ಕರ್ನಾಟಕ

karnataka

ETV Bharat / state

ಜಾತಿಗಣತಿ ವರದಿಯನ್ನು ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ಮುಂದಿನ ತೀರ್ಮಾನ: ಸಿಎಂ ಸಿದ್ದರಾಮಯ್ಯ - ಜಯಪ್ರಕಾಶ್ ಹೆಗ್ಡೆ

ಜಾತಿಗಣತಿ ವರದಿ​ ಕುರಿತು ಇಂದು ಹಾಸನದಲ್ಲಿ ಸಿಎಂ ಸಿದ್ದರಾಮಯ್ಯ ಮಾಧ್ಯಮದವರ ಪ್ರಶ್ನೆಗಳಿಗೆ ಉತ್ತರಿಸಿದರು.

ಸಿಎಂ ಸಿದ್ದರಾಮಯ್ಯ
ಸಿಎಂ ಸಿದ್ದರಾಮಯ್ಯ

By ETV Bharat Karnataka Team

Published : Mar 1, 2024, 5:33 PM IST

ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ

ಹಾಸನ:ಜಾತಿಗಣತಿ ವರದಿಯನ್ನು ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ಮುಂದಿನ ತೀರ್ಮಾನ ಮಾಡುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಜಾತಿಗಣತಿ ವರದಿಗಾಗಿ ನಮ್ಮ ಅಭಿಪ್ರಾಯವನ್ನೇ ಕೇಳಿಲ್ಲ, ಅದು ಅವೈಜ್ಞಾನಿಕ ವರದಿ ಎಂಬ ಸಿದ್ದಗಂಗ ಶ್ರೀಗಳ ಹೇಳಿಕೆ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಿಎಂ, ಅದನ್ನು ಹೇಳುತ್ತಿರುವುದು ಈಗ ಅಲ್ವಾ? ಮೊದಲು ಹೇಳಿದ್ರಾ?. ಎಲ್ಲರ ಅಭಿಪ್ರಾಯವನ್ನು ಕೇಳಿಯೇ ವರದಿ ತಯಾರು ಮಾಡಿದ್ದೀವಿ ಎಂದು ಹೇಳುತ್ತಾರೆ. ವರದಿಯಲ್ಲೇನಿದೆ ಎಂದು ನನಗೆ ಗೊತ್ತಿಲ್ಲ ಎಂದರು.

ಇದೇ ವೇಳೆ, ಜಯಪ್ರಕಾಶ್ ಹೆಗ್ಡೆ ಅವರು ಆಯೋಗದ ಅಧ್ಯಕ್ಷರಲ್ಲವೇ? ಅವರು ವರದಿ ಕೊಟ್ಟಿದ್ದಾರೆ, ನಾವು ತೆಗೆದುಕೊಂಡಿದ್ದೇವೆ ಅಷ್ಟೇ ಎಂದು ತಿಳಿಸಿದರು.

ಜಾತಿ ಗಣತಿ ವಿಚಾರವಾಗಿ ಬಿಜೆಪಿಯವರು ರಾಜಕೀಯ ಮಾಡುತ್ತಿದ್ದಾರೆ. ಏಕೆಂದರೆ ರಾಜ್ಯಸಭೆ ಚುನಾವಣೆ ವೇಳೆ ಅವರಲ್ಲೊಬ್ಬರು ಕಾಂಗ್ರೆಸ್​ಗೆ ವೋಟ್​ ಹಾಕಿದ್ದಾರೆ. ಒಬ್ಬರು ಮತದಾನಕ್ಕೆ ಗೈರಾಗಿದ್ದರು. ಈ ವಿಚಾರವನ್ನು ಮುಚ್ಚಿ ಹಾಕುವುದಕ್ಕಾಗಿ ಹೀಗೆ ಮಾಡುತ್ತಿದ್ದಾರೆ ಎಂದರು.

ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ವಿಚಾರವಾಗಿ ಮಾತನಾಡುತ್ತಾ, ಅವರ ಮೈತ್ರಿಯನ್ನು ಜನ ಒಪ್ಪಲ್ಲ. ಈ ಹಿಂದೆ ದೇವೇಗೌಡರು ಕೋಮುವಾದಿಗಳ ಜೊತೆ ಹೋಗುವುದಿಲ್ಲ ಅಂದಿದ್ರು. ಹಾಗಾದರೆ ಈಗ ಏಕೆ ಹೋಗಿದ್ದಾರೆ ಎಂದು ಪ್ರಶ್ನಿಸಿದರು.

ಸರ್ಕಾರಿ ಕಾರ್ಯಕ್ರಮವನ್ನು ರಾಜಕೀಯ ಕಾರ್ಯಕ್ರಮವನ್ನಾಗಿ ಮಾಡಿರುವ ಆರೋಪದ ಬಗ್ಗೆ ಮಾತನಾಡಿ, ನಮ್ಮ ಅಭಿವೃದ್ಧಿ ಕಾಮಗಾರಿಗಳನ್ನು ಅವರು ಉದ್ಘಾಟನೆ ಮಾಡಿರಲಿಲ್ವಾ? ಅವರ ಕಾಲದಲ್ಲಿ ಆಗಿರುವ ಅಭಿವೃದ್ಧಿ ಕಾಮಗಾರಿಗಳು ಈಗ ಪೂರ್ಣವಾಗಿದೆ. ಅದನ್ನೀಗ ನಾವು ಉದ್ಘಾಟನೆ ಮಾಡಬಾರದೇ ಎಂದರು.

ಸರ್ಕಾರಿ ಕಾರ್ಯಕ್ರಮದಲ್ಲಿ ರಾಜಕೀಯ ಭಾಷಣ ಮಾಡುವುದನ್ನು ಕಲಿಸಿಕೊಟ್ಟಿದ್ದೇ ನರೇಂದ್ರ ಮೋದಿ. ಪಾರ್ಲಿಮೆಂಟಿನಲ್ಲಿ ಮೋದಿ ರಾಜಕೀಯ ಭಾಷಣ ಮಾಡಿದರು. ಅದಕ್ಕೆ ನಾನೂ ಮಾಡುತ್ತಿದ್ದೇನೆ ಎಂದು ಸಿದ್ದರಾಮಯ್ಯ ಹೇಳಿದರು.

ಬಿಜೆಪಿಯವರಿಂದ ನಾವು ದೇಶಭಕ್ತಿ ಕಲಿಯಬೇಕಿಲ್ಲ. ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟವರು ಯಾರು? ಬಿಜೆಪಿಯವರು ಸ್ವಾತಂತ್ರ್ಯ ತಂದುಕೊಟ್ಟರಾ ಎಂದು ಪ್ರಶ್ನಿಸಿದರು. ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ವಿಚಾರವಾಗಿ ಮಾತನಾಡಿ, ಯಾರೇ ಆ ರೀತಿ ಕೂಗಿದ್ದರೂ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದರು.

ರಾಜ್ಯಸಭೆ ಚುನಾವಣೆಯಲ್ಲಿ ಎಸ್.ಟಿ.ಸೋಮಶೇಖರ್ ಅವರಿಂದ ಅಡ್ಡ ಮತದಾನ ವಿಚಾರವಾಗಿ ಮಾತನಾಡಿದ ಡಿಸಿಎಂ ಡಿ.ಕೆ.ಶಿವಕುಮಾರ್​, ಬಿಜೆಪಿ ಜೊತೆಗಿನ ಮೈತ್ರಿಗೆ ಜನರ ಸಮ್ಮತಿ ಇಲ್ಲ. ಈ ಹಿಂದೆ ಅವರು ಕಾಂಗ್ರೆಸ್​ನಲ್ಲಿದ್ದರು. ಕಾಂಗ್ರೆಸ್​ ಪರವಾಗಿ ಇರುವವರು ಅವರು. ವೋಟ್ ಮಾಡಿದ್ದು ನನಗೆ ತೋರಿಸಿಲ್ಲ ಎಂದರು.

ಇದನ್ನೂ ಓದಿ:ಜಾತಿಗಣತಿ ವರದಿ ಕುರಿತು ಮುಂದಿನ ಸಂಪುಟ ಸಭೆಯಲ್ಲಿ ಚರ್ಚೆಗೆ ಸಿಎಂ ನಿರ್ಧಾರ

ABOUT THE AUTHOR

...view details