ಬೆಂಗಳೂರು:ರಾಜ್ಯ ಸರ್ಕಾರಕ್ಕೆ ಸಡ್ಡು ಹೊಡೆದು ಬಿಜೆಪಿ-ಜೆಡಿಎಸ್ ದೋಸ್ತಿಗಳು ಮೈಸೂರು ಚಲೋ ಪಾದಯಾತ್ರೆಗೆ ಚಾಲನೆ ನೀಡಿವೆ. ಆರಂಭದಲ್ಲಿ ಗೊಂದಲ ಇದ್ದರೂ ಕೊನೆಗೆ ಪಾದಯಾತ್ರೆ ಉದ್ಘಾಟನಾ ಸಮಾವೇಶದ ವೇದಿಕೆಯಲ್ಲಿ ದೋಸ್ತಿಗಳು ಒಗ್ಗಟ್ಟು ಪ್ರದರ್ಶನ ಮಾಡಿದ್ದಾರೆ. ಆದರೆ ಬಿಜೆಪಿ ಬಣದ ಕೆಲ ನಾಯಕರು ಗೈರಾಗುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.
ಇಂದಿನಿಂದ ಆಗಸ್ಟ್ 10ರ ವರೆಗೆ ಬೆಂಗಳೂರಿನಿಂದ ಮೈಸೂರಿನವರೆಗೆ ಬಿಜೆಪಿ-ಜೆಡಿಎಸ್ ದೊಸ್ತಿಗಳ ಜಂಟಿ ಪಾದಯಾತ್ರೆ ಆರಂಭವಾಗಿದೆ. ಕೆಂಗೇರಿ ನೈಸ್ ಜಂಕ್ಷನ್ ಬಳಿ ಪಾದಯಾತ್ರೆಗೆ ಚಾಲನೆ ನೀಡಲಾಯಿತು. ಉದ್ಘಾಟನಾ ಕಾರ್ಯಕ್ರಮದ ವೇದಿಕೆಯಲ್ಲಿ ದೋಸ್ತಿ ನಾಯಕರು ಪಾಲ್ಗೊಂಡು ಸರ್ಕಾರದ ವಿರುದ್ಧ ಒಗ್ಗಟ್ಟು ಪ್ರದರ್ಶನ ಮಾಡುವಲ್ಲಿ ಸಫಲರಾದರು. ಆರಂಭದಲ್ಲಿ ಪಾದಯಾತ್ರೆಗೆ ಬೆಂಬಲ ಇಲ್ಲ ಎಂದ ಹೆಚ್.ಡಿ.ಕುಮಾರಸ್ವಾಮಿ ಬಿಜೆಪಿ ಹೈಕಮಾಂಡ್ ಮನವೊಲಿಕೆ ಬಳಿಕ ಪಾದಯಾತ್ರೆಗೆ ಬೆಂಬಲ ನೀಡಲು ನಿರ್ಧರಿಸಿದರು.
ವೇದಿಕೆಯಲ್ಲಿ ದೋಸ್ತಿಗಳ ಒಗ್ಗಟ್ಟು ಪ್ರದರ್ಶನ: ಪಾದಯಾತ್ರೆ ಚಾಲನೆ ವೇದಿಕೆ ಕಾರ್ಯಕ್ರಮದಲ್ಲಿ ದೋಸ್ತಿ ನಾಯಕರು ಭಾಗಿಯಾಗಿ ಒಗ್ಗಟ್ಟು ಪ್ರದರ್ಶನ ಮಾಡಿದರು. ಜೆಡಿಎಸ್ ಹಾಗೂ ಬಿಜೆಪಿ ಪ್ರಮುಖ ನಾಯಕರು ಪಾಲ್ಗೊಂಡು ಒಗ್ಗಟ್ಟಿನ ಮಂತ್ರ ಪಠಿಸಿದರು. ಪಾದಯಾತ್ರೆ ಗೊಂದಲದ ಮಧ್ಯೆಯೂ ದೋಸ್ತಿಗಳು ಸಮನ್ವಯತೆ ಸಾಧಿಸಿ ವೇದಿಕೆ ಮೇಲೆ ಒಟ್ಟಾಗಿ ರಾಜ್ಯ ಸರ್ಕಾರದ ವಿರುದ್ಧ ಗುಡುಗಿದರು.
ವೇದಿಕೆಯಲ್ಲಿ ಕೇಂದ್ರ ಸಚಿವ ಹೆಚ್. ಡಿ. ಕುಮಾರಸ್ವಾಮಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಕರ್ನಾಟಕ ರಾಜ್ಯ ಉಸ್ತುವಾರಿ ರಾಧಾಮೋಹನ್ ದಾಸ್, ಮಾಜಿ ಸಿಎಂ ಡಿ.ವಿ.ಸದಾನಂದ ಗೌಡ, ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಜೆಡಿಎಸ್ ಮುಖಂಡರಾದ ಬಂಡೆಪ್ಪ ಕಾಶೆಂಪೂರ, ಬೋಜೇಗೌಡ, ಜಿ.ಟಿ ದೇವೇಗೌಡ ಉಪಸ್ಥಿತರಿದ್ದರು.
ವೇದಿಕೆಯ ಮೇಲೆ ಎರಡು ಪಕ್ಷಗಳ ಕೋರ್ ಕಮಿಟಿ ಸದಸ್ಯರು, ಸಂಸದರು ಭಾಗಿಯಾಗಿದ್ದಾರೆ. ವೇದಿಕೆ ಮೇಲೆ ಸುಮಾರು 45 ನಾಯಕರು ಉಪಸ್ಥಿತರಿದ್ದರು. ಕೇಂದ್ರ ಸಚಿವರಾದ ಪ್ರಲ್ಹಾದ್ ಜೋಶಿ, ಶೋಭಾ ಕರಂದ್ಲಾಜೆ, ವಿ. ಸೋಮಣ್ಣ ಭಾಗಿಯಾಗಿದ್ದರು. ವಿರೋಧ ಪಕ್ಷದ ನಾಯಕರಾದ ಆರ್.ಅಶೋಕ್, ಛಲವಾದಿ ನಾರಾಯಣ ಸ್ವಾಮಿ, ಅಶ್ವತ್ಥ್ ನಾರಾಯಣ್, ಸಂಸದ ಗೋವಿಂದ ಕಾರಜೋಳ, ಸಂಸದ ಯಧುವೀರ್, ವಿಶ್ವೇಶ್ವರ್ ಹೆಗಡೆ ಕಾಗೇರಿ, ಪಿ.ಸಿ. ಮೋಹನ್, ತೇಜಸ್ವಿ ಸೂರ್ಯ, ಸುನಿಲ್ ಕುಮಾರ್, ಜನಾರ್ದನ ರೆಡ್ಡಿ ಉಪಸ್ಥಿತರಿದ್ದರು.
ಬಿಜೆಪಿ ಅತೃಪ್ತರ ಗೈರು: ಆದರೆ ಬಿಜೆಪಿ ಪಾಳಯದಲ್ಲಿನ ಅತೃಪ್ತಿ ಪಾದಯಾತ್ರೆ ಚಾಲನಾ ಸಮಾರಂಭದಲ್ಲಿ ಮತ್ತೆ ಮುನ್ನಲೆಗೆ ಬಂತು. ಕೆಲ ಬಿಜೆಪಿ ನಾಯಕರ ಗೈರು ಎದ್ದು ಕಂಡಿತು. ಪಾದಯಾತ್ರೆಯಿಂದ ಬಿಜೆಪಿಯ ರೆಬೆಲ್ ನಾಯಕರು ದೂರ ಉಳಿದರು. ಬಸನಗೌಡ ಪಾಟೀಲ್ ಯತ್ನಾಳ್, ರಮೇಶ್ ಜಾರಕಿಹೊಳಿ, ಕುಮಾರ್ ಬಂಗಾರಪ್ಪ, ಅರವಿಂದ ಲಿಂಬಾವಳಿ, ಸಿ.ಟಿ. ರವಿ, ಎಸ್.ಟಿ. ಸೋಮಶೇಖರ್, ಮಾಜಿ ಸಂಸದ ಪ್ರತಾಪ್ ಸಿಂಹ ಗೈರಾಗುವ ಮೂಲಕ ಅತೃಪ್ತಿಯ ಹೊಗೆಯಾಡಿದಂತೆ ಕಂಡುಬಂತು. ಪಾದಯಾತ್ರೆಗೆ ವಿರೋಧ ವ್ಯಕ್ತಪಡಿಸಿದ್ದ ಬಿಜೆಪಿ ರೆಬೆಲ್ ನಾಯಕರೆಲ್ಲರೂ ಗೈರಾಗಿದ್ದರು.
ಕಾರ್ಯಕ್ರಮದಲ್ಲಿ ಪ್ರೀತಂಗೌಡ ಗೈರು:ಇತ್ತ ಹಾಸನ ಮಾಜಿ ಶಾಸಕ ಪ್ರೀತಂ ಗೌಡ ಇಂದಿನ ಪಾದಯಾತ್ರೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಕಾಣಿಸಿಕೊಳ್ಳಲಿಲ್ಲ. ಕೇಂದ್ರ ಸಚಿವ ಹೆಚ್. ಡಿ. ಕುಮಾರಸ್ವಾಮಿ ವಿರೋಧ ಹಿನ್ನೆಲೆ ಪ್ರೀತಂಗೌಡ ಗೈರಾಗಿರುವುದು ಕಂಡುಬಂತು.
ಪ್ರೀತಂಗೌಡ ಜೊತೆ ವೇದಿಕೆ ಹಂಚಿಕೊಳ್ಳುವ ಬಗ್ಗೆ ಕುಮಾರಸ್ವಾಮಿ ಬಹಿರಂಗವಾಗಿ ರಾಜ್ಯ ಬಿಜೆಪಿ ನಾಯಕರ ಜೊತೆಗೆ ಅಸಮಾಧಾನ ಹೊರಹಾಕಿದ್ದರು. ಪಾದಯಾತ್ರೆಗೆ ನಮ್ಮ ಬೆಂಬಲ ಇಲ್ಲ ಎಂದು ಹೇಳುವ ಮೂಲಕ ಬಿಜೆಪಿಗೆ ಶಾಕ್ ನೀಡಿದ್ದರು. ಹೈಕಮಾಂಡ್ ಮನವೊಲಿಕೆ ಬಳಿಕ ಕುಮಾರಸ್ವಾಮಿ ಪಾದಯಾತ್ರೆಗೆ ಸಾಥ್ ನೀಡಿದ್ದಾರೆ.
ಇದನ್ನೂ ಓದಿ:ಮೈಸೂರು ಚಲೋ ಪಾದಯಾತ್ರೆಗೆ ಚಾಲನೆ: ಸಿಎಂ, ಸಿದ್ದರಾಮಯ್ಯ ವಿರುದ್ಧ ದೋಸ್ತಿ ನಾಯಕರು ಹೇಳಿದ್ದೇನು? - Mysuru Chalo Padayatra