ಬೆಂಗಳೂರು: ಟಾಲಿವುಡ್ ನಟ ಅಲ್ಲು ಅರ್ಜುನ್ ಅಭಿನಯದ 'ಪುಷ್ಪ 2' ಸಿನಿಮಾದ ಮಿಡ್ ನೈಟ್ ಶೋಗಳನ್ನು ರದ್ದುಪಡಿಸುವಂತೆ ಬೆಂಗಳೂರು ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.
ನಗರದ ಕೆಲವು ಚಿತ್ರಮಂದಿರಗಳಲ್ಲಿ ಮಿಡ್ ನೈಟ್ ಶೋ ಆಯೋಜಿಸುವುದರ ಜೊತೆಗೆ ಟಿಕೆಟ್ಗೆ ಅತೀ ಹೆಚ್ಚು ಬೆಲೆ ನಿಗದಿಪಡಿಸಲಾಗಿತ್ತು. ತಾವರೆಕೆರೆಯ ಬಾಲಾಜಿ, ಕತ್ತರಿಗುಪ್ಪೆಯ ಕಾಮಾಕ್ಯ, ಚಂದ್ರೋದಯ, ರಾಜಾಜಿನಗರದ ನವರಂಗ್, ಮಾಗಡಿ ರಸ್ತೆಯ ಪ್ರಸನ್ನ, ಫೆಲಿಸಿಟಿ ಮಾಲ್‍ನ ಸಿನಿಫೈಲ್ ಮುಂತಾದ ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳು ಹಾಗೂ ಮಲ್ಟಿಪ್ಲೆಕ್ಸ್ಗಳಲ್ಲಿ ಬೆಳಿಗ್ಗೆ 3 ಅಥವಾ 4 ಗಂಟೆಗೆ ಪ್ರದರ್ಶನ ಶುರುವಾಗುವುದಾಗಿ ಘೋಷಿಸಲಾಗಿತ್ತು. ಬುಕ್ ಮೈ ಶೋನಲ್ಲಿ ಬುಕ್ಕಿಂಗ್ ಪ್ರಾರಂಭವಾಗಿತ್ತು.
ಈ ಕುರಿತು ಸಾಕಷ್ಟು ಟೀಕೆಗಳು ವ್ಯಕ್ತವಾಗಿದ್ದವು. ಕನ್ನಡ ಚಲನಚಿತ್ರ ನಿರ್ಮಾಪಕರ ಸಂಘ ಇಂದು ಜಿಲ್ಲಾಧಿಕಾರಿಗೆ ದೂರು ಸಲ್ಲಿಸಿತ್ತು. ಚಲನಚಿತ್ರ ಪ್ರದರ್ಶನ ನಿಯಮಗಳ ಪ್ರಕಾರ, ಕರ್ನಾಟಕ ರಾಜ್ಯದ ಚಿತ್ರಮಂದಿರಗಳಲ್ಲಿ ಮುಂಜಾನೆ 6 ಗಂಟೆಯೊಳಗೆ ಯಾವುದೇ ಚಿತ್ರಮಂದಿರಗಳಲ್ಲಿ ಚಿತ್ರಗಳನ್ನು ಪ್ರದರ್ಶಿಸುವಂತಿಲ್ಲ. ಈ ಆದೇಶವಿದ್ದರೂ ಸಹ ಕೆಲ ಚಿತ್ರಮಂದಿರಗಳಲ್ಲಿ ಅವಧಿಗೂ ಮುನ್ನ ಚಿತ್ರ ಪ್ರದರ್ಶನ ಕಾನೂನುಬಾಹಿರ. ಈ ಸಂಬಂಧ ಸರ್ಕಾರದ ಆದೇಶ ಉಲ್ಲಂಘಿಸುವ ಚಿತ್ರಮಂದಿರಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಲಾಗಿತ್ತು.