ಬೆಂಗಳೂರು:ಇವತ್ತಿನ ಬೆಳವಣಿಗೆಗಳು ಅನಿರೀಕ್ಷಿತವೇನಲ್ಲ, ಎಲ್ಲವೂ ಕೂಡ ನಿರೀಕ್ಷಿತವೇ, ಕಾಂಗ್ರೆಸ್ನಲ್ಲೂ ಯೋಗೇಶ್ವರ್ಗೆ ನಿಕಟ ಸಂಪರ್ಕ ಇತ್ತು. ಹಾಗಾಗಿ ಒಂದು ರಾಜಕೀಯ ನಿರ್ಧಾರವನ್ನು ಅಂತಿಮವಾಗಿ ತೆಗೆದುಕೊಂಡಿದ್ದಾರೆ. ಯೋಗೇಶ್ವರ್ಗೆ ಒಳ್ಳೆಯದಾಗಲಿ ಎಂದು ಹಾರೈಸುವುದಾಗಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ತಿಳಿಸಿದರು.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈ ಉಪ ಚುನಾವಣೆಯ ಸಂಬಂಧ ನಾನು, ನಮ್ಮ ಪಕ್ಷದ ಕೆಲವು ಹಿರಿಯ ಮುಖಂಡರು, ಜೆಡಿಎಸ್ ಪಕ್ಷದ ಮುಖಂಡರು, ಕುಮಾರಸ್ವಾಮಿಯವರು ಕುಳಿತು ಚರ್ಚೆ ಮಾಡುತ್ತೇವೆ. ಚನ್ನಪಟ್ಟಣದಲ್ಲಿ ಯಾರು ಅಭ್ಯರ್ಥಿ ಎಂದು ಜೆಡಿಎಸ್‍ನವರು ತೀರ್ಮಾನ ಮಾಡಬೇಕಾಗುತ್ತದೆ. ಯಾರನ್ನೇ ಅಭ್ಯರ್ಥಿ ಎಂದು ಘೋಷಿಸಿದರೂ ಬಿಜೆಪಿ ಮತ್ತು ಜೆಡಿಎಸ್ ಒಟ್ಟಾಗಿ, ಒಂದಾಗಿ ಈ ಚುನಾವಣೆಯನ್ನು ಎದುರಿಸುತ್ತೇವೆ ಎಂದು ತಿಳಿಸಿದರು.
ಎನ್‍ಡಿಎ ಅಭ್ಯರ್ಥಿ ಗೆಲ್ಲುವ ನಿಟ್ಟಿನಲ್ಲಿ ನಾವು ಸಂಪೂರ್ಣವಾಗಿ ಶ್ರಮಿಸುತ್ತೇವೆ ಮತ್ತು ಯಶಸ್ವಿಯಾಗುವ ಸಂಪೂರ್ಣ ವಿಶ್ವಾಸ ಇದೆ. ಯೋಗೇಶ್ವರ್ ಪಕ್ಷ ತೊರೆದಿದ್ದರಿಂದ ಪಕ್ಷದ ಸಂಘಟನೆ ಮೇಲೆ ಯಾವುದೇ ರೀತಿಯ ಪರಿಣಾಮ ಬೀರುವುದಿಲ್ಲ. ಯೋಗೇಶ್ವರ್ ಅವರು ಚನ್ನಪಟ್ಟಣದಿಂದ ಈ ಹಿಂದೆ ಕಾಂಗ್ರೆಸ್ ಪಕ್ಷ, ಪಕ್ಷೇತರರಾಗಿ ಗೆದ್ದಿದ್ದರು. ಅದು ಬೇರೆ ಪ್ರಶ್ನೆ. ಹಳೆ ಮೈಸೂರು ಭಾಗದಲ್ಲೂ ಬಿಜೆಪಿ ಸಂಘಟನೆಯನ್ನು ಹೆಚ್ಚು ವೃದ್ಧಿಸುವುದು ನಮ್ಮ ಗುರಿ ಎಂದರು.