ಬೆಂಗಳೂರು : ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಪರಿಣಾಮದ ಹಿನ್ನೆಲೆಯಲ್ಲಿ ರಾಜ್ಯದ ಒಳನಾಡಿನಲ್ಲಿ ಮಳೆ ಆರಂಭವಾಗಿದೆ. ಇನ್ನೂ ಮೂರು ದಿನಗಳ ಕಾಲ ರಾಜ್ಯದಲ್ಲಿ ವ್ಯಾಪಕ ಪ್ರಮಾಣದಲ್ಲಿ ಮಳೆಯಾಗುವ ಸಾಧ್ಯತೆಗಳಿವೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ರಾಜಧಾನಿ ಬೆಂಗಳೂರು ಸೇರಿದಂತೆ ಬೆಂಗಳೂರು ಗ್ರಾಮಾಂತರ, ಮಂಡ್ಯ, ಮೈಸೂರು, ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ಹಾಸನ, ಚಾಮರಾಜನಗರ, ಕೊಡಗು, ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಈ ಭಾಗಗಳಲ್ಲಿ ಹವಾಮಾನ ಇಲಾಖೆ ಇಂದು ಮತ್ತು ನಾಳೆ ಯೆಲ್ಲೋ ಅಲರ್ಟ್ ಘೋಷಿಸಿದೆ. ಜೊತೆಗೆ ಅ.17 ರಂದು ಆರೆಂಜ್ ಅಲರ್ಟ್ ಘೋಷಿಸಲಾಗಿದೆ.
ಕರಾವಳಿಯ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಗುಡುಗು ಸಹಿತ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಕರಾವಳಿಯ ಉತ್ತರ ಕನ್ನಡ ಜಿಲ್ಲೆಯ ಹೆಚ್ಚಿನ ಸ್ಥಳಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ.
ಜಲಾವೃತಗೊಂಡ ರಸ್ತೆ (ETV Bharat) ಬೆಂಗಳೂರಿನಲ್ಲಿ ಬೆಳಗ್ಗೆಯಿಂದಲೇ ಮಳೆ :ಬೆಂಗಳೂರಿನಲ್ಲಿ ಇಂದು ಬೆಳಗ್ಗೆಯಿಂದಲೇ ಧಾರಾಕಾರ ಮಳೆ ಸುರಿಯುತ್ತಿದೆ. ಕೆ.ಆರ್.ಮಾರ್ಕೆಟ್, ಮೆಜೆಸ್ಟಿಕ್, ಕಾರ್ಪೊರೇಷನ್ ಸರ್ಕಲ್, ಶಾಂತಿನಗರ, ಲಾಲ್ ಬಾಗ್, ಜಯನಗರ, ಸೌತ್ ಎಂಡ್ ಸರ್ಕಲ್, ಬಸವನಗುಡಿ, ಶ್ರೀನಗರ, ಹನುಮಂತನಗರ, ಗಿರಿನಗರ, ಚಾಮರಾಜಪೇಟೆ, ಬನಶಂಕರಿ, ಪದ್ಮನಾಭನಗರ, ತ್ಯಾಗರಾಜನಗರ, ಕೋರಮಂಗಲ, ರಿಚ್ಮಂಡ್ ಸರ್ಕಲ್, ಮಲ್ಲೇಶ್ವರಂ, ಯಶವಂತಪುರ, ಪೀಣ್ಯ, ಜಾಲಹಳ್ಳಿ, ಆರ್.ಆರ್.ನಗರ, ಉತ್ತರಹಳ್ಳಿ, ದಾಸರಹಳ್ಳಿ, ರಾಜಾಜಿನಗರ, ವಿಧಾನಸೌಧ, ಕಬ್ಬನ್ ಪಾರ್ಕ್, ಶಿವಾಜಿನಗರ ಸೇರಿದಂತೆ ಸುತ್ತಮುತ್ತ ಧಾರಾಕಾರ ಮಳೆ ಸುರಿದಿದೆ.
ಶಾಲಾ ಮಕ್ಕಳು, ವಾಹನ ಸವಾರರು ಹೈರಾಣ :ಬೆಳಗ್ಗೆಯೇ ಮಳೆ ಬಂದ ಪರಿಣಾಮ ಶಾಲಾ ಮಕ್ಕಳು ಹಾಗೂ ಕೆಲಸಕ್ಕೆ ಹೋಗುವ ವಾಹನ ಸವಾರರು ಪರದಾಡುವಂತಾಯಿತು. ಮಕ್ಕಳು ಮತ್ತು ಉದ್ಯೋಗಿಗಳು ತುಂತುರು ಮಳೆಯಲ್ಲಿಯೇ ನೆನೆದುಕೊಂಡು ಶಾಲೆಗಳಿಗೆ ಹಾಗೂ ಕೆಲಸಕ್ಕೆ ತೆರಳಬೇಕಾಯಿತು.
ಟ್ರಾಫಿಕ್ ಜಾಮ್ : ಮಳೆ ಪರಿಣಾಮ ಕೆಲಸಕ್ಕೆಂದು ತೆರಳುತ್ತಿದ್ದ ವಾಹನ ಸವಾರರು ನೆನೆದುಕೊಂಡೇ ಹೋಗುತ್ತಿದ್ದು, ಇದರಿಂದ ನಗರದ ಬಹುತೇಕ ಕಡೆಗಳಲ್ಲಿ ಟ್ರಾಫಿಕ್ ಜಾಮ್ ಉಂಟಾಗಿತ್ತು. ಉತ್ತರಹಳ್ಳಿ ಮುಖ್ಯ ರಸ್ತೆ, ಮೈಸೂರು ರಸ್ತೆ, ಗೊರಗುಂಟೆ ಪಾಳ್ಯ, ಮೆಜೆಸ್ಟಿಕ್, ಕಾಟನ್ ಪೇಟೆ ಮುಖ್ಯ ರಸ್ತೆ, ಕೆ.ಆರ್.ಪೇಟೆ, ಶಾಂತಿನಗರ ಡಬಲ್ ರೋಡ್ ಸೇರಿದಂತೆ ಹಲವು ಕಡೆ ವಾಹನ ಸವಾರರು ಟ್ರಾಫಿಕ್ ಜಾಮ್ನಿಂದ ಹೈರಾಣಾಗಿದ್ದರು. ಹಲವು ರಸ್ತೆಗಳು ಜಲಾವೃತಗೊಂಡಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ.
ಇದನ್ನೂ ಓದಿ:ತೀವ್ರ ಸ್ವರೂಪ ಪಡೆಯುತ್ತಿರುವ ಚಂಡಮಾರುತಗಳು: ರಾಜ್ಯದ 11 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್