ಕರ್ನಾಟಕ

karnataka

ETV Bharat / state

ರಾಮ ಜನ್ಮ ಭೂಮಿಯಲ್ಲಿ ಸೋತ ಬಿಜೆಪಿಗೆ ದೇಶ ಆಳುವ ಯೋಗ್ಯತೆ ಇಲ್ಲ : ಮಧು ಬಂಗಾರಪ್ಪ - MINISTER MADHU BANGARAPPA - MINISTER MADHU BANGARAPPA

ಶಿಕ್ಷಣ ಸಚಿವ ಮಧುಬಂಗಾರಪ್ಪ ಅವರು ಬಿಜೆಪಿ ಕುರಿತು ವಾಗ್ದಾಳಿ ನಡೆಸಿದ್ದಾರೆ.

minister-madhu-bangarappa
ಶಿಕ್ಷಣ ಸಚಿವ ಮಧುಬಂಗಾರಪ್ಪ (ETV Bharat)

By ETV Bharat Karnataka Team

Published : Jun 10, 2024, 7:18 PM IST

ಶಿಕ್ಷಣ ಸಚಿವ ಮಧುಬಂಗಾರಪ್ಪ (ETV Bharat)

ಶಿವಮೊಗ್ಗ : ರಾಮ ಜನ್ಮಭೂಮಿಯಲ್ಲಿ ಸೋತ ಬಿಜೆಪಿಗೆ ದೇಶ ಆಳುವ ಯೋಗ್ಯತೆ ಇಲ್ಲ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ್ ಕುಮಾರ್ ಸೋತ ನಂತರ ಕಾರ್ಯಕರ್ತರಿಗೆ ನಗರದ ಆರ್ಯ ಈಡಿಗರ ಸಮುದಾಯ ಭವನದಲ್ಲಿ ನಡೆದ ಕೃತಜ್ಞತಾ ಸಭೆಯಲ್ಲಿ ಭಾಗಿಯಾಗಿ ಅವರು ಮಾತನಾಡಿದರು. ಗೀತಾ ಶಿವರಾಜ್ ಕುಮಾರ್ ಅವರಿಗೆ ದಾಖಲೆಯ ಮತದಾನ ಮಾಡಿಸಿದ ಕಾರ್ಯಕರ್ತರಿಗೆ ಅಭಿನಂದನೆಗಳು ಎಂದರು.

ನಮಗೆ ಚುನಾವಣೆ ನಿಲ್ಲಬೇಕೆಂಬ ಚಟ ಇಲ್ಲ. ಒಂದು ಪಕ್ಷ ಆದೇಶ ಮಾಡಿದಾಗ ನಾವು ಸ್ಪರ್ಧೆ ಮಾಡಬೇಕು ಎಂದಾಗ ಸ್ಪರ್ಧಿಸಿದ್ದೇವೆ. ಚುನಾವಣೆ ಸಂದರ್ಭದಲ್ಲಿ ಸೋಲು ಗೆಲುವು ಇರುತ್ತದೆ. ಸೋತಾಗ ಧೃತಿಗೆಡಬಾರದು ಎಂದು ಹೇಳಿದರು.

ವಿರೋಧ ಪಕ್ಷದವರು ಟೀಕೆ ಟಿಪ್ಪಣಿ ಮಾಡಿದಾಗ ಗೀತಾ ಸರಿಯಾಗಿ ಉತ್ತರ ನೀಡಿದ್ದಾರೆ. ಗೀತಾ ಸೋತಿದ್ದಾರೆ‌. ನಾಳೆಯಿಂದ ಪಕ್ಷದ ಪರವಾಗಿ ಕೆಲಸ ಮಾಡಲು ಸಿದ್ಧರಾಗಿದ್ದೇವೆ. ಪಕ್ಷದ ಸೋಲಿಗೆ ಏನು ಕಾರಣ ಎಂದು ಮುಂದೆ ಹೊರಗೆ ಬರುತ್ತದೆ. ಇಂತಹ ಒಳ್ಳೆಯ ಚುನಾವಣೆ ಎಂದೂ ನಡೆಸಿಲ್ಲ ಎಂದು ಹೇಳಿದರು.

ಸೋಲನ್ನು ನುಂಗಿಕೊಳ್ಳುತ್ತೇವೆ. ಬಿಜೆಪಿ ಅವರಿಗೆ ಮನೆ ಒಡೆದ ಅನುಭವವಿದೆ. ಚುನಾವಣೆಯಲ್ಲಿ ನಾವು ಎರಡು ಕಡೆ ಗಮನ ಹರಿಸಬೇಕಿತ್ತು. ಬಿಜೆಪಿ ಅವರು ಕೆಟ್ಟ ಬುದ್ಧಿಯಿಂದ ಪ್ರೊಪಗಾಂಡ ಮಾಡುವಲ್ಲಿ ನಿಸ್ಸೀಮರು. ಬಿಜೆಪಿಯವರು ರಾಮ ಜನ್ಮ ಭೂಮಿಯಲ್ಲಿಯೇ ಸೋತಿದ್ದಾರೆ ಎಂದ್ರೆ ಅವರಿಗೆ ದೇಶ ಆಳಲು ಯೋಗ್ಯತೆ ಇಲ್ಲ ಎಂದು ಮಧು ಬಂಗಾರಪ್ಪ ಟೀಕಿಸಿದರು.

ಶಿವಮೊಗ್ಗದಲ್ಲೂ ಶಕ್ತಿಧಾಮ ಪ್ರಾರಂಭಿಸುವೆ : ನಂತರ ಮಾತನಾಡಿದ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ್ ಕುಮಾರ್, ಮೈಕ್ ನೋಡಿದ ತಕ್ಷಣ ಮತ ಕೇಳಬೇಕು ಎಂದೆನ್ನಿಸುತ್ತದೆ. ಈ ಚುನಾವಣೆಯಲ್ಲಿ ಅತಿ ಹೆಚ್ಚು ಮತ ಬಂದಿದೆ. ನನಗೆ ಇಷ್ಟೊಂದು ಮತ ಬಂದಿದ್ದನ್ನು ನಾನು ಕಾರ್ಯಕರ್ತರಿಗೆ ಅರ್ಪಿಸುತ್ತೇನೆ ಎಂದು ತಿಳಿಸಿದರು.

ಅಪ್ಪಾಜಿ ಅಭಿಮಾನಿಗಳನ್ನು ದೇವರು ಎನ್ನುತ್ತಿದ್ದರು. ನಾನು ಕಾರ್ಯಕರ್ತರನ್ನೇ ದೇವರು ಎನ್ನುವೆ. ಚುನಾವಣಾ ಪ್ರಚಾರದಲ್ಲಿ ನನಗೆ ನನ್ನ ತಮ್ಮ ಮಧು ತರ ಅನೇಕ ಅಣ್ಣ ತಮ್ಮಂದಿರು ಸಿಕ್ಕಿದ್ದಾರೆ. ಈ ಚುನಾವಣೆಯಲ್ಲಿ‌ ನಾವು ಹೆಚ್ಚಿನ ಆತ್ಮವಿಶ್ವಾಸದಿಂದ ಸ್ಪರ್ಧೆ ಮಾಡಿದ್ದೆವು. ಚುನಾವಣೆಯಲ್ಲಿ ಸೋಲು-ಗೆಲುವು ಇರುತ್ತದೆ ಎಂದು ಹೇಳಿದರು.

ರಾಜ್ಯ ಕಾಂಗ್ರೆಸ್​ ಉಸ್ತುವಾರಿ ಸುರ್ಜೇವಾಲಾ ಅವರು ಫೋನ್ ಮಾಡಿ ನಾವು ಎಲ್ಲವನ್ನು ಕಳೆದುಕೊಂಡಿಲ್ಲ ಎಂದಿದ್ದಾರೆ. ನಾನು ಚುನಾವಣೆಯಲ್ಲಿ ಹೇಳಿದಂತೆ ನಾನು ಶಿವಮೊಗ್ಗದಲ್ಲಿ ಇರುತ್ತೇನೆ. ಶಿವಮೊಗ್ಗದಲ್ಲಿ ಒಂದು ಶಕ್ತಿಧಾಮ ಮಾಡುತ್ತೇವೆ. ಮನೆಯನ್ನು ಸಹ ಇಲ್ಲೇ ಮಾಡುತ್ತೇನೆ. ನಾನು ಟಾಟಾ ಬೈ ಬೈ ಎಂದು ಹೇಳಲ್ಲ. ನಿಮ್ಮ ಜೊತೆಗೆ ಇದ್ದೇ ಇರುತ್ತೇನೆ ಎಂದು ಘೋಷಿಸಿದರು.

ನಾನು ನಿಜ ಜೀವನದಲ್ಲಿ ಬಣ್ಣ ಹಚ್ಚಿಲ್ಲ: ನಂತರ ಮಾತನಾಡಿದ ನಟ ಶಿವರಾಜ್ ಕುಮಾರ್, ನಾನು ಕಳೆದ 45 ದಿನಗಳಿಂದ ಕಾಂಗ್ರೆಸ್ ಕಾರ್ಯಕರ್ತನಾಗಿ ದುಡಿದಿದ್ದೇನೆ. ನಾನು ಸಿನಿಮಾದಲ್ಲಿ ಮಾತ್ರ ಬಣ್ಣ ಹಾಕಿದ್ದೇನೆ ಹೊರತು, ನಿಜ ಜೀವನದಲ್ಲಿ ಬಣ್ಣ ಹಾಕಿಲ್ಲ ಎಂದರು‌. ನಿಜ ಮಾತನಾಡಲು ಈಗ ಭಯ ಆಗುತ್ತಿದೆ. ನಾನು ಯಾವಾಗಲೂ ನಿಜನೇ ಮಾತನಾಡೋದು ಎಂದು ಕುಮಾರ ಬಂಗಾರಪ್ಪ ಅವರಿಗೆ ಪರೋಕ್ಷವಾಗಿ ಟಾಂಗ್​ ಕೊಟ್ಟರು.

ನಾನು ನನ್ನ ಆಸ್ತಿ ಬರೆದುಕೊಟ್ಟು ಹೋಗಿ ನನ್ನ ಹೆಂಡ್ತಿ ಮಕ್ಕಳನ್ನು ಸಾಕಲು ಬರುತ್ತದೆ. ರಾಜಕೀಯಕ್ಕೆ ಬರುವುದೇ ಅಧಿಕಾರಕ್ಕಾಗಿ. ನೀವೆಲ್ಲಾ ನನ್ನ ಹೆಂಡ್ತಿಗಾಗಿ ದುಡಿದಿದ್ದೀರಿ, ಧನ್ಯವಾದಗಳು. ನಮ್ಮಲ್ಲಿ ನಿಯತ್ ಇದ್ರೆ, ನಮಗೆ ದೇವರ ಆಶೀರ್ವಾದ ಇರುತ್ತದೆ. ನನ್ನ ಹೆಂಡ್ತಿ ಆಸೆಗಾಗಿ ನಾನು ಚುನಾವಣೆಗೆ ನಿಲ್ಲಿಸಿದ್ದೇನೆ, ಅದು ತಪ್ಪೇ ಎಂದು ಪ್ರಶ್ನಿಸಿದರು‌.

ಶಿಕ್ಷಣ ಸಚಿವ ಮಧುಬಂಗಾರಪ್ಪ (ETV Bharat)

ನೀಟ್ ಪರೀಕ್ಷೆಯಲ್ಲಿ ಅಕ್ರಮದ ತನಿಖೆ ನಡೆಸಬೇಕು : ನೀಟ್ ಪರೀಕ್ಷೆಯಲ್ಲಿ ಅಕ್ರಮ ನಡೆದಿದೆ. ಈ ಕುರಿತು ತನಿಖೆ ನಡೆಸಬೇಕೆಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಆಗ್ರಹಿಸಿದ್ದಾರೆ.

ಶಿವಮೊಗ್ಗದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ನೀಟ್ ಪರೀಕ್ಷೆಯಲ್ಲಿ ಅವಾಂತರ ನಡೆದಿದೆ. ಕೇಂದ್ರ ಸರ್ಕಾರ ಇದನ್ನು ಸರಿಪಡಿಸಬೇಕಿದೆ. ವಿದ್ಯಾರ್ಥಿಗಳಿಗೆ ಅನ್ಯಾಯವಾಗದಂತೆ ಹೋರಾಟ ಮಾಡುವುದಾಗಿ ಈ ಬಗ್ಗೆ ರಾಹುಲ್ ಗಾಂಧಿ ಕೂಡ ಮಾತನಾಡಿದ್ದಾರೆ. ಅಧಿಕಾರ ಇದ್ದಾಗ ಮನಸ್ಸಿಗೆ ಬಂದಂತೆ ನೀಟ್ ಪರೀಕ್ಷೆ ನಡೆಸಿದ್ದರಿಂದ ಗೊಂದಲ ಉಂಟಾಗಿದೆ. ಪರೀಕ್ಷೆಯಲ್ಲಿ ಅಕ್ರಮ ನಡೆದಿದೆ‌. ವಿದ್ಯಾರ್ಥಿಗಳಿಗೆ ದಿಕ್ಕು ತಪ್ಪಿಸಿದ್ದಾರೆ ಎಂದು ಆರೋಪಿಸಿದರು.

ಎಸ್​ಎಸ್​ಎಲ್​ಸಿ ಪರೀಕ್ಷೆಯಲ್ಲಿ 20% ಗ್ರೇಸ್ ಮಾರ್ಕ್ಸ್ ಕೊಟ್ಟ ವಿಚಾರ :ನಾನು ವಿದ್ಯಾರ್ಥಿಗಳಿಗೆ ಗ್ರೇಸ್ ಮಾರ್ಕ್ಸ್ ನೀಡಿದ್ದಕ್ಕೆ ಬಿಜೆಪಿಯವರು ಟೀಕೆ ಮಾಡಿದ್ದಾರೆ. ಆದರೆ 10% ಗ್ರೇಸ್ ಮಾರ್ಕ್ಸ್ ಕೊಟ್ಟಿದ್ದೇ ಬಿಜೆಪಿ ಸರ್ಕಾರದ ಅವಧಿಯಲ್ಲಿ. ಮಕ್ಕಳನ್ನು ಕಾಪಿ ಹೊಡೆಯಲು ಬಿಟ್ಟು ಪಾಸಾದರೆ ನಾಳೆ ಹೇಗೆ ಉತ್ತಮ ಪ್ರಜೆಯಾಗುತ್ತಾರೆ? ಎಂದು ಪ್ರಶ್ನಿಸಿದರು.

ಮಾಜಿ ಸಿಎಂ ಬಂಗಾರಪ್ಪನವರು ಗ್ರಾಮೀಣ ಕೃಪಾಂಕ ಕೊಟ್ಟ ಹಿನ್ನೆಲೆ ಅನೇಕರಿಗೆ ಉಪಕಾರ ಆಗಿದೆ. ಸರ್ಕಾರಿ ಶಿಕ್ಷಕರು ಉತ್ತಮವಾಗಿ ಕಾರ್ಯನಿರ್ವಹಿಸುತ್ತಾರೆ. ಆದರೆ ಅವರ ಪ್ರಯೋಜನ ಆಗುತ್ತಿಲ್ಲ. ಮಕ್ಕಳನ್ನು ಟ್ಯೂಷನ್​ಗೆ ಕಳಿಸುವುದು ಬೇಡ. ಶಾಲಾ ಶಿಕ್ಷಕರೇ ಸಂಜೆ ವಿಶೇಷ ತರಗತಿಗಳನ್ನು ತೆಗೆದುಕೊಳ್ಳುತ್ತಾರೆ. ಶಾಲಾ ಮಕ್ಕಳಿಗೆ ಬುಕ್ಸ್, ಶೂ, ಮಧ್ಯಾಹ್ನದ ಊಟ, ಮೊಟ್ಟೆ ಎಲ್ಲವನ್ನು ಕೊಡುತ್ತೇವೆ. ನೀಟ್ ಮರು ಪರೀಕ್ಷೆ ಬಗ್ಗೆ ನಾನು ಯಾವುದೇ ನಿರ್ಧಾರ ಮಾಡಲು ಸಾಧ್ಯವಿಲ್ಲ.
ವಿದ್ಯಾರ್ಥಿಗಳಿಗೆ ನ್ಯಾಯ ಬದ್ಧವಾಗಿ ಮರು ಪರೀಕ್ಷೆ ನಡೆಸಬೇಕು ಎಂದು ಹೇಳಿದರು.

ಇದನ್ನೂ ಓದಿ :ಕುಮಾರ ಬಂಗಾರಪ್ಪ‌ ಮನೆಗೆ ಫ್ಯಾನ್ಸ್​ ಮುತ್ತಿಗೆ ಪ್ರಕರಣ; ನಟ ಶಿವರಾಜ್ ಕುಮಾರ್ ಹೀಗಂದ್ರು - SHIVARAJ KUMAR REACTION

ABOUT THE AUTHOR

...view details