ಬೆಂಗಳೂರು:ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದು ಸವಾರರಿಬ್ಬರ ಸಾವಿಗೆ ಕಾರಣನಾಗಿದ್ದ ಬಿಬಿಎಂಪಿ ಕಸದ ಲಾರಿ ಚಾಲಕನನ್ನು ಬಂಧಿಸಲಾಗಿದೆ. ಅಪಘಾತದ ಬಳಿಕ ಪರಾರಿಯಾಗಿದ್ದ ಚಾಲಕ ಶಿವಶಂಕರ್ (38) ಎಂಬಾತನನ್ನು ಹಲಸೂರು ಗೇಟ್ ಸಂಚಾರಿ ಠಾಣಾ ಪೊಲೀಸರು ಸೆರೆ ಹಿಡಿದಿದ್ದಾರೆ.
ಲಾರಿ ಡಿಕ್ಕಿಯಾಗಿ ಮೈಮೇಲೆ ಹರಿದು ಟಿಸಿಎಸ್ ಕಂಪನಿಯ ಉದ್ಯೋಗಿಗಳಾಗಿದ್ದ ಪ್ರಶಾಂತ್ ಹಾಗೂ ಶಿಲ್ಪಾ ಮೃತಪಟ್ಟ ಘಟನೆ ಭಾನುವಾರ ರಾತ್ರಿ ಕೆ.ಆರ್.ಸರ್ಕಲ್ ಬಳಿ ನಡೆದಿತ್ತು. ಅಪಘಾತದ ಬಳಿಕ ಸ್ಥಳದಿಂದ ಚಾಲಕ ಸ್ಥಳದಿಂದ ಪರಾರಿಯಾಗಿದ್ದ.
ಚಾಲಕ ಪಾನಮತ್ತನಾಗಿ ಲಾರಿ ಚಲಾಯಿಸಿರುವ ಶಂಕೆ ವ್ಯಕ್ತವಾಗಿದ್ದು, ಆತನ ರಕ್ತದ ಮಾದರಿ ಸಂಗ್ರಹಿಸಲಾಗಿದೆ. ವೈದ್ಯಕೀಯ ವರದಿಯ ಬಳಿಕ ಸತ್ಯಾಂಶ ಹೊರಬರಲಿದೆ.
ಕಸದ ಲಾರಿಗಳಿಗೆ ವೇಗಮಿತಿ ನಿಗದಿಗೆ ಚಿಂತನೆ:ಬಿಬಿಎಂಪಿ ಕಸದ ಲಾರಿಗಳಿಂದ ಪದೇ ಪದೇ ಅಪಘಾತ ಸಂಭವಿಸುತ್ತಿದ್ದು, ವೇಗಮಿತಿ ಅಳವಡಿಸಲು ಸಂಚಾರಿ ಪೊಲೀಸರು ಚಿಂತನೆ ನಡೆಸುತ್ತಿದ್ದಾರೆ. ಪ್ರಸ್ತುತ ಕಸದ ಲಾರಿಗಳಿಗೆ ಪ್ರತೀ ಗಂಟೆಗೆ 60 ಕಿ.ಮೀ ವೇಗಮಿತಿ ಇದೆ. ಆದಾಗ್ಯೂ ಚಾಲಕರ ನಿರ್ಲಕ್ಷ್ಯ ಹಾಗೂ ಅತಿವೇಗದಿಂದ ಅಪಘಾತಗಳು ಸಂಭವಿಸುತ್ತಿವೆ. ಆದ್ದರಿಂದ ಕಸದ ಲಾರಿಗಳಿಂದ ಸಂಭವಿಸಿರುವ ಅಪಘಾತ ಪ್ರಕರಣಗಳ ವರದಿ ಸಿದ್ಧಪಡಿಸಿ ವೇಗಮಿತಿಯನ್ನು ಮತ್ತಷ್ಟು ತಗ್ಗಿಸಲು ಚಿಂತಿಸಲಾಗುತ್ತಿದೆ. ಅಲ್ಲದೇ ಕಸದ ದುರ್ವಾಸನೆಯ ನಡುವೆ ಕೆಲಸ ಮಾಡಬೇಕಿರುವುದರಿಂದ ಕೆಲವು ಚಾಲಕರು ಪಾನಮತ್ತರಾಗಿ ವಾಹನ ಚಲಾಯಿಸುತ್ತಿರಬಹುದು ಎಂಬ ಅನುಮಾನ ವ್ಯಕ್ತಪಡಿಸಿರುವ ಪೊಲೀಸರು ವಿಶೇಷ ಕಾರ್ಯಾಚರಣೆ ಹೆಚ್ಚಿಸಲು ಸಿದ್ಧತೆ ಮಾಡಿಕೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಇದನ್ನೂ ಓದಿ:ಬೆಂಗಳೂರು: ಬಿಬಿಎಂಪಿ ಕಸದ ಲಾರಿ ಹರಿದು ಇಬ್ಬರು IT ಉದ್ಯೋಗಿಗಳು ಸಾವು - BBMP Garbage Lorry Accident