ಬೆಂಗಳೂರು: ಬೆಂಗಳೂರು ಅರಮನೆ ಮೈದಾನ ಭೂಮಿ ಬಳಕೆಗೆ ಟಿಡಿಆರ್ ಕೊಡುವ ಕುಣಿಕೆಯಿಂದ ತಪ್ಪಿಸಲು ಸುಗ್ರೀವಾಜ್ಞೆ ಹೊರಡಿಸಲು ಸಚಿವ ಸಂಪುಟ ಸಭೆ ತೀರ್ಮಾನಿಸಿದೆ. ಈ ಸುಗ್ರೀವಾಜ್ಞೆ ಜಾರಿ ಮಾಡುವುದರಿಂದ ಅಗತ್ಯ ಇರುವಷ್ಟು ಜಾಗವನ್ನು ಬಳಸಿಕೊಳ್ಳಲು ಮತ್ತು ಉದ್ದೇಶಿತ ರಸ್ತೆ ಅಗಲೀಕರಣ ಪ್ರಸ್ತಾವನೆ ಕೈಬಿಡಲು ರಾಜ್ಯ ಸರ್ಕಾರಕ್ಕೆ ಅಧಿಕಾರ ದೊರೆಯಲಿದೆ.
ಸಿಎಂ ನೇತೃತ್ವದಲ್ಲಿ ನಡೆದ ತುರ್ತು ಸಚಿವ ಸಂಪುಟ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಆ ಮೂಲಕ ಸುಪ್ರೀಂಕೋರ್ಟ್ ತೀರ್ಪಿನಂತೆ 3,014 ಕೋಟಿ ರೂ. ಟಿಡಿಆರ್ ಕಟ್ಟಬೇಕಾದ ಬೀಸೋ ದೊಣ್ಣೆಯಿಂದ ರಾಜ್ಯ ಸರ್ಕಾರ ತಪ್ಪಿಸಿಕೊಂಡಂತಾಗಿದೆ. ಈ ಬಗ್ಗೆ ಮಾತನಾಡಿರುವ ಕಾನೂನು ಸಚಿವ ಹೆಚ್.ಕೆ.ಪಾಟೀಲ್, "ಯಾವುದೇ ನ್ಯಾಯಾಲಯದ ತೀರ್ಪು ಅಥವಾ ಸರ್ಕಾರ ಈ ಮೊದಲು ಕೈಗೊಂಡ ಯಾವುದೇ ತೀರ್ಮಾನದಂತೆ ಯಾವುದೇ ಮೂಲಸೌಕರ್ಯ ಯೋಜನೆಯಿಂದ ಭಾಗಶಃ ಅಥವಾ ಸಂಪೂರ್ಣವಾಗಿ ಹಿಂದೆ ಸರಿಯಲು ಈ ಸುಗ್ರಿವಾಜ್ಞೆ ಅವಕಾಶ ಕಲ್ಪಿಸುತ್ತದೆ" ಎಂದು ತಿಳಿಸಿದರು.
ಕಾನೂನು ಸಚಿವ ಹೆಚ್.ಕೆ.ಪಾಟೀಲ್ (ETV Bharat) ಅದರಂತೆ ಬೆಂಗಳೂರಿನ ಜಯಮಹಲ್ ಮತ್ತು ಬಳ್ಳಾರಿ ರಸ್ತೆ ಅಗಲೀಕರಣ ಯೋಜನೆಯನ್ನು ಕೈಬಿಡಲು ಅನುವು ಮಾಡುವ ಸುಗ್ರೀವಾಜ್ಞೆ ತರಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ಕಳೆದ ಸಚಿವ ಸಂಪುಟ ಸಭೆಯಲ್ಲಿ ಸುಪ್ರೀಂಕೋರ್ಟ್ ತೀರ್ಪಿನಂತೆ ಬೆಂಗಳೂರು ಅರಮನೆ ಮೈದಾನಕ್ಕೆ ಸೇರಿದ 15.36 ಎಕರೆ ಜಮೀನನ್ನು ಉಪಯೋಗಿಸಿಕೊಳ್ಳುವುದಕ್ಕೆ ನಿಗದಿಪಡಿಸಿದ ಟಿ.ಡಿ.ಆರ್ ದರದ ಬಗ್ಗೆ ಚರ್ಚಿಸಲಾಗಿತ್ತು. ಸುಪ್ರೀಂ ಕೋರ್ಟ್ 21.12.2024ರ ಆದೇಶಾನುಸಾರ ರೂ.2,83,500 ಪ್ರತಿ ಚ.ಮೀಟರ್‌ಗೆ (ಬಳ್ಳಾರಿ ರಸ್ತೆ) ಮತ್ತು ರೂ. 2,04,000 ಪ್ರತಿ ಚ.ಮೀಟರ್‌ಗೆ (ಜಯಮಹಲ್ ರಸ್ತೆ) ಮೌಲ್ಯದಂತೆ ಅಂದಾಜು ರೂ. 3,014 ಕೋಟಿ ಟಿಡಿಆರ್ ನೀಡಲು ಆದೇಶಿಸಿತ್ತು.
ಬೆಂಗಳೂರು ಅರಮನೆ ಮೈದಾನದ ಒಟ್ಟು 472 ಎಕರೆ 16 ಗುಂಟೆ ಜಾಗಕ್ಕೆ ಬೆಂಗಳೂರು ಅರಮನೆ (ಆರ್ಜನೆ ಮತ್ತು ವರ್ಗಾವಣೆ) ಅಧಿನಿಯಮ 1996ರಂತೆ ರೂ.11 ಕೋಟಿಗಳನ್ನು ನಿಗದಿಗೊಳಿಸಲಾಗಿತ್ತು. ಮೂಲ ಕಾನೂನಿನ ಸಿಂಧುತ್ವವನ್ನು ಕರ್ನಾಟಕ ಹೈಕೋರ್ಟ್ ಎತ್ತಿ ಹಿಡಿದಿದೆ. 1996ರ ಈ ಕಾಯ್ದೆಗೆ ಸುಪ್ರೀಂ ಕೋರ್ಟ್ ಯಾವುದೇ ತಡೆಯಾಜ್ಞೆ ಕೊಟ್ಟಿಲ್ಲ. ಆದರೆ, 10.12.2024ರ ಸುಪ್ರೀಂ ಕೋರ್ಟ್ ತೀರ್ಪಿನಲ್ಲಿ ನ್ಯಾಯಾಂಗ ನಿಂದನೆ ಪ್ರಕರಣ ಮತ್ತು ಇತರ ಪ್ರಕರಣಗಳಲ್ಲಿ ಕರ್ನಾಟಕ ಸ್ಟಾಂಪ್ ಕಾಯ್ದೆಯ ಸೆಕ್ಷನ್ 45ಬಿ ಗೆ ಅನುಗುಣವಾಗಿ ಬೆಂಗಳೂರು ಅರಮನೆ ಮೈದಾನಕ್ಕೆ ಹೊಂದಿಕೊಂಡಂತಹ ಪ್ರದೇಶಗಳಿಗೆ ಚಾಲ್ತಿಯಲ್ಲಿರುವ ಮಾರ್ಗಸೂಚಿ ಮೌಲ್ಯಕ್ಕೆ ಅನುಗುಣವಾಗಿ ರಸ್ತೆ ಅಗಲೀಕರಣ ಉದ್ದೇಶಕ್ಕಾಗಿ ಬೆಂಗಳೂರು ಅರಮನೆ ಜಾಗವನ್ನು ಮೌಲ್ಯೀಕರಿಸಿ ವರ್ಗಾವಣೆ ಮಾಡಬಹುದಾದ ಅಭಿವೃದ್ಧಿ ಹಕ್ಕುಗಳನ್ನು (ಟಿ.ಡಿ.ಆರ್) ನೀಡುವಂತೆ ನಿರ್ದೇಶಿಸಿದೆ ಎಂದು ವಿವರಿಸಿದರು.
2 ಕಿ.ಮೀ ರಸ್ತೆ ಅಗಲೀಕರಣಕ್ಕೆ 15.36 ಎಕರೆ ಭೂಮಿ (13,91,742 ಚದರ ಅಡಿ) ಅರಮನೆ ಮೈದಾನದ ಭೂಮಿ ಬೇಕಾಗಿತ್ತು. ಅದರ ಒಟ್ಟು ಬೆಲೆ 2,17,000 ರೂ. ಪ್ರತಿ ಚದರ ಮೀಟರ್ ಆಗುತ್ತದೆ. ಅದರಂತೆ ಪ್ರತಿ ಎಕರೆಗೆ ಸುಮಾರು 200 ಕೋಟಿಯಂತೆ 3,014 ಕೋಟಿ ರೂ ಟಿಡಿಆರ್ ಕೊಡಬೇಕಾಗಿದೆ. ಪ್ರತಿ ಎಕರೆಗೆ ರೂ.200 ಕೋಟಿ ನೀಡಿದರೆ ದೊಡ್ಡ ಆರ್ಥಿಕ ಹೊರೆ ಉಂಟಾಗಿ ಅಭಿವೃದ್ಧಿಗೆ ಮಾರಕವಾಗಿರುತ್ತದೆ. ಹೀಗಾಗಿ 1996ರ ಕಾಯ್ದೆಗೆ ಪೂರಕವಾದ ಈ ಸುಗ್ರಿವಾಜ್ಞೆಯನ್ನು ರಾಜ್ಯಪಾಲರಿಗೆ ಮಂಡಿಸಲು ರಾಜ್ಯ ಸಚಿವ ಸಂಪುಟ ಸಭೆ ತೀರ್ಮಾನಿಸಿದೆ ಎಂದು ತಿಳಿಸಿದರು.
ಕಳೆದ ವಾರ ನಡೆದ ಸಂಪುಟ ಸಭೆಯಲ್ಲಿ ಬೆಂಗಳೂರು ಅರಮನೆಯನ್ನು ವಶಪಡಿಸಿಕೊಂಡಿರುವ 1997 ರ ಕಾಯ್ದೆಯ ಸಿಂಧುತ್ವವನ್ನು ಎತ್ತಿ ಹಿಡಿಯಲು ಸುಪ್ರೀಂ ಕೋರ್ಟ್ ಮುಂದೆ ರಾಜ್ಯ ಸರ್ಕಾರ ಸಲ್ಲಿಸಿರುವ ಮೇಲ್ಮನವಿ ಅರ್ಜಿಯನ್ನು ತುರ್ತು ವಿಚಾರಣೆಗೆ ಕೈಗೆತ್ತಿಕೊಳ್ಳವಂತೆ ಮನವಿ ಮಾಡಲು ತೀರ್ಮಾನಿಸಲಾಗಿತ್ತು. ಜೊತೆಗೆ ಅರಮನೆ ಮೈದಾನ ಭೂ ಸ್ವಾಧೀನದ ಮೂಲ ವ್ಯಾಜ್ಯದ ಮೇಲಿನ ಸುಪ್ರೀಂ ಕೋರ್ಟ್ ನ 2001ರ ಸುಪ್ರೀಂ ಕೋರ್ಟ್ ಆದೇಶ ಉಲ್ಲಂಘಿಸಿದ ಹಿನ್ನೆಲೆ ಮೈಸೂರು ಮಹಾರಾಜರ ಉತ್ತರಾಧಿಕಾರಿ ವಿರುದ್ಧ ನ್ಯಾಯಾಂಗ ನಿಂದನೆ ಅರ್ಜಿ ಹಾಕಲು ತೀರ್ಮಾನಿಸಲಾಗಿತ್ತು.
ಅರಮನೆ ಮೈದಾನ ಒಡೆತನ ಸಂಬಂಧ 1997ರಲ್ಲಿ ರಾಜ್ಯ ಸರ್ಕಾರ ಮೂಲ ವ್ಯಾಜ್ಯ ಹೂಡಿದೆ. ಆ ಮೂಲ ವ್ಯಾಜ್ಯ ಸಂಬಂಧ 2001ರಲ್ಲಿ ಸುಪ್ರೀಂ ಕೋರ್ಟ್ ಯಥಾಸ್ಥಿತಿ ಕಾಪಾಡುವಂತೆ ಆದೇಶಿಸಿತ್ತು. ಆದರೆ, ಸುಪ್ರೀಕೋರ್ಟ್ 2001ರ ಆದೇಶ ಉಲ್ಲಂಘಿಸಿ 2,00,000 ಚ.ಅಡಿ ಭೂಮಿಯಲ್ಲಿ ಖಾಯಂ ಕಟ್ಟಡ ನಿರ್ಮಿಸಿದ ಮಹಾರಾಜರ ಉತ್ತರಾಧಿಕಾರಿ ಮೇಲೆ ನ್ಯಾಯಾಂಗ ನಿಂದನೆ ಹೂಡಲು ತೀರ್ಮಾನ ಮಾಡಲು ತೀರ್ಮಾನಿಸಿತ್ತು. ಆದರೆ, ಬುಧವಾರ ಸುಪ್ರೀಂ ಕೋರ್ಟ್ನಲ್ಲಿ ರಾಜ್ಯ ಸರ್ಕಾರ ಸಲ್ಲಿಸಿದ್ದ ನ್ಯಾಯಾಂಗ ನಿಂದನೆ ಅರ್ಜಿ ವಿಚಾರಣೆಗೆ ಬಂದಿದೆ. ಮೂಲ ವ್ಯಾಜ್ಯವನ್ನು ಶೀಘ್ರ ಇತ್ಯರ್ಥ ಗೊಳಿಸುವಂತೆ ಮನವಿ ಮಾಡಿದರು. ಈ ಸಂದರ್ಭ ಟಿಡಿಆರ್ ಸಂಬಂಧ ನೀಡಿದ ಆದೇಶ ಜಾರಿ ವಿಚಾರದಲ್ಲಿ ಏನು ಕ್ರಮಗಳಾಗಿವೆ ಎಂದು ಸುಪ್ರೀಂ ಕೋರ್ಟ್ ಕೇಳಿದಾಗ ಅರಮನೆ ಸ್ವತ್ತು ನಿಗದಿ ಪಡಿಸಿದ ಟಿಡಿಆರ್ ಮೊತ್ತ ಸರ್ಕಾರದ ಬೊಕ್ಕಸಕ್ಕೆ ಹೊರೆಯಾಗಲಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ತೆಗೆದುಕೊಂಡು ತಿಳಿಸಲಾಗುವುದು ಎಂದು ಹೇಳಿತ್ತು. ಆ ಹಿನ್ನೆಲೆ ಇಂದು ತುರ್ತು ಸಚಿವ ಸಂಪುಟ ಸಭೆ ನಡೆಸಿ ಟಿಡಿಆರ್ ಕೊಡದಿರುವ ಬಗ್ಗೆ ಸುಗ್ರೀವಾಜ್ಞೆ ಹೊರಡಿಸಲು ತೀರ್ಮಾನಿಸಲಾಗಿದೆ.
ಕಾರ್ಯಕಲಾಪಗಳ ನಿರ್ವಹಣೆ ನಿಯಮಗಳಿಗೆ ತಿದ್ದುಪಡಿಗೆ ಒಪ್ಪಿಗೆ:"ಕೆಲ ಅಧ್ಯಾದೇಶಗಳು, ಮಸೂದೆಗಳು ಅತೀ ಕಡಿಮೆ ಪ್ರಾಮುಖ್ಯತೆ ಹೊಂದಿರುವ ವಿಷಯಗಳೆಂದು ಮುಖ್ಯಮಂತ್ರಿಯವರು ಅಭಿಪ್ರಾಯ ಪಡುವ ಪ್ರಸ್ತಾವಗಳನ್ನು ಹೊರತುಪಡಿಸಿ" ಎಂಬ ನಿಯಮವನ್ನು ತಿದ್ದುಪಡಿ ಮಾಡಿ ತುರ್ತು ಸಂದರ್ಭಗಳಲ್ಲಿ ರಾಜ್ಯ ಸಚಿವ ಸಂಪುಟದ ಪೂರ್ವಾನುಮೋದನೆ ಇಲ್ಲದೇ ರಾಜ್ಯ ವಿಧಾನ ಮಂಡಲದಲ್ಲಿ ವಿಧೇಯಕಗಳನ್ನು ಮಂಡಿಸಲು ಮುಖ್ಯಮಂತ್ರಿಗಳಿಗೆ ಅಧಿಕಾರ ನೀಡುತ್ತದೆ. ಇಂತಹ ಪ್ರಸ್ತಾವನೆಗಳಿಗೆ ಘಟನೋತ್ತರ ಮಂಜೂರಾತಿ ಪಡೆಯಲು ಈ ತಿದ್ದುಪಡಿಯಲ್ಲಿ ಅವಕಾಶ ನೀಡಲಾಗುತ್ತದೆ.
ಇದನ್ನೂ ಓದಿ:ಮೈಸೂರು ಮಹಾರಾಜರ ಉತ್ತರಾಧಿಕಾರಿ ವಿರುದ್ದ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಲು ಸಂಪುಟ ಸಭೆ ತೀರ್ಮಾನ