ಹಾವೇರಿ :ಶಿಗ್ಗಾಂವಿ ವಿಧಾನಸಭೆ ಕ್ಷೇತ್ರದ ಉಪಚುನಾವಣೆಯ ಮತ ಎಣಿಕೆ ಮುಕ್ತಾಯವಾಗಿದ್ದು, ಕಾಂಗ್ರೆಸ್ ಅಭ್ಯರ್ಥಿ ಯಾಸಿರ್ ಖಾನ್ ಪಠಾಣ್ 13,448 ಮತಗಳ ಅಂತರದಿಂದ ಬಿಜೆಪಿ ಅಭ್ಯರ್ಥಿ ಭರತ್ ಬೊಮ್ಮಾಯಿ ವಿರುದ್ಧ ಜಯಿಸಿದ್ದಾರೆ.
ಯಾಸೀರ್ ಖಾನ್ ಪಠಾಣ್ 1,00,756 ಮತಗಳನ್ನ ಪಡೆದು ಮುನ್ನಡೆ ಸಾಧಿಸಿದ್ದರೆ, ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರ ಮಗ, ಬಿಜೆಪಿ ಅಭ್ಯರ್ಥಿ ಭರತ್ ಬೊಮ್ಮಾಯಿ ಅವರು 87,308 ಮತಗಳನ್ನ ಪಡೆದು ಸೋಲನುಭವಿಸಿದ್ದಾರೆ.
ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಬಿಜೆಪಿ ಅಭ್ಯರ್ಥಿ ಭರತ್ ಬೊಮ್ಮಾಯಿ ಅವರು, ಕಾಂಗ್ರೆಸ್ ಸರ್ಕಾರ ಹಣದ ಹೊಳೆಯನ್ನ ಹರಿಸಿ ಮುಂದೆ ಬಂದಿದೆ ಎಂದು ಆರೋಪಿಸಿದರು.
ಶಿಗ್ಗಾಂವಿ, ಸವಣೂರು ಕ್ಷೇತ್ರದ ಜನತೆಗೆ ಧನ್ಯವಾದವನ್ನು ಹೇಳಲು ಇಚ್ಛೆಪಡುತ್ತೇನೆ, ಭಾರತೀಯ ಜನತಾ ಪಕ್ಷದ ಕಾರ್ಯಕರ್ತರಿಗೆ ಧನ್ಯವಾದ ತಿಳಿಸುತ್ತೇನೆ. ಶಿಗ್ಗಾಂವಿ, ಸವಣೂರು ಕ್ಷೇತ್ರದ ಜನತೆಗೆ ಒಳಿತಾಗಲಿ, ಅಭಿವೃದ್ಧಿ ಕೆಲಸಗಳು ಮುಂದುವರೆಯಲಿ ಎಂದು ನಾನು ಆ ದೇವರಲ್ಲಿ ಪ್ರಾರ್ಥನೆ ಮಾಡುತ್ತೇನೆ ಎಂದರು.
ಸೋಲಿನ ಕಾರಣ ಕುರಿತು ಬೂತ್ ಮಟ್ಟದಲ್ಲಿ ಅವಲೋಕನ ಮಾಡುತ್ತೇವೆ, ನಾವು ನಮ್ಮ ಟೀಂ ಕುಳಿತುಕೊಂಡು, ಹಿರಿಯರು, ಯುವಕರನ್ನ ಕರೆದುಕೊಂಡು ವಿಶ್ಲೇಷಣೆ ಮಾಡುತ್ತೇವೆ ಎಂದು ಹೇಳಿದರು.
ಯಾರಿಗೆ ಎಷ್ಟು ಮತ?
ಯಾಸೀರ್ ಖಾನ್ ಪಠಾಣ್ (ಕಾಂಗ್ರೆಸ್) - 100756 ಮತ
ಭರತ್ ಬೊಮ್ಮಾಯಿ (ಬಿಜೆಪಿ) – 87,308