ಚಿಕ್ಕಮಗಳೂರು :ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣವನ್ನು ಎನ್ಐಎಗೆ ವಹಿಸುವ ಬಗ್ಗೆ ಅಗತ್ಯ ಬಿದ್ದರೆ ಚಿಂತನೆ ನಡೆಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದರು.
ಅವರು ಇಂದು ಚಿಕ್ಕಮಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು. ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣವನ್ನು ಸಿಸಿಬಿಗೆ ವಹಿಸಲಾಗಿದೆ. ತನಿಖೆ ನಡೆಯುತ್ತಿದ್ದು, ಆರೋಪಿ ಇನ್ನೂ ಸಿಕ್ಕಿಲ್ಲ ಎಂದು ಹೇಳಿದರು.
ಬಾಂಬ್ ಸ್ಫೋಟ ಪ್ರಕರಣ ಸಿಲ್ಲಿ ಘಟನೆಗಳಲ್ಲ :ವೈದ್ಯಕೀಯ ಶಿಕ್ಷಣ ಸಚಿವ ಶರಣ ಪ್ರಕಾಶ್ ಪಾಟೀಲ್ ಅವರು ಇದೊಂದು ಸಿಲ್ಲಿ ಘಟನೆ ಎಂದಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿಎಂ, ಬಾಂಬ್ ಸ್ಫೋಟ ಪ್ರಕರಣ ಸಿಲ್ಲಿ ಘಟನೆಗಳಾಗುವುದಿಲ್ಲ. ಜನರ ಸುರಕ್ಷತೆಯ ದೃಷ್ಟಿಯಿಂದ ಸರ್ಕಾರ ಇದನ್ನು ಬಹಳ ಗಂಭೀರವಾಗಿ ಪರಿಗಣಿಸಿದೆ ಎಂದರು.
ಬಿಜೆಪಿ ಕಾಲದಲ್ಲಿ ಸ್ಫೋಟವಾಗಿದ್ದಾಗ ಬೆಂಗಳೂರು ಏನಾಗಿತ್ತು?: ಬ್ರಾಂಡ್ ಬೆಂಗಳೂರು ಈಗ ಬಾಂಬ್ ಬೆಂಗಳೂರು ಆಗಿದೆ ಎಂದು ಬಿಜೆಪಿ ಟೀಕಿಸಿರುವ ಬಗ್ಗೆ ಪ್ರತಿಕ್ರಿಯಿಸಿ, ಅವರ ಕಾಲದಲ್ಲಿ ಸ್ಫೋಟವಾಗಿದ್ದಾಗ ಬೆಂಗಳೂರು ಏನಾಗಿತ್ತು?. 2008 ರಿಂದ 4 ಬಾರಿ ಬಾಂಬ್ ಬ್ಲಾಸ್ಟ್ ಆಗಿದ್ದಕ್ಕೆ ಏನೆಂದು ಕರೆಯಬೇಕು ಎಂದು ಕೇಳಿದ್ರು. ಇದು ಎನ್.ಐ.ಎ RAW ಅವರ ವೈಫಲ್ಯವಲ್ಲವೇ? ಎಂದು ಪ್ರಶ್ನಿಸಿದರು.
ನಾನು ಬಾಂಬ್ ಸ್ಫೋಟವನ್ನು ಖಂಡಿಸುತ್ತೇನೆ. ಬಿಜೆಪಿಯವರು ರಾಜಕೀಯ ಮಾಡಬಾರದು ಎಂದರು. ಮಂಗಳೂರಿನಲ್ಲಿ ಕುಕ್ಕರ್ ಬಾಂಬ್ ಬ್ಲಾಸ್ಟ್ ಹಾಗೂ ಬಿಜೆಪಿ ಕಚೇರಿ ಮುಂದೆಯೇ ಸ್ಫೋಟವಾಗಿತ್ತು. ಆಗ ಬಿಜೆಪಿಯವರು ಅಧಿಕಾರದಲ್ಲಿದ್ದರು ಎಂದರು.
ಅಧಿಕಾರ ಹಂಚಿಕೊಳ್ಳಬೇಕು :ನಿಗಮ ಮಂಡಳಿಗಳಿಗೆ ಅಧ್ಯಕ್ಷರ ನೇಮಕಾತಿ ಬಗ್ಗೆ ಮಾತನಾಡಿ, ಅಧಿಕಾರ ಹಂಚಿಕೊಳ್ಳದೆ ಇದ್ದರೆ ಅಧಿಕಾರಕ್ಕೆ ಬರಲು ಶ್ರಮಿಸಿದ ಕಾರ್ಯಕರ್ತರು ಏನು ಮಾಡಬೇಕೆಂದರು. ಕರ್ನಾಟಕದ ಬಜೆಟ್ 3.70 ಕೋಟಿಯಾಗಿದೆ. ಅದಕ್ಕೆ 2 ಕೋಟಿ ವೆಚ್ಚವಾಗಬಹುದು ಎಂದರು.