ಬೆಂಗಳೂರು:ಪ್ರಶ್ನೋತ್ತರ ಕಲಾಪದಲ್ಲಿ ಪ್ರತಿಪಕ್ಷಗಳ ವಿರುದ್ಧ ಸಿಎಂ ಸಿದ್ದರಾಮಯ್ಯ ಅವರು ಬಳಸಿದ ಕೆಲ ಪದಗಳು ವಿಧಾನ ಪರಿಷತ್ನಲ್ಲಿ ಗದ್ದಲ ಕೋಲಾಹಲ ಸೃಷ್ಟಿಗೆ ಕಾರಣವಾದವು. ಪದಗಳನ್ನು ಕಡತದಿಂದ ತೆಗೆದರೂ ಸಮಾಧಾನಗೊಳ್ಳದ ಪ್ರತಿಪಕ್ಷದ ಸದಸ್ಯರು, ಆ ಪದಗಳ ಬಳಕೆಗೆ ಸಂಬಂಧಿಸಿದಂತೆ ಸಿಎಂ ವಿಷಾದ ವ್ಯಕ್ತಪಡಿಸಬೇಕೆಂದು ಪಟ್ಟುಹಿಡಿದರು. ಆದರೆ, ಸಿಎಂ ತಮ್ಮ ನಿಲುವನ್ನು ಸಮರ್ಥಿಸಿಕೊಂಡರು. ಈ ಹಿನ್ನೆಲೆ ಬಿಜೆಪಿ ಮತ್ತು ಜೆಡಿಎಸ್ ಸದಸ್ಯರು ಸಭಾತ್ಯಾಗ ಮಾಡಿದರು.
ಪ್ರಶ್ನೋತ್ತರ ಕಲಾಪದಲ್ಲಿ ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಬರಬೇಕಾದ ತೆರಿಗೆ ಬಾಕಿ ವಿಚಾರದ ಕುರಿತ ಪ್ರಶ್ನೆಗೆ ಸಿಎಂ ಉತ್ತರಿಸುವ ವೇಳೆ ನಡೆದ ಗದ್ದಲದಿಂದ 10 ನಿಮಿಷ ಮುಂದೂಡಿಕೆ ಆಗಿದ್ದ ಕಲಾಪ ಮ. 1.15 ಗಂಟೆ ನಂತರ ಆರಂಭವಾಯಿತು. ಕಲಾಪ ಆರಂಭವಾಗುತ್ತಿದ್ದಂತೆ ಮಾತನಾಡಿದ ಜೆಡಿಎಸ್ ಸದಸ್ಯ ಶರವಣ ಪ್ರಶ್ನೋತ್ತರಕ್ಕೆ ಎಷ್ಟು ಸಮಯ ನಿಗದಿ ಇದೆ. ಐದು ನಿಮಿಷದವರೆಗೆ ಮಾತನಾಡಬಹುದು. ಆದರೆ ಸಿಎಂ ಭಾಷಣದ ರೀತಿ ಮಾತನಾಡಿದ್ದಾರೆ, ಒಂದು ಪ್ರಶ್ನೆಗೆ ಎಷ್ಟು ಸಮಯ ನಿಗದಿಯಾಗಿದೆ? ಸಿಎಂ ಭಾಷಣದಲ್ಲಿ ನಮ್ಮನ್ನೆಲ್ಲಾ ಉದ್ದೇಶಿಸಿ ಬಳಸಿದ ಕೆಲ ಪದಗಳು ಎಷ್ಟರಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು. ಈ ವೇಳೆ ಮತ್ತೆ ಸದನದಲ್ಲಿ ಗದ್ದಲದ ವಾತಾವರಣ ಸೃಷ್ಟಿಯಾಯಿತು. ಸದಸ್ಯರ ವರ್ತನೆಗೆ ಅಸಮಾಧಾನ ವ್ಯಕ್ತಪಡಿಸಿದ ಸಭಾಪತಿ ಬಸವರಾಜ ಹೊರಟ್ಟಿ, ನನ್ನ ಸೌಜನ್ಯ ದುರುಪಯೋಗ ಪಡಿಸಿಕೊಳ್ಳಬೇಡಿ, ಸದನ ನಡೆಸಲು ಅವಕಾಶ ನೀಡಿ ಎಂದು ಸೂಚಿಸಿದರು.
ಈ ವೇಳೆ ಮಾತನಾಡಿದ ಪ್ರತಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ, ಒಂದು ಪ್ರಶ್ನೆಗೆ 4 ನಿಮಿಷ ಉತ್ತರ ನೀಡಬಹುದು. ಆದರೆ ಸಿಎಂ ಸಿದ್ದರಾಮಯ್ಯ ಹೆಚ್ಚು ಮಾತನಾಡಿದ್ದಾರೆ. ಇದಕ್ಕೆ ಆಕ್ಷೇಪ ಇಲ್ಲ, ಆದರೆ ಸಿಎಂ ಬಳಸಿದ ಪದಗಳು ನಮಗೆ ನೋವಾಗಿದೆ. ಸಿಎಂ ಎನ್ನುವುದು ವ್ಯಕ್ತಿಯಲ್ಲ ಹುದ್ದೆ. ಸುದೀರ್ಘ ಅನುಭವ ಇರುವ ಸಿಎಂ ಈ ರೀತಿ ಪದ ಬಳಸಿದ್ದಕ್ಕೆ ನೋವಾಗಿದೆ. ಹಾಗಾಗಿ ಅವರು ವಿಷಾದ ವ್ಯಕ್ತಪಡಿಸಬೇಕು ಎಂದು ಮನವಿ ಮಾಡಿದರು.
ಬಿಜೆಪಿ ಬೇಡಿಕೆ ತಳ್ಳಿಹಾಕಿದ ಕಾನೂನು ಸಚಿವ ಹೆಚ್ ಕೆ ಪಾಟೀಲ್, ಗಂಭೀರ ಸಮಸ್ಯೆಗೆ ಉತ್ತರ ಹೇಳುವಾಗ ಎರಡೂ ಕಡೆ ಆಕ್ರೋಶದ ವಾತಾವರಣ ಇತ್ತು. ಸದನ ಮುಂದೂಡಿ ಮತ್ತೆ ಈಗ ಆರಂಭವಾಗಿದೆ, ಕೆಲ ಪದ ಕಡತದಿಂದ ತೆಗೆಸಿದ್ದೀರಿ. ಒಮ್ಮೆ ಆ ವಿಷಯ ತೆಗೆದುಹಾಕಿದ ನಂತರ ಅದು ಅಲ್ಲಿಗೆ ಮುಕ್ತಾಯವಾಗಿದೆ. ಹಾಗಾಗಿ ಅದರ ಬಗ್ಗೆ ಮತ್ತೆ ಚರ್ಚೆ, ಮತ್ತೆ ಪ್ರಸ್ತಾಪ ಸರಿಯಲ್ಲ ಎಂದು ತಿಳಿಸಿದರು.
ಸಿಎಂ ಕ್ಷಮೆಗೆ ಆಗ್ರಹ: ಸರ್ಕಾರದ ಸಮಜಾಯಿಷಿಗೆ ಪ್ರತಿಪಕ್ಷ ಸಚೇತಕ ರವಿಕುಮಾರ್ ಅಸಮಾಧಾನ ವ್ಯಕ್ತಪಡಿಸಿ, ಸಿಎಂ ಕ್ಷಮೆಗೆ ಆಗ್ರಹಿಸಿದರು. ಕಡತದಿಂದ ತೆಗೆದಿದ್ದನ್ನು ಒಪ್ಪಿಕೊಳ್ಳುತ್ತೇವೆ, ಆದರೆ ಕ್ಷಮೆ ಕೇಳಬೇಕು. ಹೌದು ತಪ್ಪಾಗಿದೆ ಎಂದು ಕ್ಷಮೆ ಕೇಳಿದರೆ ಏನು ತಪ್ಪಾಗಲಿದೆ? ಎಂದರು. ಇದಕ್ಕೆ ದನಿಗೂಡಿಸಿದ ಪ್ರತಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ, ಯಾರು ಏನು ಬೇಕಾದರೂ ಹೇಳಿ ಕಡತದಿಂದ ತೆಗೆದರೆ ಮುಂದೆ ಇದೇ ಸಂಪ್ರದಾಯ ಮುಂದುವರೆಯುವ ಅಪಾಯ ಇದೆ. ಮಾತಾಡಿ ಕಡತದಿಂದ ತೆಗೆಸಿದರೆ ಆಯಿತು ಎನ್ನುವ ಪರಿಪಾಠ ಶುರುವಾಗಲಿದೆ. ಹಾಗಾಗಿ ಸಿಎಂ ಕ್ಷಮೆಯಾಚಿಸಬೇಕೆಂದು ಆಗ್ರಹಿಸಿದರು.
ಸಿಎಂ ಸ್ಪಷ್ಟೀಕರಣ:ಇದಕ್ಕೆ ಸ್ಪಷ್ಟೀಕರಣ ನೀಡಿದ ಸಿಎಂ ಸಿದ್ದರಾಮಯ್ಯ, ನನ್ನ ಹೇಳಿಕೆಯಲ್ಲಿ ಯಾವುದೇ ದುರುದ್ದೇಶ ಇಲ್ಲ, ನಾನು ಉತ್ತರ ಕೊಡುತ್ತಿದ್ದೆ. ರುದ್ರೇಗೌಡರು ಮಧ್ಯಪ್ರವೇಶಕ್ಕೆ ಯತ್ನಿಸಿದರು, ಅವರಿಗೆ ಕುಳಿತುಕೊಳ್ಳಿ ಎಂದೆ ಅಷ್ಟೇ. ಅಗೌರವದಿಂದ ಅಲ್ಲ, ಆಗ ಬಳಸಿದ ಕೆಲ ಪದ ಕಡತದಿಂದ ತೆಗೆದ ನಂತರ ಮತ್ತೆ ಚರ್ಚೆ ಯಾಕೆ? ಅವು ಅಸಂಸದೀಯ ಪದ ಅಲ್ಲ, ಸಭಾಪತಿ ತೀರ್ಪನ್ನು ನಾವು ಗೌರವಿಸಿ ಒಪ್ಪಿದ್ದೇವೆ ಎಂದರು.