ದಾವಣಗೆರೆ: ಸ್ಮಾರ್ಟ್ ಸಿಟಿ ಯೋಜನೆಯಡಿಯಲ್ಲಿ ದಾವಣಗೆರೆ ನಗರದಲ್ಲಿ ಗಲ್ಲಿಗೊಂದು ಕ್ಯಾಮೆರಾ ಅಳವಡಿಸಲಾಗಿದೆ. ನಗರದೆಲ್ಲೆಡೆ ಆಟೋಮ್ಯಾಟಿಕ್ ಹೈ ಡೆಫಿನಿಷನ್ ಕ್ಯಾಮರಾಗಳಿದ್ದು, ಅಪರಾಧಿಗಳಿಗೆ ಸಿಂಹಸ್ವಪ್ನವಾಗಿವೆ. ಅಲ್ಲದೇ ಪ್ರಕರಣಗಳನ್ನು ಸುಲಭವಾಗಿ ಭೇದಿಸಲು ಇವು ಪೊಲೀಸ್ ಇಲಾಖೆಗೆ ಸಹಕಾರಿಯಾಗಿವೆ. ಇದೇ ಕ್ಯಾಮೆರಾಗಳ ಸಹಾಯದಿಂದ ಪೊಲೀಸರು ಕಠಿಣ ಅಪರಾಧ ಪ್ರಕರಣಗಳನ್ನು ಪತ್ತೆ ಹಚ್ಚಿದ್ದಾರೆ.
ದಾವಣಗೆರೆ ಸ್ಮಾರ್ಟ್ ಸಿಟಿ ಲಿ ಐಸಿಟಿ ಪ್ರಾಜೆಕ್ಟ್ ಅಡಿಯಲ್ಲಿ ನಗರದಲ್ಲಿ ಮೊದಲ ಹಂತದಲ್ಲಿ 550 ಕ್ಯಾಮೆರಾಗಳು, ಎರಡನೇ ಹಂತದಲ್ಲಿ 140 ಕ್ಯಾಮೆರಾಗಳನ್ನು ಅಳವಡಿಸಲಾಗಿತ್ತು. ಈ ಪೈಕಿ 380ಕ್ಕೂ ಹೆಚ್ಚು ಕ್ಯಾಮೆರಾಗಳು ಕಾರ್ಯ ನಿರ್ವಹಿಸುತ್ತಿವೆ. ಈ ಎಲ್ಲಾ ಕ್ಯಾಮೆರಾಗಳು ಆಟೋಮ್ಯಾಟಿಕ್ ಹಾಗೂ ಹೈಡೆಫಿನಿಷನ್ ಕ್ಯಾಮೆರಾಗಳಾಗಿವೆ. ಕಿ.ಮೀ ಗಟ್ಟಲೆ ದೂರದಿಂದ ದೃಶ್ಯ, ಫೋಟೋಗಳನ್ನು ಸೆರೆ ಹಿಡಿಯುವ ಸಾಮರ್ಥ್ಯ ಇವುಗಳಿಗಿದೆ.
ಎಸ್ಪಿ ಉಮಾ ಪ್ರಶಾಂತ್ ಪ್ರತಿಕ್ರಿಯೆ: ''ಈ ಕ್ಯಾಮೆರಾಗಳು ಕಾನೂನು ಸುವ್ಯವಸ್ಥೆ ಕಾಪಾಡಲು ಸಹಕಾರಿಯಾಗಿವೆ. ಇಲ್ಲಿಯತನಕ 250ಕ್ಕೂ ಹೆಚ್ಚು ಪ್ರಕರಣಗಳನ್ನು ಇದೇ ಕ್ಯಾಮೆರಾಗಳ ಸಹಾಯದಿಂದ ಪತ್ತೆ ಮಾಡಿದ್ದೇವೆ. 45 ಮಹಿಳಾ ಮತ್ತು ಮಕ್ಕಳ ಪ್ರಕರಣಗಳು, 170 ಕಾನೂನುಬಾಹಿರ ಪ್ರಕರಣಗಳು ಹಾಗೂ ನಿಯಮ ಉಲ್ಲಂಘನೆ ಸೇರಿದಂತೆ ಪ್ರಾಪರ್ಟಿ ರಿಕವರಿ, ನಕಲಿ ನಂಬರ್ ಪ್ಲೇಟ್, ಮೊಬೈಲ್ ಕಳ್ಳತನ ಹಾಗೂ 6 ಚೈನ್ ಸ್ನ್ಯಾಚಿಂಗ್ ಪ್ರಕರಣಗಳು, 4 ಕೊಲೆ ಕೇಸ್, 30ಕ್ಕೂ ಹೆಚ್ಚು ನಕಲಿ ನಂಬರ್ ಪ್ಲೇಟ್ ಹಾಗೂ ಹಿಟ್ ಆ್ಯಂಡ್ ರನ್ ಕೇಸ್ಗಳನ್ನು ಭೇದಿಸಲು ಸಹಕಾರಿಯಾಗಿವೆ. ಸುಸಜ್ಜಿತವಾದ ಕಮಾಂಡೆಂಟ್ ರೂಮ್ ಇದೆ. ಅಲ್ಲಿ ಯಾವುದೇ ಘಟನೆ ನಡೆದಾಗ ನಮಗೆ ತಕ್ಷಣವೇ ಮಾಹಿತಿ ನೀಡುತ್ತಾರೆ. ಹೀಗಾಗಿ ನಮಗೆ ಬಹಳ ಉಪಯೋಗ ಆಗಿದೆ" ಎಂದರು.