ಬೆಂಗಳೂರು: ಸಿದ್ದರಾಮಯ್ಯ ರಾಜ್ಯದ ಪ್ರಮುಖ ಮಾಸ್ ಲೀಡರ್. ಈ ಕಾರಣಕ್ಕೆ ಅವರನ್ನು ರಾಜಕೀಯವಾಗಿ ಮುಗಿಸಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.
ಸದಾಶಿವನಗರ ನಿವಾಸದ ಬಳಿ ಮಾತನಾಡಿದ ಅವರು, ನನ್ನನ್ನು ರಾಜಕೀಯವಾಗಿ ಮುಗಿಸಿದರೆ, ಕಾಂಗ್ರೆಸ್ ಪಕ್ಷವನ್ನು ಮುಗಿಸಿದಂತೆ ಎಂಬ ಸಿದ್ದರಾಮಯ್ಯ ಅವರ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸುತ್ತಾ, ''ಖಂಡಿತ, ಸಿದ್ದರಾಮಯ್ಯ ಅವರು ರಾಜ್ಯದ ಪ್ರಬಲ ಮಾಸ್ ಲೀಡರ್. ಹೀಗಾಗಿ ಅವರನ್ನು ಸೇರಿದಂತೆ ದೇಶದೆಲ್ಲೆಡೆ ಕಾಂಗ್ರೆಸ್ ಹಾಗೂ ವಿರೋಧ ಪಕ್ಷಗಳ ನಾಯಕರನ್ನು ಬಿಜೆಪಿ ರಾಜಕೀಯವಾಗಿ ಮುಗಿಸಲು ಪ್ರತ್ನಿಸುತ್ತಿದೆ'' ಎಂದು ತಿಳಿಸಿದರು.
ಪ್ರಿಯಾಂಕಾ ಗಾಂಧಿ ಅವರ ವಿರುದ್ಧ ಕೇರಳ ಸಿಎಂ ಮಾಡಿರುವ ಆರೋಪದ ಬಗ್ಗೆ ಪ್ರತಿಕ್ರಿಯಿಸಿ, ''ಈ ವಿಚಾರದಲ್ಲಿ ನನಗೆ ಹೆಚ್ಚಿನ ಮಾಹಿತಿ ಇಲ್ಲ. ಈ ಬಾರಿಯ ಉಪಚುನಾವಣೆಯಲ್ಲಿ ಹೀನಾಯ ಸೋಲು ಅನುಭವಿಸುವ ಮುನ್ಸೂಚನೆ ಹಿನ್ನೆಲೆಯಲ್ಲಿ ಕೇರಳ ಮುಖ್ಯಮಂತ್ರಿಗಳು ಈ ರೀತಿ ಆರೋಪ ಮಾಡುತ್ತಿದ್ದಾರೆ. ಪ್ರಿಯಾಂಕಾ ಗಾಂಧಿ ಅವರು ರಾಷ್ಟ್ರ ಮಟ್ಟದ ನಾಯಕಿ. ಒಂದೊಂದು ಕ್ಷೇತ್ರದಲ್ಲೂ ಮತದಾರರು ಭಿನ್ನವಾಗಿರುತ್ತಾರೆ. ಸಮಾಜದ ಎಲ್ಲಾ ವರ್ಗದ ಜನರನ್ನು ಒಟ್ಟಾಗಿ ತೆಗೆದುಕೊಂಡು ಹೋಗುವುದರ ಮೇಲೆ ಕಾಂಗ್ರೆಸ್ ಪಕ್ಷ ನಂಬಿಕೆಯಿಟ್ಟಿದೆ. ವಯನಾಡು ಸೇರಿದಂತೆ ಕೇರಳ ರಾಜ್ಯದ ಜನರು ಪ್ರಿಯಾಂಕಾ ಗಾಂಧಿ ಅವರ ನಿರ್ಧಾರಕ್ಕೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಅವರನ್ನು ಕಂಡರೆ ಅಸೂಯೆ ಪಡುತ್ತಿದ್ದಾರೆ'' ಎಂದು ತಿಳಿಸಿದರು.
ಇದನ್ನೂ ಓದಿ; ಬಳ್ಳಾರಿಯಲ್ಲಿ ಮತ್ತೆ ಜನಾರ್ದನರೆಡ್ಡಿ ಪಟಾಲಂ ಬೆಳೆಯಲು ಬಿಡಬೇಡಿ: ಸಿಎಂ ಸಿದ್ದರಾಮಯ್ಯ