ಕರ್ನಾಟಕ

karnataka

ETV Bharat / state

ವೃಕ್ಷಮಾತೆ ತುಳಸಿ ಗೌಡ ನಿಧನಕ್ಕೆ ವಿಧಾನಸಭೆಯಲ್ಲಿ ಭಾವಪೂರ್ಣ ಸಂತಾಪ - CONDOLENCES ON TALASI GOWDA DEATH

ವೃಕ್ಷಮಾತೆ ತುಳಸಿ ಗೌಡ ಅವರ ನಿಧನಕ್ಕೆ ವಿಧಾನಸಭೆಯಲ್ಲಿ ಭಾವಪೂರ್ಣ ಸಂತಾಪ ಸೂಚಿಸಲಾಯಿತು.

ವೃಕ್ಷಮಾತೆ ತುಳಸಿ ಗೌಡ ನಿಧನಕ್ಕೆ ವಿಧಾನಸಭೆಯಲ್ಲಿ ಭಾವಪೂರ್ಣ ಸಂತಾಪ
ವೃಕ್ಷಮಾತೆ ತುಳಸಿ ಗೌಡ ನಿಧನಕ್ಕೆ ವಿಧಾನಸಭೆಯಲ್ಲಿ ಭಾವಪೂರ್ಣ ಸಂತಾಪ (ETV Bharat)

By ETV Bharat Karnataka Team

Published : Dec 17, 2024, 5:30 PM IST

ಬೆಂಗಳೂರು/ಬೆಳಗಾವಿ:ವೃಕ್ಷಮಾತೆ ಎಂದೇ ಜನಪ್ರಿಯರಾಗಿದ್ದ ತುಳಸಿ ಗೌಡ ಅವರ ನಿಧನಕ್ಕೆ ವಿಧಾನಸಭೆಯಲ್ಲಿ ಇಂದು ಭಾವಪೂರ್ಣ ಸಂತಾಪ ಸಲ್ಲಿಸಲಾಯಿತು. ಸದನ ಆರಂಭಗೊಂಡಾಗ ವಿಧಾನಸಭೆ ಸ್ಪೀಕರ್ ಯು. ಟಿ. ಖಾದರ್ ಅವರು, ವೃಕ್ಷಮಾತೆ ತುಳಿಸಿ ಗೌಡ ಅವರು ನಿಧನ ಹೊಂದಿರುವುದನ್ನು ಸದನಕ್ಕೆ ತಿಳಿಸಿದರು.

ಅಂಕೋಲ ತಾಲೂಕು ಹೊನ್ನಳ್ಳಿಯ ತುಳಸಿ ಗೌಡ ಅವರು ಹಾಲಕ್ಕಿ ಬುಡಕಟ್ಟು ಸಮುದಾಯದ ಬಡ ಕುಟುಂಬದಲ್ಲಿ ಜನಿಸಿದ್ದು, ಪರಿಸರದ ಬಗ್ಗೆ ಅಪಾರ ಕಾಳಜಿ ಹೊಂದಿದ್ದರು. ಮರಗಳ ಬಗ್ಗೆ ಕಾಳಜಿ ಹಾಗೂ ಅಪಾರ ಜ್ಞಾನ ಹೊಂದಿದ್ದ ಅವರು, ಅರಣ್ಯದ ಎನ್‍ಸೈಕ್ಲೋಪಿಡಿಯಾ ವೃಕ್ಷಮಾತೆ ಎಂದೇ ಪ್ರಖ್ಯಾತರಾಗಿದ್ದರು. 300ಕ್ಕೂ ಹೆಚ್ಚು ಮರಗಳ ಪ್ರಭೇದಗಳನ್ನು ತಿಳಿದಿದ್ದ ಅವರು, ನಿಂತ ಜಾಗದಲ್ಲೇ ಅವುಗಳ ಬಗ್ಗೆ ವಿವರಿಸುವಷ್ಟು ಜ್ಞಾನ ಹೊಂದಿದ್ದರು. ಅರಣ್ಯ ಇಲಾಖೆ ಜೊತೆ ಕೈಜೋಡಿಸಿ 65 ವರ್ಷಗಳಿಂದ ಪರಿಸರ ಸಂರಕ್ಷಣೆ ಮತ್ತು ಜಾಗೃತಿ ಮೂಡಿಸುವ ಕಾರ್ಯದಲ್ಲಿ ತೊಡಗಿದ್ದರು. ಬಾಲ್ಯದಲ್ಲೇ ವಿಧವೆಯಾದ ತುಳಸಿ ಗೌಡ ಮರಗಳಲ್ಲೇ ಕುಟುಂಬ ಹಾಗೂ ಮಕ್ಕಳನ್ನು ಕಂಡವರು. ಒಂದು ಕಾಲದಲ್ಲಿ ಕಾಡಿನಿಂದ ಕಟ್ಟಿಗೆ ತರುತ್ತಿದ್ದ ಅವರು ಇಂದು ಕಾಡನ್ನೇ ನಿರ್ಮಿಸಿ ಮಾದರಿಯಾಗಿದ್ದಾರೆ. ಲಕ್ಷಾಂತರ ಮರಗಳನ್ನು ನೆಟ್ಟು ಪೋಷಿಸಿದ್ದ ಅವರ ಪರಿಸರ ಪ್ರೇಮಕ್ಕಾಗಿ 2021ರಲ್ಲಿ ಪದ್ಮಶ್ರೀ ಪ್ರಶಸ್ತಿ ನೀಡಲಾಗಿತ್ತು ಎಂದು ಸ್ಪೀಕರ್ ತಿಳಿಸಿದರು.

ರಾಜ್ಯೋತ್ಸವ, ಪ್ರಿಯದರ್ಶಿನಿ, ವೃಕ್ಷ ಮಿತ್ರ ಸೇರಿದಂತೆ ಹಲವು ಪ್ರಶಸ್ತಿಗಳು ಅವರಿಗೆ ಸಂದಿವೆ. ವೃಕ್ಷಗಳ ಆರೈಕೆ ಮೂಲಕ ಪ್ರಸಿದ್ಧಿ ಪಡೆದಿದ್ದ ತುಳಸಿ ಗೌಡ ನಿನ್ನೆ(ಡಿ.16) ನಿಧನ ಹೊಂದಿದ್ದಾರೆ ಎಂದು ವಿಷಾದಿಸಿದರು.

ಈ ಸಂತಾಪ ಸೂಚನೆ ನಿರ್ಣಯವನ್ನು ಬೆಂಬಲಿಸಿ ಮಾತನಾಡಿದ ಕಾನೂನು ಸಚಿವ ಹೆಚ್. ಕೆ. ಪಾಟೀಲ್, ತುಳಸಿ ಗೌಡ ಅವರಿಗೆ ಅರಣ್ಯದ ಮೇಲೆ ಪ್ರೀತಿಯಿತ್ತು. 300ಕ್ಕೂ ಹೆಚ್ಚು ತಳಿಗಳ ಬಗ್ಗೆ ತಿಳುವಳಿಕೆ ಹೊಂದಿದ್ದರು. ವೃಕ್ಷ ಮಾತೆ ಎಂದು ಕರೆಯುವಷ್ಟರ ಮಟ್ಟಿಗೆ ಅವರು ತಮ್ಮನ್ನು ಅರ್ಪಣೆ ಮಾಡಿಕೊಂಡಿದ್ದರು. ಅವರಿಗೆ ಶ್ರದ್ಧಾಂಜಲಿ ಸಲ್ಲಿಸುವುದಾಗಿ ಹೇಳಿದರು.

ಪ್ರತಿಪಕ್ಷದ ನಾಯಕ ಆರ್. ಅಶೋಕ್ ಮಾತನಾಡಿ, ತುಳಸಿ ಗೌಡ ಅವರು ಇಂದು ನಮ್ಮ ಮುಂದೆ ಇಲ್ಲ. ಬಡ ಕುಟುಂಬದಲ್ಲಿ ಜನಿಸಿದ್ದರೂ ವೃಕ್ಷ ಬೆಳೆಸುವ ಕಾರ್ಯಕ್ಕೆ ನಾಂದಿ ಹಾಡಿದ್ದಾರೆ. ಸಾವಿನ ಬಳಿಕ ಕೆಲವರು ಬದುಕುತ್ತಾರೆ. ಅಂಥವರ ಸಾಲಿಗೆ ಇವರು ಸೇರುತ್ತಾರೆ. ಪ್ರಧಾನಿ ನರೇಂದ್ರ ಮೋದಿ ಅವರಿಗೂ ತುಳಸಿ ಗೌಡ ಆಶೀರ್ವಾದ ಮಾಡಿದ್ದರು. ತುಳಸಿಯನ್ನು ನಾವು ಪವಿತ್ರ ಭಾವನೆಯಿಂದ ಪೂಜೆ ಮಾಡುತ್ತೇವೆ. ಹೀಗಾಗಿ ತುಳಸಿ ಗೌಡ ಅವರಿಗೆ ಸಂತಾಪ ಸೂಚಿಸುವುದಾಗಿ ತಿಳಿಸಿದರು. ನಂತರ ಸದನದಲ್ಲಿ ಒಂದು ನಿಮಿಷ ಮೌನಾಚರಣೆ ಮಾಡಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಇದನ್ನೂ ಓದಿ:ಗಿಡ-ಮರದ ಜೊತೆಯೇ ಸಖ್ಯ; ಕಾಡಿನ ರಕ್ಷಣೆಗೆ ನಿಂತಿದ್ದ ವೃಕ್ಷಮಾತೆ ತುಳಸಿಗೌಡ ಬದುಕಿನ ಹಾದಿ ಹೀಗಿತ್ತು

ABOUT THE AUTHOR

...view details