ಚಾಮರಾಜನಗರ:ಲೋಕಸಭಾ ಚುನಾವಣೆಯಲ್ಲಿ ತವರಿನ ಕ್ಷೇತ್ರಗಳನ್ನು ಗೆಲ್ಲಲೇಬೇಕೆಂದು ಪಣ ತೊಟ್ಟಿರುವ ಸಿಎಂ ಸಿದ್ದರಾಮಯ್ಯ ಅವರು ರಣವ್ಯೂಹವನ್ನು ಹೆಣೆಯುತ್ತಿದ್ದು, ಬಿಜೆಪಿ ಮುಖಂಡರಿಗೆ ಗಾಳ ಹಾಕುತ್ತಿದ್ದಾರೆ. ವರುಣ ವಿಧಾನಸಭಾ ಕ್ಷೇತ್ರ ಚಾಮರಾಜನಗರ ಲೋಕಸಭಾ ಕ್ಷೇತ್ರಕ್ಕೆ ಒಳಪಡಲಿದೆ. ಜೊತೆಗೆ ಮೈಸೂರು ತವರು ಜಿಲ್ಲೆ ಆಗಿರುವ ಹಿನ್ನೆಲೆ ಸಿಎಂ ಸಿದ್ದರಾಮಯ್ಯಗೆ ಈ ಎರಡು ಕ್ಷೇತ್ರಗಳು ಪ್ರತಿಷ್ಠೆಯ ಕಣವಾಗಿ ಮಾರ್ಪಟ್ಟಿದ್ದು, ಗೆಲ್ಲಿಸಬೇಕಾದ ಅನಿವಾರ್ಯತೆ ಎದುರಾಗಿದೆ.
ಕೈ ಹಿಡಿಯುವರಾ ಪ್ರಸಾದ್ ಬೆಂಬಲಿಗರು?:ಸಂಸದ ಶ್ರೀನಿವಾಸ್ ಪ್ರಸಾದ್ ಅವರ ಸೋದರಳಿಯ ಹಾಗೂ ಸಹೋದರ ಈಗಾಗಲೇ ಕಾಂಗ್ರೆಸ್ ಕಡೆ ಮುಖ ಮಾಡಿದ್ದು, ಈಗ ಸಂಸದರ ಬೆಂಬಲಿಗರು ಕಮಲ ತೊರೆದು ಕಾಂಗ್ರೆಸ್ ಗೆ ಸೇರ್ಪಡೆ ಆಗಲು ಮುಂದಾಗಿದ್ದಾರೆ. ಏ.3 ರಂದು ಸಿದ್ದರಾಮಯ್ಯ ಸಮ್ಮುಖದಲ್ಲಿ ಸಂಸದರ ಬೆಂಬಲಿಗರು ಹಾಗೂ ದಲಿತ ಮುಖಂಡರು ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆ ಎನ್ನುವುದು ಪಕ್ಷದ ವಿವಿಧ ಮೂಲಗಳಿಂದ ಮಾಹಿತಿ ಲಭ್ಯವಾಗಿದ್ದು, ಆಪರೇಷನ್ ಹಸ್ತ ಸಕ್ಸಸ್ ಆಗಿದೆ ಎನ್ನಲಾಗ್ತಿದೆ.