ಕರ್ನಾಟಕ

karnataka

ETV Bharat / state

ಎಂಎಲ್‌ಸಿ ಯತೀಂದ್ರ ಸಿದ್ದರಾಮಯ್ಯ ವಿರುದ್ಧ ಅರ್ಜಿ ಸಲ್ಲಿಸಲು ಅನುಮತಿ ಕೋರಿ ಎಜಿಗೆ ಮನವಿ - YATHINDRA SIDDARAMAIAH

ವಿಧಾನ ಪರಿಷತ್​​ ಸದಸ್ಯ ಯತೀಂದ್ರ ಸಿದ್ದರಾಮಯ್ಯ ಅವರ ಹೇಳಿಕೆಯೊಂದರ ವಿರುದ್ಧ ನ್ಯಾಯಾಂಗ ನಿಂದನೆ ದೂರು ಸಲ್ಲಿಸಲು ಅನುಮತಿ ನೀಡಬೇಕು ಎಂದು ವಕೀಲರೊಬ್ಬರು ರಾಜ್ಯದ ಅಡ್ವೊಕೇಟ್​​ ಜನರಲ್​​ ಅವರ ಅನುಮತಿ ಕೇಳಿ ಅರ್ಜಿ ಸಲ್ಲಿಸಿದ್ದಾರೆ.

ಎಂಎಲ್‌ಸಿ ಯತೀಂದ್ರ ಸಿದ್ದರಾಮಯ್ಯ ವಿರುದ್ಧ ಅರ್ಜಿ ಸಲ್ಲಿಸಲು ಅನುಮತಿ ಕೋರಿ ಎಜಿಗೆ ಅರ್ಜಿ
ಎಂಎಲ್‌ಸಿ ಯತೀಂದ್ರ ಸಿದ್ದರಾಮಯ್ಯ ವಿರುದ್ಧ ಅರ್ಜಿ ಸಲ್ಲಿಸಲು ಅನುಮತಿ ಕೋರಿ ಎಜಿಗೆ ಅರ್ಜಿ (ETV Bharat)

By ETV Bharat Karnataka Team

Published : Nov 23, 2024, 7:58 AM IST

ಬೆಂಗಳೂರು: "ನ್ಯಾಯಾಲಯಗಳು ಸಹ ಕೇಂದ್ರ ಸರ್ಕಾರದ ಮಾತುಗಳನ್ನು ಕೇಳುವ ಸ್ಥಿತಿ ತಲುಪಿವೆ" ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ, ವಿಧಾನ ಪರಿಷತ್​​ ಸದಸ್ಯ ಯತೀಂದ್ರ ಸಿದ್ದರಾಮಯ್ಯ ಹೇಳಿದ್ದು ಅವರ ಮೇಲೆ ನ್ಯಾಯಾಂಗ ನಿಂದನೆ ದೂರು ಸಲ್ಲಿಸಲು ಅನುಮತಿ ನೀಡಬೇಕು ಎಂದು ವಕೀಲ ವಸಂತ್​​​ ಕುಮಾರ್​​ ರಾಜ್ಯದ ಅಡ್ವೊಕೇಟ್​​ ಜನರಲ್​​ ಅವರ ಅನುಮತಿ ಕೇಳಿ ಅರ್ಜಿ ಸಲ್ಲಿಸಿದ್ದಾರೆ.

ನವೆಂಬರ್ 13 ರಂದು ಹೆಚ್​. ಡಿ. ಕೋಟೆಯಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ "ಕೇಂದ್ರ ಸರ್ಕಾರ ತನಿಖಾ ಸಂಸ್ಥೆಗಳನ್ನು ದುರುಪಯೋಗ ಮಾಡಿಕೊಳ್ಳುತ್ತಿದೆ. ಇಡಿ, ಸಿಬಿಐ, ಐಟಿ ಎಲ್ಲವೂ ಕೇಂದ್ರ ಸರ್ಕಾರದ ಕೈ ಗೊಂಬೆಯಾಗಿದೆ. ಕೋರ್ಟ್‌ಗಳು ಕೂಡ ಕೇಂದ್ರ ಸರ್ಕಾರದ ಮಾತನ್ನು ಕೇಳುವ ಸ್ಥಿತಿ ನಿರ್ಮಾಣವಾಗಿದೆ" ಎಂದು ಯತೀಂದ್ರ ಸಿದ್ದರಾಮಯ್ಯ ಹೇಳಿದ್ದಾರೆ.

ಈ ಹೇಳಿಕೆ ನ್ಯಾಯಾಂಗದ ಸ್ವತಂತ್ರತೆಯನ್ನು ಪ್ರಶ್ನಿಸುವಂತಿದೆ. ಹಾಗೂ ನ್ಯಾಯಾಂಗವು ಕಾರ್ಯಾಂಗದ ಪ್ರಭಾವದಡಿಯಲ್ಲಿ ಕೆಲಸ ನಿರ್ವಹಿಸುತ್ತಿದೆ ಎಂಬ ಆರೋಪ ಮಾಡಿದಂತಿದೆ. ಹೀಗಾಗಿ ಅವರ ವಿರುದ್ಧ ನ್ಯಾಯಾಂಗ ನಿಂದನೆ ಅರ್ಜಿ ದಾಖಲಿಸಲು ಅನುಮತಿ ನೀಡಬೇಕು ಎಂದು ಅರ್ಜಿಯಲ್ಲಿ ಮನವಿ ಮಾಡಿದ್ದಾರೆ.

ಯತೀಂದ್ರ ಸಿದ್ದರಾಮಯ್ಯ ಅವರ ಹೇಳಿಕೆ ನ್ಯಾಯಾಲಯದ ಅಧಿಕಾರ ಮತ್ತು ಸಮಗ್ರತೆಯ ಮೇಲೆ ಗಂಭೀರ ಪರಿಣಾಮ ಬೀರುವಂತಹದ್ದು. ಅವರ ಹೇಳಿಕೆ ನ್ಯಾಯಾಂಗದ ವಿಮರ್ಶೆಯ ಸೀಮೆಯನ್ನು ಮೀರಿದ್ದು ನ್ಯಾಯಾಲಯದ ಘನತೆಗೆ ಕಳಂಕ ತರುವಂತಹದ್ದು. ನ್ಯಾಯಾಲಯದ ಘನತೆ ಮತ್ತು ಅಧಿಕಾರವನ್ನು ಎತ್ತಿ ಹಿಡಿಯುವ ಮತ್ತು ನ್ಯಾಯಾಂಗದ ಮೇಲಿನ ಜನರ ವಿಶ್ವಾಸವನ್ನು ಕುಂದಿಸುವ ಯತ್ನಗಳನ್ನು ತಡೆಯವ ಅಗತ್ಯವಿದ್ದು ಈ ಹಿನ್ನೆಲೆಯಲ್ಲಿ ಯತೀಂದ್ರ ಸಿದ್ದರಾಮಯ್ಯ ಅವರ ಮೇಲೆ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಲು ಅನುಮತಿ ನೀಡಬೇಕು ಎಂದು ಕೋರಿದ್ದಾರೆ.

ಖಾಸಗಿ ವ್ಯಕ್ತಿಗಳು ನ್ಯಾಯಾಂಗ ನಿಂದನೆ ದೂರು ಸಲ್ಲಿಸಲು ಸುಪ್ರೀಂ ಕೋರ್ಟ್‌ನಲ್ಲಿ ಅಟಾರ್ನಿ ಜನರಲ್​​ ಮತ್ತು ಹೈಕೋರ್ಟ್‌ನಲ್ಲಿ ಅಡ್ವೊಕೇಟ್ ಜನರಲ್ ಅವರ ಅನುಮತಿ ಪಡೆಯಬೇಕು ಎಂಬ ನಿಯಮವಿರುವ ಹಿನ್ನೆಲೆಯಲ್ಲಿ ಈ ಮನವಿ ಸಲ್ಲಿಕೆ ಮಾಡಲಾಗಿದೆ.

ಇದನ್ನೂ ಓದಿ:ನ್ಯಾ.ಮೈಕೆಲ್ ಡಿ.ಕುನ್ಹಾಗೆ ಪತ್ರ ಬರೆದು ಕ್ಷಮೆ ಕೋರಿದ ಪ್ರಲ್ಹಾದ್ ಜೋಶಿ

ABOUT THE AUTHOR

...view details