ ಇದೆ. ಮೂರು ಟ್ರ್ಯಾಕ್ಟರ್ಗಳನ್ನು ಹೊಂದಿರುವ ಚಂದ್ರು ಅವರ ಹೆಸರಿನಲ್ಲಿ ಸ್ವಂತ ಕಾರಿಲ್ಲ ಎಂದು ಉಲ್ಲೇಖಿಸಿದ್ದಾರೆ. ಇನ್ನು ತಮ್ಮ ಹೆಸರಲ್ಲಿ 80.72 ಕೋಟಿ ರೂ. ಮೌಲ್ಯದ 5 ವಾಣಿಜ್ಯ ಸಂಕೀರ್ಣ, ಪತ್ನಿ ಹೆಸರಲ್ಲಿ 36.39 ಕೋಟಿ ರೂ. ಮೌಲ್ಯದ 3 ವಾಣಿಜ್ಯ ಸಂಕೀರ್ಣ, ಪತಿ-ಪತ್ನಿ ಹೆಸರಲ್ಲಿ 9 ಮನೆಗಳಿವೆ ಎಂದು ಸ್ಟಾರ್ ಚಂದ್ರು (ವೆಂಕಟರಮಣೇಗೌಡ) ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ನಾಮಪತ್ರದಲ್ಲಿ ವಿವರಿಸಿದ್ದಾರೆ.
ಇದನ್ನೂ ಓದಿ:ರಾಜವಂಶಸ್ಥರಾದರೂ ಸ್ವಂತ ಮನೆ, ಕಾರಿಲ್ಲ!: ಚುನಾವಣಾ ಅಫಿಡವಿಟ್ನಲ್ಲಿ ಯದುವೀರ್ ಆಸ್ತಿ ವಿವರ ಹೀಗಿದೆ - Yaduveer Asset Details