ಬೆಂಗಳೂರು: ಹುಬ್ಬಳ್ಳಿ ಗಲಭೆ ಪ್ರಕರಣದ ಕೇಸ್ ವಾಪಸ್ ಪಡೆದ ಸರ್ಕಾರದ ನಡೆ ವಿರುದ್ಧ ಕೇಂದ್ರಕ್ಕೆ ದೂರು ಕೊಡಲು ನಿರ್ಧರಿಸಲಾಗಿದೆ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ತಿಳಿಸಿದರು.
ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹುಬ್ಬಳ್ಳಿ ಪೊಲೀಸ್ ಠಾಣೆ ಮೇಲೆ ದಾಳಿ, ಗಲಭೆ ಮಾಡಿದವರು ಹಾಗೂ ಕ್ರಿಮಿನಲ್ಗಳ ವಿರುದ್ಧ ಸರ್ಕಾರ ಕೇಸ್ ದಾಖಲು ಮಾಡಿತ್ತು. ಈಗ ಒಂದು ಸಮುದಾಯವನ್ನು ಓಲೈಕೆ ಮಾಡಲು, ಎಲ್ಲಾ ಕೇಸ್ ವಾಪಸ್ ಪಡೆದಿದ್ದಾರೆ. ಇದು ಸರ್ಕಾರ ಮಾಡಿರುವ ಅಕ್ಷಮ್ಯ ಅಪರಾಧ. ಆರ್ಗನೈಸ್ಡ್ ಕ್ರೈಮ್ ಮಾಡಿರೋ ಕೇಸ್ ವಾಪಸ್ ಪಡೆದಿರೋದು ಕೂಡ ಸರ್ಕಾರದ ಆರ್ಗನೈಸ್ಡ್ ಕ್ರೈಮ್. ಹೀಗಾಗಿ ಇದನ್ನು ನಾವು ಸುಮ್ಮನೆ ಬಿಡುವುದಿಲ್ಲ, ಇದರ ಬಗ್ಗೆ ಜನರಿಗೆ ತಿಳಿಸಲು ಹೋರಾಟ ಮಾಡುತ್ತೇವೆ ಎಂದರು.
ಇದರ ಬಗ್ಗೆ ನಾವು ಕೋರ್ಟ್ನಲ್ಲಿ ಆಕ್ಷೇಪಣೆ ಅರ್ಜಿ ಹಾಕುತ್ತೇವೆ. ಉಡುಪಿ, ಮಂಗಳೂರು, ಶಿವಮೊಗ್ಗದಲ್ಲಿನ ಹಿಂದೂ ಕಾರ್ಯಕರ್ತರ ಮೇಲೆ ಯಾಕೆ ಕೇಸ್ ವಾಪಸ್ ತಗೊಂಡಿಲ್ಲ?. ಅವರು ಕ್ರಿಮಿನಲ್ಗಳು, ಇವರು ಕ್ರಿಮಿನಲ್ಗಳಲ್ವಾ?. ಜನರನ್ನು ಕೆರಳಿಸುವ ಕೆಲಸ ಮಾಡಿ, ಮುಡಾ, ವಾಲ್ಮೀಕಿ ಹಗರಣ ಡೈವರ್ಟ್ ಮಾಡ್ತಿದ್ದೀರಿ. ನಾನು ಇವತ್ತು ಕೇಂದ್ರದ ಕಾನೂನು ಸಚಿವರಿಗೂ ಈ ಸರ್ಕಾರದ ವಿರುದ್ಧ ಕ್ರಮ ಜರುಗಿಸಬೇಕು ಅಂತಾ ಪತ್ರ ಬರೆಯುತ್ತೇನೆ. ಕೇಂದ್ರ ಸರ್ಕಾರ ತಕ್ಷಣ ಗಂಭೀರವಾಗಿ ಪರಿಗಣಿಸಿ, ಕ್ರಮ ತಗೊಬೇಕು. ಪ್ರಧಾನಮಂತ್ರಿಗಳು, ಕೇಂದ್ರ ಗೃಹ ಸಚಿವರು ಹಾಗೂ ರಾಷ್ಟ್ರಪತಿಗಳಿಗೂ ಗಮನ ಸೆಳೆಯಲು ಪತ್ರ ಬರೆಯುತ್ತೇನೆ ಎಂದು ಛಲವಾದಿ ನಾರಾಯಣಸ್ವಾಮಿ ತಿಳಿಸಿದರು.