ಗೃಹಲಕ್ಷ್ಮಿ ಹಣದಲ್ಲಿ ಹೋಳಿಗೆ ಊಟ ಹಾಕಿಸಿದ್ದ ಅಜ್ಜಿಗೆ ಸನ್ಮಾನಿಸಿದ ಸಿಎಂ ಸಿದ್ದರಾಮಯ್ಯ (ETV Bharat) ಬೆಳಗಾವಿ : ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಗೃಹಲಕ್ಷ್ಮಿ, ಶಕ್ತಿ ಯೋಜನೆ ಮಹಿಳೆಯರ ಕೈಹಿಡಿದಿವೆ. ಈ ಗೃಹ ಲಕ್ಷ್ಮಿ ಯೋಜನೆಯ ಫಲಾನುಭವಿಗಳು ಪ್ರತಿ ತಿಂಗಳು ಎರಡು ಸಾವಿರ ರೂಪಾಯಿ ಪಡೆದು ಖುಷಿಯಾಗಿದ್ದಾರೆ. ಗೃಹಲಕ್ಷ್ಮಿ ಯೋಜನೆ ಹಣದಲ್ಲಿ ಹೋಳಿಗೆ ಊಟ ಹಾಕಿಸಿದ್ದ ರಾಯಬಾಗ ತಾಲೂಕಿನ ಸುಟ್ಟಟ್ಟಿ ಗ್ರಾಮದ ಅಜ್ಜಿ ಅಕ್ಕಾತಾಯಿ ಲಂಗೂಟಿಗೆ ಸಿಎಂ ಸಿದ್ದರಾಮಯ್ಯ ಸನ್ಮಾನಿಸಿದರು.
ಅಜ್ಜಿಗೆ ಸನ್ಮಾನಿಸಿದ ಸಿಎಂ ಸಿದ್ದರಾಮಯ್ಯ (ETV Bharat) ಗೋಕಾಕ್, ಮೂಡಲಗಿ ತಾಲೂಕಿನಲ್ಲಿ ಕಾರ್ಯಕ್ರಮ ಮುಗಿಸಿ ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಸಿಎಂ ಸಿದ್ದರಾಮಯ್ಯ ಅಕ್ಕಾತಾಯಿಯನ್ನು ಸತ್ಕರಿಸಿದರು. ಇದೇ ವೇಳೆ ಮುಖ್ಯಮಂತ್ರಿಗಳಿಗೆ ತಂದಿದ್ದ ಹೋಳಿಗೆ ತಿನ್ನಿಸಿ, ಕಂಬಳಿ ಹೊದಿಸಿದ ವೃದ್ಧೆ ತುಂಬು ಹೃದಯದಿಂದ ಆಶೀರ್ವಾದ ಮಾಡಿದರು.
''ನಾಡಿಗೆ ಅನ್ನ ಕೊಡೋ ದೊರೆ ನೀನು. ನಿಮ್ಮ ಕೈ ಇನ್ನೂ ಮೇಲಾಗ್ಲಿ. ನಾಡ ಆಳುವ ದೊರೆ ನೀನು ದೇಶಾನೂ ಆಳ್ಬೇಕು. ಹಿಂಗಾ ಆಳ್ಕೊತಾ ಹೋಗ್ತಾ ಇರ್ಬೇಕು. ನಾಡಿಗೆ ಒಳ್ಳೇದಾಗೈತ್ರಿ'' ಎಂದು ಸಿಎಂ ಸಿದ್ದರಾಮಯ್ಯ ಅವರ ಆಡಳಿತವನ್ನು ಅಕ್ಕಾತಾಯಿ ಮನದುಂಬಿ ಶ್ಲಾಘಿಸಿದರು.
ಸಿಎಂಗೆ ಹೋಳಿಗೆ ನೀಡಿದ ಅಜ್ಜಿ (ETV Bharat) ಅಕ್ಕಾತಾಯಿ ಜೊತೆ ಬಂದಿದ್ದ ಮುತ್ತೈದೆಯರು ಒಟ್ಟಾಗಿ ಮುಖ್ಯಮಂತ್ರಿಗಳಿಗೆ, ನಾವು ಲಕ್ಷ್ಮಿದೇವಿಗೆ ಪೂಜೆ ಮಾಡೀವಿ. ಕಂಟಕ ನಾಶ ಆಗ್ಲಿ ಅಂತ ದೇವಿಗೆ ಕೈಮುಗಿದೀವಿ ಎಂದು ಶುಭ ಹಾರೈಸಿದರು.
ಅಕ್ಕಾತಾಯಿ ಮತ್ತು ಮುತ್ತೈದೆಯರ ಆಶೀರ್ವಾದ ಸ್ವೀಕರಿಸಿದ ಸಿಎಂ ಸಿದ್ದರಾಮಯ್ಯ, ನಿಮ್ಮ ಆಶೀರ್ವಾದ ನನ್ನ ಮೇಲೆ ಹೀಗೇ ಇರಲಿ. ನಮ್ಮ ಸರ್ಕಾರ ಇರುವವರೆಗೂ ಗೃಹಲಕ್ಷ್ಮಿ ಯೋಜನೆ ನಿಲ್ಲೋದಿಲ್ಲ. ಹೀಗೇ ಪ್ರತೀ ತಿಂಗಳು ನಿಮ್ಮ ಮಡಿಲು ಸೇರುತ್ತಿರುತ್ತದೆ ಎಂದು ಅಭಯ ನೀಡಿದರು.
ಅಜ್ಜಿ ಅಕ್ಕಾತಾಯಿ ಲಂಗೋಟಿಗೆ ಸನ್ಮಾನಿಸಿದ ಸಿಎಂ ಸಿದ್ದರಾಮಯ್ಯ (ETV Bharat) ಗೌರವಿಸುವ ಕೆಲಸ ಮಾಡಿದ್ದೇನೆ : ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಮಾತನಾಡಿ, 'ಗೃಹ ಲಕ್ಷ್ಮಿ ಯೋಜನೆ ಹಣ ಬಡವರ ಹಣ, ಅದನ್ನು ಬಡವರಿಗೆ ಖರ್ಚು ಮಾಡಬೇಕೆಂದು ಆ ಅಜ್ಜಿ ಊರಿಗೆ ಹೋಳಿಗೆ ಊಟ ಹಾಕಿಸಿದ್ದಾರೆ. ಅಲ್ಲದೇ ಸಿದ್ದರಾಮಯ್ಯ ಯಾವಾಗಲೂ ಅಧಿಕಾರದಲ್ಲಿ ಇರಬೇಕು ಎಂದು ಪ್ರಾರ್ಥಿಸಿದ್ದಾರೆ. ಹಾಗಾಗಿ, ಕರೆದು ಗೌರವಿಸುವ ಕೆಲಸ ಮಾಡಿದ್ದೇನೆ' ಎಂದು ಹೇಳಿದರು.
ಇದೇ ವೇಳೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಅಕ್ಕಾತಾಯಿ ಮತ್ತು ಮುತ್ತೈದೆಯರಿಗೆ ಸೀರೆ, ಅರಿಶಿಣ ಕುಂಕುಮ, ಬಾಗಿನ ನೀಡಿ ಸನ್ಮಾನಿಸಿದರು. ಈ ಸಂದರ್ಭದಲ್ಲಿ ಸಚಿವ ಸತೀಶ್ ಜಾರಕಿಹೊಳಿ, ಶಾಸಕರಾದ ಬಾಬಾಸಾಹೇಬ ಪಾಟೀಲ, ಆಸೀಫ್ ಸೇಠ್ ಸೇರಿ ಮತ್ತಿತರರು ಇದ್ದರು.
ಇದನ್ನೂ ಓದಿ :ಗೃಹಲಕ್ಷ್ಮಿ ಹಣದಿಂದ ಊರಿಗೆ ಹೋಳಿಗೆ ಊಟ ಹಾಕಿಸಿದ ಅಜ್ಜಿಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಮೆಚ್ಚುಗೆ: ರೇಷ್ಮೆ ಸೀರೆ ನೀಡಿ ಸನ್ಮಾನ - Grandmother Fed Holige Meal