ಶಿವಮೊಗ್ಗ: ಶರಾವತಿ ನಿರಾಶ್ರಿತರ ಸಮಸ್ಯೆ ಪರಿಹಾರಕ್ಕಾಗಿ ರಾಜ್ಯ ಸರ್ಕಾರದಿಂದ ಸುಪ್ರೀಂ ಕೋರ್ಟ್ಗೆ ಮೇಲ್ಮನವಿ ಸಲ್ಲಿಸಲಾಗಿದೆ. ಪ್ಯಾನಲ್ ಆಫ್ ಅಡ್ವೊಕೇಟ್ಸ್ ನೇಮಕ ಮಾಡುತ್ತಿದ್ದಾರೆ ಎಂದು ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.
ನಗರದ ಪ್ರೆಸ್ಟ್ರಸ್ಟ್ನಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಉತ್ತಮ ಅಡ್ವೊಕೇಟ್ಸ್ ತಂಡ ಇಟ್ಟುಕೊಂಡು ಶರಾವತಿ ನಿರಾಶ್ರಿತರ ಸಮಸ್ಯೆಯನ್ನು ತ್ವರಿತ ರೀತಿಯಲ್ಲಿ ಬಗೆಹರಿಸುವ ಕೆಲಸ ಮಾಡುತ್ತೇವೆ ಎಂದು ಭರವಸೆ ನೀಡಿದರು.
ಶರಾವತಿ ನಿರಾಶ್ರಿತರ ಸಮಸ್ಯೆ ಪರಿಹಾರದ ಬೇಡಿಕೆ ಹಿಂದಿನಿಂದಲೂ ಇತ್ತು. ಮಾಜಿ ಸಚಿವ ಕಾಗೋಡು ತಿಮ್ಮಪ್ಪನವರು ಆ ಸಂದರ್ಭದಲ್ಲಿ ಬಹಳ ಸಹಕಾರ ನೀಡಿದ್ದರು. ಆದರೆ ಕಾನೂನು ತುಂಬಾ ಕಠಿಣವಾಗಿಯೇ ಇದೆ. ಅದು ಸಡಿಲವಾಗಲಿಲ್ಲ ಎಂದರೆ ನಮ್ಮ ಜನರಿಗೆ ಹಕ್ಕು ಪತ್ರ ಸಿಗುವುದಿಲ್ಲ. ಶರಾವತಿ ನಿರಾಶ್ರಿತರ ಸಮಸ್ಯೆಯ ಕುರಿತು ಈಗಾಗಲೇ ಹತ್ತಾರು ಸಭೆ ನಡೆಸಲಾಗಿದೆ. ಈ ಕುರಿತು ಸಿಎಂ ಸಿದ್ದರಾಮಯ್ಯ ಜಿಲ್ಲಾ ಮಟ್ಟದ ಸಭೆ ನಡೆಸುವಂತೆ ತಿಳಿಸಿದ್ದಾರೆ. ಮುಂದೆ ಸಿಎಂ ನೇತೃತ್ವದಲ್ಲಿ ಸಭೆ ನಡೆಸಲಾಗುತ್ತದೆ ಎಂದು ತಿಳಿಸಿದರು.