ಬೆಂಗಳೂರು:ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಒಟಿಎಸ್ (One Time Settlement) ಯೋಜನೆಯ ಪ್ರಯೋಜನ ಪಡೆಯಲು ಕಡೆ ದಿನವಾಗಿದ್ದ ಬುಧವಾರ ತಡ ರಾತ್ರಿಯವರೆಗೂ ತೆರಿಗೆ ಪಾವತಿ ಮಾಡಲು ಅವಕಾಶ ನೀಡಲಾಗಿತ್ತು. ಈ ಹಿನ್ನೆಲೆಯಲ್ಲಿ ನಾಗರಿಕರು ಸಾಲುಗಟ್ಟಿ ನಿಂತು ತೆರಿಗೆ ಪಾವತಿಸಿದ್ದಾರೆ. ಈ ಬಾರಿ ಜುಲೈ ತಿಂಗಳ ಅಂತ್ಯದ ವೇಳೆಗೆ ಬಿಬಿಎಂಪಿ ಕಂದಾಯ ವಿಭಾಗದ ಅಧಿಕಾರಿಗಳು ದಾಖಲೆಯ 3,200 ಕೋಟಿ ರೂಪಾಯಿ ಆಸ್ತಿ ತೆರಿಗೆ ಸಂಗ್ರಹಿಸಿದಂತಾಗಿದೆ.
ಒಟಿಸಿ ಯೋಜನೆ ಅಡಿ ಬುಧವಾರ (ಜು.31) ತೆರಿಗೆ ಪಾವತಿಸಲು ಕಡೆಯ ದಿನವಾಗಿದ್ದರಿಂದ ನಾಗರಿಕರು ಸಾಲುಗಟ್ಟಿ ನಿಂತಿದ್ದರು. ಅಲ್ಲದೇ ಪಾಲಿಕೆ ಕಂದಾಯ ಕಚೇರಿಗಳಲ್ಲೂ ಸರ್ವರ್ ಸಮಸ್ಯೆಯಿಂದಾಗಿ ಹೆಚ್ಚಿನ ಸಮಯ ಕಾಯಬೇಕಾಯಿತು. ಗುರುವಾರದಿಂದ (ಆಗಸ್ಟ್ 1) ಒಟಿಎಸ್ ಯೋಜನೆ ಅಂತ್ಯವಾಗುವುದರಿಂದ ಬಡ್ಡಿ ಹಾಗೂ ದಂಡವನ್ನು ಪಾವತಿಸಬೇಕಾಗುತ್ತದೆ. ಇನ್ನು ಮುಂದೆ ಹಲವು ಆಸ್ತಿಗಳಿಗೆ ಮೂರು ಪಟ್ಟು ಹೆಚ್ಚಿನ ಆಸ್ತಿ ತೆರಿಗೆ ಕಟ್ಟಬೇಕಾಗುತ್ತದೆ ಎಂದು ಮಾಲೀಕರು ಪಾಲಿಕೆ ಕಚೇರಿಗಳಲ್ಲಿ ತೆರಿಗೆ ಪಾವತಿ ಮಾಡಲು ಮುಂದಾಗಿದ್ದು ಕಂಡುಬಂತು.
ಕೈಕೊಟ್ಟ ಸರ್ವರ್:ಆನ್‌ಲೈನ್‌ನಲ್ಲೂ ಸಾಕಷ್ಟು ಜನರು ಪಾವತಿ ಮಾಡುತ್ತಿದ್ದರಿಂದ, ಸರ್ವರ್ ಕೈಕೊಡುತ್ತಿತ್ತು. ಪಾಲಿಕೆ ಕಚೇರಿ ಸಿಬ್ಬಂದಿ ಹಲವು ಪ್ರಯತ್ನ ಮಾಡಿದರೂ, ಪ್ರಕ್ರಿಯೆ ನಿಧಾನಗತಿಯಲ್ಲಿ ಸಾಗುತ್ತಿತ್ತು. ಲಾಗ್ ಇನ್ ಆಗಿರುವುದು ಅದಾಗಿಯೇ ಲಾಗ್‌ಔಟ್ ಆಗಿಬಿಡುತ್ತಿತ್ತು. ಪ್ರಕ್ರಿಯೆಯನ್ನು ಮತ್ತೆ ಮೊದಲಿನಿಂದ ಪ್ರಾರಂಭಿಸಬೇಕಾಗಿತ್ತು. ಇದರಿಂದ ಸಾಲಿನಲ್ಲಿ ಜನರ ಸಂಖ್ಯೆ ಹೆಚ್ಚಾಗುತ್ತಲೇ ಹೊಗಿತ್ತು. ಜುಲೈ 29ರ ಅಂತ್ಯಕ್ಕೆ 2.87 ಲಕ್ಷ ಆಸ್ತಿಗಳಿಂದ ಒಟ್ಟು 831 ಕೋಟಿ ಆಸ್ತಿ ತೆರಿಗೆ ಪಾವತಿಯಾಗಬೇಕಿತ್ತು. ಸಾಕಷ್ಟು ಸಮಸ್ಯೆಗಳ ನಡುವೆಯೂ ಜುಲೈ 30 ಹಾಗೂ 31ರಂದು ಬಹಳಷ್ಟು ಸಂಖ್ಯೆಯಲ್ಲೇ ಆಸ್ತಿ ತೆರಿಗೆ ಪಾವತಿಯಾಗಿದೆ.
ದಾಖಲೆಯ ತೆರಿಗೆ ಸಂಗ್ರಹ: ಬಿಬಿಎಂಪಿ ಜುಲೈ ಅಂತ್ಯದ ವೇಳೆಗೆ ದಾಖಲೆಯ 3,200 ಕೋಟಿ ರೂಪಾಯಿ ಆಸ್ತಿ ತೆರಿಗೆ ಸಂಗ್ರಹಿಸಿದೆ. ಕಳೆದ ವರ್ಷ ಇದೇ ಸಮಯಕ್ಕೆ ಹೋಲಿಸಿದರೆ ಸುಮಾರು 800 ಕೋಟಿ ರೂಪಾಯಿ ತೆರಿಗೆ ಹೆಚ್ಚಳವಾಗಿದೆ. ಕಳೆದ 10 ರಿಂದ 12 ದಿನಗಳಲ್ಲಿ ಬರೋಬ್ಬರಿ 1200 ಕೋಟಿ ರೂಪಾಯಿ ತೆರಿಗೆ ಸಂಗ್ರಹವಾಗಿದೆ. ಒಟ್ಟು 1.2 ಲಕ್ಷ ಆಸ್ತಿಗಳು ಒನ್ ಟೈಮ್ ಸೆಟಲ್‌ಮೆಂಟ್ ಯೋಜನೆಯಡಿಯಲ್ಲಿದ್ದವು ಎಂದು ಬಿಬಿಎಂಪಿ ಕಂದಾಯ ವಿಭಾಗದ ವಿಶೇಷ ಆಯುಕ್ತ ಮುನೀಶ್ ಮೌದ್ಗಿಲ್ ಹೇಳಿದ್ದಾರೆ.
ಇದನ್ನೂ ಓದಿ:ಅನಧಿಕೃತ ಫ್ಲೆಕ್ಸ್, ಬ್ಯಾನರ್ ವಿರುದ್ಧ ಬಿಬಿಎಂಪಿ ಸಮರ: 142 ಎಫ್‌ಐಆರ್ ದಾಖಲು, ಫ್ಲೆಕ್ಸ್ ಕಂಡ್ರೆ ಫೋಟೋ ಸಮೇತ ದೂರು ನೀಡಿ - unauthorized flex removed