ಚಾಮರಾಜನಗರ: ಇತ್ತೀಚೆಗಷ್ಟೇ ರಾಜ್ಯಸಭೆಯಲ್ಲಿ ನಡೆದ ಚರ್ಚೆಯ ವೇಳೆ ಡಾ.ಬಿ.ಆರ್.ಅಂಬೇಡ್ಕರ್ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ನೀಡಿದ ಹೇಳಿಕೆಯನ್ನು ವಿರೋಧಿಸಿ ದಲಿತ ಹಾಗೂ ಪ್ರಗತಿಪರ ಸಂಘಟನೆಗಳು ಡಿ.31ರಂದು ಚಾಮರಾಜನಗರ ಬಂದ್ ಆಚರಿಸಲು ನಿರ್ಧರಿಸಿವೆ.
ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ದಲಿತ ಮಹಾಸಭಾದ ರಾಜ್ಯ ಉಪಾಧ್ಯಕ್ಷ ವೆಂಕಟರಮಣಸ್ವಾಮಿ(ಪಾಪು) ನೇತೃತ್ವದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಚಾಮರಾಜನಗರ ಬಂದ್ಗೆ ನಿರ್ಧರಿಸಲಾಯಿತು. ಸಭೆಯಲ್ಲಿ ಎಸ್‌ಡಿಪಿಐ ನಗರಸಭಾ ಸದಸ್ಯ ಎಂ.ಮಹೇಶ, ದಲಿತ ಸಂಘರ್ಷ ಸಮಿತಿ ಸಂಚಾಲಕ ಸಿ.ಎಂ.ಶಿವಣ್ಣ, ಯ.ನಾಗರಾಜು, ಲಾರಿ ಮಾಲೀಕರ ಸಂಘದ ಇರ್ಷಾದ್, ರಾಮಸಮುದ್ರ ಸುರೇಶ್ ಬಂದ್ಗೆ ಸಂಪೂರ್ಣ ಬೆಂಬಲ ನೀಡುವುದಾಗಿ ತಿಳಿಸಿದರು.