ಕರ್ನಾಟಕ

karnataka

ETV Bharat / state

ರಾಹುಲ್ ಗಾಂಧಿ ಪರ ಪ್ರತಿಭಟನೆ : ನಲಪಾಡ್ ವಿರುದ್ಧ ಎಫ್​ಐಆರ್ - ರಾಹುಲ್ ಗಾಂಧಿ ಪರ ಪ್ರತಿಭಟನೆ

ಬೆಂಗಳೂರು ನಗರದಲ್ಲಿ ಪಂಜಿನ ಮೆರವಣಿಗೆ ನಡೆಸಿದ್ದ ಯುವ ಮುಖಂಡ ಮೊಹಮ್ಮದ್ ಹ್ಯಾರಿಸ್ ನಲಪಾಡ್ ವಿರುದ್ಧ ಹೈಗ್ರೌಂಡ್ಸ್​ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಾಹುಲ್ ಗಾಂಧಿ ಪರ ಪ್ರತಿಭಟನೆ : ನಲಪಾಡ್ ವಿರುದ್ಧ ಎಫ್​ಐಆರ್
ರಾಹುಲ್ ಗಾಂಧಿ ಪರ ಪ್ರತಿಭಟನೆ : ನಲಪಾಡ್ ವಿರುದ್ಧ ಎಫ್​ಐಆರ್

By ETV Bharat Karnataka Team

Published : Jan 24, 2024, 3:14 PM IST

Updated : Jan 24, 2024, 4:18 PM IST

ಬೆಂಗಳೂರು : ಅಸ್ಸೋಂನಲ್ಲಿ ಭಾರತ್ ನ್ಯಾಯ ಜೋಡೊ ಯಾತ್ರೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಅಡ್ಡಿಪಡಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್​ ಪ್ರತಿಭಟನೆ ನಡೆಸಿತ್ತು. ಮಂಗಳವಾರ ಪಂಜಿನ ಮೆರವಣಿಗೆ ನಡೆಸಿದ್ದ ಯುವ ಮುಖಂಡ ಮೊಹಮ್ಮದ್ ಹ್ಯಾರಿಸ್ ನಲಪಾಡ್ ಸೇರಿ ಹಲವರ ವಿರುದ್ಧ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಸ್ವಯಂ ಪ್ರೇರಿತ ಪ್ರಕರಣ ದಾಖಲಾಗಿದೆ.

ಹೈಗ್ರೌಂಡ್ಸ್ ಠಾಣೆ ಇನ್​ಸ್ಪೆಕ್ಟರ್ ಭರತ್, ಸ್ವಯಂಪ್ರೇರಿತವಾಗಿ ನಲಪಾಡ್ ಸೇರಿ ಇತರರ ವಿರುದ್ಧ ಈ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕಾಂಗ್ರೆಸ್ ಯುವ ಘಟಕದ ಅಧ್ಯಕ್ಷರ ನೇತೃತ್ವದಲ್ಲಿ ನಗರದ ಕಾಂಗ್ರೆಸ್ ಭವನದ ಮುಂದೆ ಪಂಜಿನ ಮೆರವಣಿಗೆ ಮಾಡಿ ಪ್ರತಿಭಟನೆ ನಡೆಸಲಾಗಿತ್ತು. ಕಾಂಗ್ರೆಸ್ ಭವನದ ಬಳಿ ಅನುಮತಿ ಪಡೆಯದೇ ಗುಂಪುಗೂಡಿ ಪ್ರತಿಭಟನೆ ಮಾಡಿದ್ದಾರೆಂದು ಎಫ್ಐಆರ್​ನಲ್ಲಿ ಉಲ್ಲೇಖಿಸಲಾಗಿದೆ. ಅಷ್ಟೇ ಅಲ್ಲದೆ ಸಾರ್ವಜನಿಕ ಸಂಚಾರಕ್ಕೆ ಅಡ್ಡಿಪಡಿಸಿದ ಆರೋಪ, ಅಕ್ರಮವಾಗಿ ಜನರ ಜಮಾವಣೆ, ಮೈಕ್ ಮೂಲಕ ಅನೌನ್ಸ್​ಮೆಂಟ್, ಸಾರ್ವಜನಿಕರಿಗೆ ತೊಂದರೆ ನೀಡಿದ ಆರೋಪದಡಿ ಹೈಗ್ರೌಂಡ್ ಠಾಣೆಯ ಇನ್ಸ್​​ಪೆಕ್ಟರ್​ ಈ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದ್ದಾರೆ.

ಕಾಂಗ್ರೆಸ್ ನಾಯಕರಿಂದ ಪ್ರತಿಭಟನೆ : ಅಸ್ಸೋಂನಲ್ಲಿ ರಾಹುಲ್ ಗಾಂಧಿ ನ್ಯಾಯ ಯಾತ್ರೆ ವೇಳೆ ಬಿಜೆಪಿ ಕಾರ್ಯಕರ್ತರು ನಡೆಸಿದ ದಾಳಿ ಖಂಡಿಸಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಬೆಂಗಳೂರಿನ ಫ್ರೀಡಂ ಪಾರ್ಕ್​ನಲ್ಲಿ ಕೂಡಾ ಮಂಗಳವಾರ ಪ್ರತಿಭಟನೆ ನಡೆಸಿತ್ತು. ಕೆಪಿಸಿಸಿ ಅಧ್ಯಕ್ಷ ಹಾಗೂ ಡಿಸಿಎಂ ಡಿ ಕೆ ಶಿವಕುಮಾರ್ ನೇತೃತ್ವದಲ್ಲಿ ಈ ಪ್ರತಿಭಟನೆ ನಡೆದಿತ್ತು.‌

ಇದೇ ವೇಳೆ ಮಾತನಾಡಿದ್ದ ಡಿ ಕೆ ಶಿವಕುಮಾರ್, ಪ್ರಜಾಪ್ರಭುತ್ವದಲ್ಲಿ ನಮ್ಮ ಅಭಿಪ್ರಾಯ ಹೇಳಲು ಹಕ್ಕು ಕೊಡಲಾಗಿದೆ. ದೇಶದ ನ್ಯಾಯಕ್ಕೋಸ್ಕರ ರಾಹುಲ್ ಗಾಂಧಿ ನ್ಯಾಯ ಯಾತ್ರೆ ಮಾಡುತ್ತಿದ್ದಾರೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಎಲ್ಲಾ ವರ್ಗದ ಜನರು ಅಧಿಕಾರಕ್ಕೆ ಬಂದ ಹಾಗೆ. ಬಿಜೆಪಿಯವರಿಗೆ ಇಂಥ ಯಾತ್ರೆ ಮಾಡಲು ಆಗಿಲ್ಲ. ದೊಡ್ಡ ಯಾತ್ರೆ ಕಾಂಗ್ರೆಸ್ ನಿಂದ ಮಾತ್ರ ಸಾಧ್ಯ. ಆದರೆ, ಬಿಜೆಪಿ ಇದಕ್ಕೆ ಅಡ್ಡಿ ಪಡಿಸುತ್ತಿದೆ. ಇದರಿಂದ ದೇಶದಲ್ಲಿ ಸಂವಿಧಾನ ಬದುಕಿದೆಯಾ? ಎಂಬ ಪ್ರಶ್ನೆ ಮೂಡಿದೆ. ಯಾತ್ರೆ ಬೆಂಬಲಕ್ಕೆ ನಾವು ಇಲ್ಲಿ ಸೇರಿದ್ದೇವೆ. ಯಾತ್ರೆಯಿಂದ ವಿಪಕ್ಷದವರಿಗೆ ಭಯ ಹುಟ್ಟಿದೆ ಎಂದಿದ್ದರು.

ಇದನ್ನೂ ಓದಿ:ರಾಹುಲ್​ ಗಾಂಧಿ ನ್ಯಾಯ ಯಾತ್ರೆಗೆ ಅಡ್ಡಿ ಖಂಡಿಸಿ ಕಾಂಗ್ರೆಸ್ ನಾಯಕರಿಂದ ಪ್ರತಿಭಟನೆ

Last Updated : Jan 24, 2024, 4:18 PM IST

ABOUT THE AUTHOR

...view details