ಬೆಂಗಳೂರು:ವಿವಿಧ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿ 8 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಇಬ್ಬರು ಆರೋಪಿಗಳನ್ನು ಬಸವನಗುಡಿ ಪೊಲೀಸರು ಬಂಧಿಸಿದ್ದಾರೆ. ರೋಹಿತ್ ಹಾಗೂ ಮೋಹನ್ ಬಂಧಿತ ಆರೋಪಿಗಳು.
ಬಂಧಿತರ ಪೈಕಿ ರೋಹಿತ್ 2016-2017ನೇ ಸಾಲಿನಲ್ಲಿ ಬೆಂಗಳೂರಿನ ವಿವಿಧ ಠಾಣಾ ವ್ಯಾಪ್ತಿಯಲ್ಲಿ ಕಳವು, ದರೋಡೆ, ದರೋಡೆ ಯತ್ನ ಪ್ರಕರಣಗಳಲ್ಲಿ ಭಾಗಿಯಾಗಿದ್ದ. ಏಪ್ರಿಲ್ 8ರಂದು ಬಸವನಗುಡಿಯ ಸನ್ನಿಧಿ ರಸ್ತೆಯಲ್ಲಿದ್ದ ಆರೋಪಿಯನ್ನು ವಶಕ್ಕೆ ಪಡೆದುಕೊಂಡು ವಿಚಾರಿಸಿದಾಗ ಆತ 2016-17ನೇ ಸಾಲಿನಲ್ಲಿ ಬಸವನಗುಡಿ ಠಾಣೆಯಲ್ಲಿ ವರದಿಯಾಗಿದ್ದ ಎರಡು ರಾಬರಿ ಪ್ರಕರಣಗಳು ಹಾಗೂ ಒಂದು ಕಳುವು ಪ್ರಕರಣಗಳ ಆರೋಪಿ ಎಂಬುದು ತಿಳಿದು ಬಂದಿದೆ. ಹೆಚ್ಚಿನ ವಿಚಾರಣೆಗೊಳಪಡಿಸಿ ಆರೋಪಿಯನ್ನು ಬಂಧಿಸಿದಾಗ ಜೆ.ಪಿ.ನಗರ, ಚೆನ್ನಮ್ಮನಕೆರೆ ಅಚ್ಚುಕಟ್ಟು, ಜಯನಗರ, ವಿವಿ ಪುರಂ ಠಾಣೆಯ ತಲಾ ಎರಡು ಪ್ರಕರಣಗಳು ಹಾಗೂ ಹನುಮಂತನಗರ, ಸಿದ್ದಾಪುರ, ಬೆಳ್ಳಂದೂರು, ಎಸ್.ಜಿ.ಪಾಳ್ಯ ಪೊಲೀಸ್ ಠಾಣೆಯ ತಲಾ ಒಂದು ಪ್ರಕರಣಗಳಲ್ಲಿ ಭಾಗಿಯಾಗಿರುವುದು ತಿಳಿದು ಬಂದಿದೆ.
ಮತ್ತೋರ್ವ ಆರೋಪಿ ಮೋಹನ್‌ನನ್ನು ಏಪ್ರಿಲ್ 8 ರಂದು ಬಸವನಗುಡಿ ಪೊಲೀಸ್ ಠಾಣಾ ವ್ಯಾಪ್ತಿಯ ಎನ್.ಆರ್.ಕಾಲೊನಿಯಲ್ಲಿ ವಶಕ್ಕೆ ಪಡೆದುಕೊಳ್ಳಲಾಗಿತ್ತು. ಆರೋಪಿಯನ್ನು ವಿಚಾರಣೆಗೊಳಪಡಿಸಿದಾಗ, ಬಸವನಗುಡಿ ಪೊಲೀಸ್ ಠಾಣೆಯಲ್ಲಿ 2012ನೇ ಸಾಲಿನಲ್ಲಿ ವರದಿಯಾದ ಒಂದು ದರೋಡೆ ಪ್ರಕರಣ ಮತ್ತು 2009ನೇ ಸಾಲಿನಲ್ಲಿ ಒಂದು ಹಲ್ಲೆ ಪ್ರಕರಣದಲ್ಲಿ ಭಾಗಿಯಾಗಿ, ಅಂದಿನಿಂದ ಇಲ್ಲಿಯವರೆಗೆ ತಲೆಮರೆಸಿಕೊಂಡಿರುವುದು ತಿಳಿದು ಬಂದಿದೆ. ಅಲ್ಲದೆ ಹೆಬ್ಬಗೋಡಿ, ಬನಶಂಕರಿ, ಮೈಕೋ ಲೇಔಟ್ ಪೊಲೀಸ್ ಠಾಣೆಯಲ್ಲಿ ತಲಾ ಎರಡು ಪ್ರಕರಣ ಹಾಗೂ ಶಿಡ್ಲಘಟ್ಟ, ತಮಿಳುನಾಡು ಕೃಷ್ಣಗಿರಿ ಜಿಲ್ಲೆಯ ತಲಿ ಪೊಲೀಸ್ ಠಾಣೆಯಲ್ಲಿ ತಲಾ ಒಂದು ಪ್ರಕರಣಗಳಲ್ಲಿ ಆರೋಪಿಯು ಭಾಗಿಯಾಗಿರುವುದು ಪತ್ತೆಯಾಗಿದೆ. ಸದ್ಯ ಇಬ್ಬರೂ ಆರೋಪಿಗಳನ್ನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಬಸವನಗುಡಿ ಪೊಲೀಸರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ:ರಶ್ ಇರುವ ಬಸ್‌ಗಳಲ್ಲಿ ಮೊಬೈಲ್ ದೋಚುತ್ತಿದ್ದ ಅಂತರ್‌ರಾಜ್ಯ ಕಿಸೆಕಳ್ಳರ ಬಂಧನ: ₹30 ಲಕ್ಷ ಮೌಲ್ಯದ 107 ಫೋನ್‌ಗಳು ವಶಕ್ಕೆ - Mobile Theft Case