ಹೆಗಲ ಮೇಲೆ ಮಹಿಳಾ ರೋಗಿ ಹೊತ್ತೊಯ್ದ ಗ್ರಾಮಸ್ಥರು (ETV Bharat) ಬೆಳಗಾವಿ: ಧಾರಾಕಾರ ಮಳೆಯಲ್ಲಿ ಐದು ಕಿ.ಮೀ ಹೆಗಲ ಮೇಲೆ ಮಹಿಳಾ ರೋಗಿಯನ್ನು ಹೊತ್ತುಕೊಂಡು ಹೋಗಿ ಗ್ರಾಮಸ್ಥರು ಜೀವ ಉಳಿಸಿರುವ ಘಟನೆ ಖಾನಾಪುರ ತಾಲ್ಲೂಕಿನ ಕಾಡಂಚಿನ ಅಮಗಾಂವ್ ಗ್ರಾಮದಲ್ಲಿ ನಡೆದಿದೆ.
36 ವರ್ಷದ ಹರ್ಷದಾ ಘಾಡಿ ಅವರ ಪ್ರಾಣ ಉಳಿಸಲು ಗ್ರಾಮಸ್ಥರು ಹರಸಾಹಸ ಪಟ್ಟಿದ್ದಾರೆ. ತೀವ್ರ ಜ್ವರದಿಂದ ಬಳಲುತ್ತಿದ್ದ ಹರ್ಷದಾ ಮೂರ್ಛೆ ಹೋಗಿದ್ದರು. ಅಸ್ವಸ್ಥಗೊಂಡ ಅವರನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಬೇಕಿತ್ತು. ದಟ್ಟ ಅಭಯಾರಣ್ಯದಲ್ಲಿರುವ ಅಮಗಾಂವ್ ಗ್ರಾಮಕ್ಕೆ ರಸ್ತೆಯೂ ಇಲ್ಲ, ಸೇತುವೆಯೂ ಇಲ್ಲಾ, ಮೊಬೈಲ್ ನೆಟ್ವರ್ಕ್ ಸಹ ಬರೋದಿಲ್ಲಾ.
ಹರ್ಷದಾ ಅವರ ಪ್ರಾಣ ಉಳಿಸಲು ಕಟ್ಟಿಗೆಯನ್ನೇ ಸ್ಟ್ರೆಚರ್ ರೀತಿ ಮಾಡಿಕೊಂಡು ರಕ್ಕಸ ಮಳೆಯಲ್ಲಿ ಐದು ಕಿಲೋ ಮೀಟರ್ ಹೊತ್ತುಕೊಂಡು ಹೋಗಿದ್ದಾರೆ. ಆಂಬ್ಯುಲೆನ್ಸ್ ಬರಲು ರಸ್ತೆ ಇರುವ ಅರಣ್ಯ ಇಲಾಖೆ ಚೆಕ್ ಪೋಸ್ಟ್ ಚಿಕಲೆವರೆಗೂ ಆ ಮಹಿಳೆಯನ್ನು ಗ್ರಾಮಸ್ಥರು ಹೊತ್ತುಕೊಂಡು ಬಂದಿದ್ದಾರೆ. ಅಲ್ಲಿಂದ ಮತ್ತೆ 1 ಕಿಲೋಮೀಟರ್ ದೂರ ಹೋಗಿ ಮೊಬೈಲ್ ನೆಟ್ವರ್ಕ್ ಬರುವ ಸ್ಥಳದಿಂದ 108ಗೆ ಕರೆ ಮಾಡಿದ್ದಾರೆ.
ತಕ್ಷಣವೇ ಜಾಂಬೋಟಿಯಿಂದ ರೋಗಿ ಇದ್ದಲ್ಲಿಗೆ ಆಂಬ್ಯುಲೆನ್ಸ್ ಬಂದಿದೆ. ಮೊದಲು ಆಂಬ್ಯುಲೆನ್ಸ್ ಸಿಬ್ಬಂದಿ ಮೂರ್ಚೆ ಹೋಗಿದ್ದ ಹರ್ಷದಾಗೆ ಪ್ರಾಥಮಿಕ ಚಿಕಿತ್ಸೆ ನೀಡಿದ್ದಾರೆ. ಬಳಿಕ ಹರ್ಷದಾ ಅವರನ್ನು ಬೆಳಗಾವಿ ಜಿಲ್ಲಾಸ್ಪತ್ರೆಗೆ ದಾಖಲಿಸಿ ಸಾಗಿಸಲಾಗಿದೆ. ಆಂಬ್ಯುಲೆನ್ಸ್ ಬರಲು ರಸ್ತೆ ಇಲ್ಲದ ಹಿನ್ನೆಲೆಯಲ್ಲಿ ಕಟ್ಟಿಗೆ ಸ್ಟ್ರೆಚರ್ ನಲ್ಲಿ ಮಹಿಳಾ ರೋಗಿಯೊಬ್ಬರನ್ನು ಗ್ರಾಮಸ್ಥರು ಹೊತ್ತೊಯ್ದಿರುವ ದಯನೀಯ ಘಟನೆಗೆ ಖಾನಾಪುರ ತಾಲೂಕು ಸಾಕ್ಷಿಯಾಗಿದೆ.
ಅತಿ ಹೆಚ್ಚು ಮಳೆ ಬೀಳುವ ಅಮಗಾಂವ್: ಖಾನಾಪುರ ತಾಲೂಕಿನ ದಟ್ಟ ಕಾಡಿನಲ್ಲಿರುವ ಅಮಗಾಂವ್ ಎರಡು ಬಾರಿ 10 ಸಾವಿರ ಮಿ.ಮೀ. ಮಳೆ ದಾಖಲಾಗಿದೆ. ರಾಜ್ಯದಲ್ಲಿ ಅತೀ ಹೆಚ್ಚು ಮಳೆ ಬೀಳುವ ಆಗುಂಬೆ ಜೊತೆಗೆ ಅಮಗಾಂವ್ ರೇಸ್ ನಲ್ಲಿದೆ. ಅಷ್ಟೊಂದು ಪ್ರಮಾಣದಲ್ಲಿ ಇಲ್ಲಿ ಮಳೆ ಆಗುತ್ತದೆ. ತುರ್ತು ಆರೋಗ್ಯ ಸಮಸ್ಯೆ ಉಂಟಾದರೆ ಇಲ್ಲಿನ ಜನ ಆಸ್ಪತ್ರೆಗೆ ಬರಬೇಕು ಎಂದರೆ ಈ ರೀತಿ ಅವರನ್ನು ಹೊತ್ತುಕೊಂಡೇ ಬರುವ ಸ್ಥಿತಿಯಿದೆ. ಹೀಗೆ ಹೋಗುವಾಗ ಚಿಕಿತ್ಸೆ ಸಿಗದೆ ಅದೆಷ್ಟೊ ಜನರು ಜೀವವನ್ನೆ ಕಳೆದುಕೊಂಡಿರುವ ಉದಾಹರಣೆಗಳು ಸಾಕಷ್ಟಿವೆ. ಹಾಗಾಗಿ, ತಾಲೂಕು ಆಡಳಿತ ಏನಾದರು ಪರ್ಯಾಯ ವ್ಯವಸ್ಥೆ ಮಾಡುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಇದನ್ನೂ ಓದಿ:ಚಿಕ್ಕಮಗಳೂರು: ಧಾರಾಕಾರ ಮಳೆಗೆ ಜಿಲ್ಲೆಯಲ್ಲಿ 190ಕ್ಕೂ ಹೆಚ್ಚು ಮನೆಗಳಿಗೆ ಹಾನಿ, ಬೀದಿಗೆ ಬಿದ್ದ ನೂರಾರು ಕುಟುಂಬಗಳು - 190 houses were damaged due to rain