ಬೆಂಗಳೂರು:ನಟ ದರ್ಶನ್ ಮನೆಯ ನಾಯಿ ಮಹಿಳೆಗೆ ಕಚ್ಚಿದ ಪ್ರಕರಣ ತನಿಖೆಯನ್ನು ಪೂರ್ಣಗೊಳಿಸಿರುವ ರಾಜರಾಜೇಶ್ವರಿನಗರ ಠಾಣೆ ಪೊಲೀಸರು ದೋಷಾರೋಪಪಟ್ಟಿ ಸಿದ್ಧಪಡಿಸಿದ್ದು, ಸೋಮವಾರ ನ್ಯಾಯಾಲಯಕ್ಕೆ ಸಲ್ಲಿಸುವ ಸಾಧ್ಯತೆಯಿದೆ ಎಂದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ.
ಈ ಪ್ರಕರಣದಲ್ಲಿ ನಟ ದರ್ಶನ್ ಅವರ ಪಾತ್ರ ಇಲ್ಲದಿರುವ ಹಿನ್ನೆಲೆಯಲ್ಲಿ ಪ್ರಕರಣದಿಂದ ಅವರ ಹೆಸರನ್ನು ಕೈಬಿಡಲಾಗಿದೆ ಎನ್ನಲಾಗಿದೆ. ಘಟನೆಗೂ ದರ್ಶನ್‌ಗೂ ಯಾವುದೇ ಸಂಬಂಧವಿಲ್ಲ ಎಂದು ಉಲ್ಲೇಖಿಸಲಾಗಿದೆ. ಆದರೆ ದರ್ಶನ್ ಮನೆಯ ಕೆಲಸಗಾರ ಹೇಮಂತ್ ವಿರುದ್ಧ ಪೊಲೀಸರು ದೋಷಾರೋಪ ಪಟ್ಟಿ ಸಲ್ಲಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಸುಮಾರು 150ಕ್ಕೂ ಅಧಿಕ ಪುಟಗಳ ಚಾರ್ಜ್‌ಶೀಟ್‌ನಲ್ಲಿ ಆರೋಪಿ ಹೇಮಂತ್, ನಟ ದರ್ಶನ್, ಸಂತ್ರಸ್ತೆ ಅಮಿತಾ ಜಿಂದಲ್ ಸೇರಿ ಹಲವರ ಹೇಳಿಕೆಯನ್ನು ದಾಖಲಿಸಲಾಗಿದೆಯಂತೆ .
5ಕ್ಕೂ ಹೆಚ್ಚು ಮಂದಿಯನ್ನು ಸಾಕ್ಷ್ಯಗಳಾಗಿ ಪರಿಗಣಿಸಿರುವ ಪೊಲೀಸರು, ಅವರ ಹೇಳಿಕೆಯನ್ನು ದೋಷಾರೋಪಪಟ್ಟಿಯಲ್ಲಿ ಉಲ್ಲೇಖಿಸಿದ್ದಾರೆ ಎಂದು ತಿಳಿದು ಬಂದಿದೆ.
ಪ್ರಕರಣದ ಹಿನ್ನೆಲೆ: ಅ.28 2024ರಂದು ಬಿಇಎಂಎಲ್ 5ನೇ ಹಂತದ ನಿವಾಸಿ ಅಮಿತಾ ಜಿಂದಾಲ್ ಎಂಬುವವರು ರಾಜರಾಜೇಶ್ವರಿನಗರದ ನಟ ದರ್ಶನ್ ಮನೆಯ ಸಮೀಪ ತಮ್ಮ ಕಾರನ್ನು ನಿಲುಗಡೆ ಮಾಡಿ ಕಾರ್ಯಕ್ರಮವೊಂದಕ್ಕೆ ತೆರಳಿದ್ದರು. ಕಾರ್ಯಕ್ರಮ ಮುಗಿಸಿಕೊಂಡು ಕಾರಿನ ಬಳಿ ಬಂದಾಗ, ದರ್ಶನ್ ಮನೆಯ ಕೆಲಸಗಾರ ಹೇಮಂತ್ ಕಾರಿನ ಬಳಿಯೇ ನಾಯಿಯನ್ನು ಕಟ್ಟಿ ಹಾಕಿದ್ದರು. ಈ ವೇಳೆ ಆ ನಾಯಿ ಅಮಿತಾ ಜಿಂದಾಲ್ ಮೇಲೆ ದಾಳಿ ನಡೆಸಿ ಕಚ್ಚಿತ್ತು. ಈ ಸಂಬಂಧ ಅಮಿತಾ ಜಿಂದಾಲ್, ಠಾಣೆಗೆ ದೂರು ನೀಡಿದ್ದರು. ಈ ದೂರು ಆಧರಿಸಿ ಎಫ್‌ಐಆರ್ ದಾಖಲಿಸಿದ್ದ ಪೊಲೀಸರು, ಇದೀಗ ತನಿಖೆ ಪೂರ್ಣಗೊಳಿಸಿದ್ದಾರೆ.
ನ. 15ರಂದು ವಿಚಾರಣಗೆ ಹಾಜರಾಗಿದ್ದ ನಟ: ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗಲು ಸೂಚಿಸಿ ಆರ್.ಆರ್.ನಗರ ಠಾಣೆ ಪೊಲೀಸರು ನಟ ದರ್ಶನ್ ಅವರಿಗೆ ನೋಟಿಸ್ ಜಾರಿ ಮಾಡಿದ್ದರು. ದರ್ಶನ್ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡ ಬಳಿಕ ಮೂರು ದಿನದೊಳಗೆ ಠಾಣೆಗೆ ಬಂದು ವಿಚಾರಣೆಗೆ ಹಾಜರಾಗುವಂತೆ ನೋಟಿಸ್‌ನಲ್ಲಿ ತಿಳಿಸಿದ್ದರು. ಆದರೆ ದರ್ಶನ್ ಹಾಜರಾಗಿರಲಿಲ್ಲ. ಬಳಿಕ ಎರಡನೇ ಬಾರಿ ನೋಟಿಸ್ ಜಾರಿ ಮಾಡಲಾಗಿತ್ತು. ನ.15ರಂದು ನಟ ವಿಚಾರಣೆಗೆ ಹಾಜರಾಗಿ ತಮ್ಮ ಹೇಳಿಕೆ ದಾಖಲಿಸಿದ್ದರು.
ಇದನ್ನೂ ಓದಿ:ಅವಧಿ ಮೀರಿ ಪಬ್ನಲ್ಲಿ ಪಾರ್ಟಿ ಆರೋಪ: ದರ್ಶನ್ ಸೇರಿ ಎಂಟು ಮಂದಿ ವಿಚಾರಣೆ ನಡೆಸಿದ ಪೊಲೀಸರು