ಬೆಂಗಳೂರು:ರಾಜ್ಯ ಪಠ್ಯಕ್ರಮ ಅಳವಡಿಸಿಕೊಂಡಿರುವ ಅನುದಾನಿತ ಮತ್ತು ಅನುದಾನರಹಿತ ಶಿಕ್ಷಣ ಸಂಸ್ಥೆಗಳಲ್ಲಿ 5, 8 ಮತ್ತು 9ನೇ ತರಗತಿಗಳಿಗೆ ಬೋರ್ಡ್ ಮಟ್ಟದ ಮೌಲ್ಯಾಂಕನ ಪರೀಕ್ಷೆಗಳನ್ನು ನಡೆಸುವ ಸಂಬಂಧದ ಮೇಲ್ಮನವಿ ಅರ್ಜಿಯ ವಿಚಾರಣೆಯನ್ನು ವಿಸ್ತೃತ ಪೀಠಕ್ಕೆ ವರ್ಗಾವಣೆ ಮಾಡಬೇಕು ಎಂದು ಕೋರಿದ್ದ ಮಧ್ಯಂತರ ಮನವಿಯನ್ನು ಹೈಕೋರ್ಟ್ ತಿರಸ್ಕರಿಸಿದೆ.
ರಾಜ್ಯ ಪಠ್ಯಕ್ರಮ ಅಳವಡಿಸಿಕೊಂಡಿರುವ 5, 8 ಮತ್ತು 9ನೇ ತರಗತಿಗಳಿಗೆ ಬೋರ್ಡ್ ಮಟ್ಟದ ಮೌಲ್ಯಾಂಕನ ಪರೀಕ್ಷೆಗಳನ್ನು ನಡೆಸುವ ಸಂಬಂಧ ರಾಜ್ಯ ಸರ್ಕಾರ ಹೊರಡಿಸಿದ್ದ ಎರಡು ಸುತ್ತೋಲೆಗಳನ್ನು ರದ್ದುಪಡಿಸಿದ್ದ ಏಕಸದಸ್ಯ ಪೀಠದ ಆದೇಶ ಪ್ರಶ್ನಿಸಿ ರಾಜ್ಯ ಸರ್ಕಾರ ಮೇಲ್ಮನವಿ ಸಲ್ಲಿಸಿತ್ತು. ಈ ಮೇಲ್ಮನವಿಯನ್ನು ನ್ಯಾಯಮೂರ್ತಿ ಕೆ.ಸೋಮಶೇಖರ್ ಮತ್ತು ರಾಜೇಶ್ ಕೆ. ರೈ ಅವರಿದ್ದ ನ್ಯಾಯಪೀಠ ವಿಚಾರಣೆ ನಡೆಸಿತು.
ವಿಚಾರಣೆ ವೇಳೆ ಅನುದಾನರಹಿತ ಶಾಲೆಗಳ ಒಕ್ಕೂಟದ ವಕೀಲರು, ಸರ್ಕಾರ ಹೊರಡಿಸಿರುವ ಸುತ್ತೋಲೆಯಲ್ಲಿ ದೊಡ್ಡಮಟ್ಟದ ಸಾರ್ವಜನಿಕ ಹಿತಾಸಕ್ತಿ ಅಡಗಿದೆ. ಆದ್ದರಿಂದ ಅರ್ಜಿಯನ್ನು ವಿಸ್ತೃತ ಪೀಠಕ್ಕೆ ವರ್ಗಾವಣೆ ಮಾಡಬೇಕು ಎಂದು ಕೋರಿದರು. ಮನವಿ ತಿರಸ್ಕರಿಸಿದ ಪೀಠ, ಮಧ್ಯಂತರ ಅರ್ಜಿ ವಿಚಾರಣೆ ನಡೆಸಿರುವ ಸುಪ್ರೀಂಕೋರ್ಟ್ ನ್ಯಾಯಪೀಠ, ಮೇಲ್ಮನವಿಯನ್ನು ವಿಭಾಗೀಯಪೀಠ ವಿಚಾರಣೆ ನಡೆಸಿ, ಆದಷ್ಟು ಶೀಘ್ರದಲ್ಲಿ ಸೂಕ್ತ ನಿರ್ಧಾರ ಪ್ರಕಟಿಸುವಂತೆ ತಿಳಿಸಿದೆ. ಆದ್ದರಿಂದ ಅರ್ಜಿಯನ್ನು ವಿಸ್ತೃತ ಪೀಠಕ್ಕೆ ವರ್ಗಾವಣೆ ಮಾಡುವುದಕ್ಕೆ ಸಾಧ್ಯವಿಲ್ಲ ಎಂದು ತಿಳಿಸಿತು.
ಇದೇ ಸಂದರ್ಭದಲ್ಲಿ ಬೋರ್ಡ್ ಮಟ್ಟದ ಪರೀಕ್ಷೆಗಳನ್ನು ನಡೆಸುವುದಕ್ಕೆ ಅವಕಾಶ ಕಲ್ಪಿಸುವಂತೆ ಕೋರಿ ವಿದ್ಯಾರ್ಥಿಗಳು ಮತ್ತು ಪೋಷಕರ ಪರವಾಗಿ ಮಧ್ಯಂತರ ಅರ್ಜಿ ಸಲ್ಲಿಕೆಯಾಗಿದೆ. ಜೊತೆಗೆ, ಪರೀಕ್ಷೆ ನಡೆಸದಂತೆ ಮತ್ತೊಂದು ಮಧ್ಯಂತರ ಅರ್ಜಿ ಸಲ್ಲಿಕೆಯಾಗಿದ್ದು, ಇನ್ನಷ್ಟೇ ವಿಚಾರಣೆ ನಡೆಸಬೇಕಾಗಿದೆ.
ಖಾಸಗಿ ಶಿಕ್ಷಣ ಸಂಸ್ಥೆಗ ಪರ ವಕೀಲರು ವಾದ ಮಂಡಿಸಿ, ''ಸರ್ಕಾರ ನಡೆಸುವುದಕ್ಕೆ ಮುಂದಾಗಿರುವ ಪರೀಕ್ಷಾ ಕ್ರಮದ ಗೊಂದಲಗಳು ಮಕ್ಕಳ ಮೇಲೆ ಪರಿಣಾಮ ಬೀರಬಹುದಾಗಿದೆ. ಸರ್ಕಾರದ ಈ ಸುತ್ತೋಲೆಯು ಕರ್ನಾಟಕ ಶಿಕ್ಷಣ ಕಾಯಿದೆ ಸೆಕ್ಷನ್ 22ಕ್ಕೆ ಸೀಮಿತವಾಗಿಲ್ಲ. ಹಲವು ಪ್ರಶ್ನೆಗಳನ್ನು ಹುಟ್ಟುಹಾಕುತ್ತಿದೆ. ಅಲ್ಲದೇ, ಸರ್ಕಾರದ ಸುತ್ತೋಲೆಗಳನ್ನು ಸುಪ್ರೀಂಕೋರ್ಟ್ ಕಾನೂನು ಬಾಹಿರ ಎಂಬುದಾಗಿ ಘೋಷಿಸಿ ರದ್ದುಪಡಿಸಿದೆ. ಹೀಗಾಗಿ, ಸುತ್ತೋಲೆ ರದ್ದುಪಡಿಸಿರುವ ಕ್ರಮ ಸರಿಯಾಗಿದೆ'' ಎಂದು ಪೀಠಕ್ಕೆ ವಿವರಿಸಿದರು.
ಸರ್ಕಾರದ ಪರವಾಗಿ ವಾದ ಮುಂದುವರೆಸಿದ ಹೆಚ್ಚುವರಿ ಅಡ್ವೋಕೇಟ್ ಜನರಲ್ ವಿಕ್ರಮ್ ಹುಯಿಲಗೋಳ, ''ಅರ್ಜಿದಾರರ ವಾದವು ವಿನಾಕಾರಣ ಎಳೆದುಕೊಂಡು ಹೋಗುವುದಾಗಿದೆ. ಜೊತೆಗೆ, ವಿಳಂಬಕ್ಕೆ ಕಾರಣವಾಗಲಿದೆ. ಅಲ್ಲದೇ, ಕರ್ನಾಟಕ ಶಿಕ್ಷಣ ಕಾಯಿದೆ ಸೆಕ್ಷನ್ ಪ್ರಕಾರ ರಾಜ್ಯ ಸರ್ಕಾರಕ್ಕೆ ಪರೀಕ್ಷೆಗಳನ್ನು ನಡೆಸುವುದಕ್ಕೆ ಅವಕಾಶವಿದೆ. ಅದರಂತೆ ಪರೀಕ್ಷೆಗಳಿಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ'' ಎಂದು ಪೀಠಕ್ಕೆ ತಿಳಿಸಿದರು.
ಪ್ರಕರಣದ ಹಿನ್ನೆಲೆ:ಕರ್ನಾಟಕ ಶಿಕ್ಷಣ ಕಾಯಿದೆಯಡಿ ರಾಜ್ಯ ಶಿಕ್ಷಣ ಇಲಾಖೆ 2023ರ ಅಕ್ಟೋಬರ್ 6 ಮತ್ತು 9ರಂದು ಎರಡು ಸುತ್ತೋಲೆಗಳನ್ನ ಹೊರಡಿಸಿ 5, 8, 9 ಮತ್ತು 11ನೇ ತರಗತಿಗಳಿಗೆ ಬೋರ್ಡ್ ಮಟ್ಟದ ಪರೀಕ್ಷೆ ನಡೆಸುವುದಕ್ಕೆ ತೀರ್ಮಾನಿಸಿತ್ತು. ಇದನ್ನು ಪ್ರಶ್ನಿಸಿದ್ದ ಅರ್ಜಿದಾರರ ಸಂಘಗಳು, ಸರ್ಕಾರದ ಸುತ್ತೋಲೆ ಕಡ್ಡಾಯ ಶಿಕ್ಷಣ ಹಕ್ಕು ಕಾಯಿದೆ ಸೆಕ್ಷನ್ 30 ಮತ್ತು ಕರ್ನಾಟಕ ಶಿಕ್ಷಣ ಕಾಯಿದೆಯ ವಿವಿಧ ಸೆಕ್ಷನ್ಗಳ ಉಲ್ಲಂಘನೆಯಾಗಿದ್ದು, ಬೋರ್ಡ್ ಪರೀಕ್ಷೆ ರದ್ದುಪಡಿಸಬೇಕು ಎಂದು ಕೋರಿದ್ದರು.
ಈ ಅರ್ಜಿಗಳ ವಿಚಾರಣೆ ನಡೆಸಿದ್ದ ಏಕಸದಸ್ಯ ಪೀಠ, ಶಿಕ್ಷಣ ಇಲಾಖೆ ಸುತ್ತೋಲೆಗಳನ್ನು ರದ್ದುಪಡಿಸಿ ಆದೇಶಿಸಿತ್ತು. ಏಕಸದಸ್ಯ ಪೀಠದ ಆದೇಶ ಪ್ರಶ್ನಿಸಿ ಸರ್ಕಾರವು ದ್ವಿಸದಸ್ಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಿತ್ತು. ಮೇಲ್ಮನವಿ ವಿಚಾರಣೆ ನಡೆಸಿದ್ದ ದ್ವಿಸದಸ್ಯ ಪೀಠ, ಏಕಸದಸ್ಯ ಪೀಠದ ಆದೇಶಕ್ಕೆ ತಡೆ ನೀಡಿತ್ತು. ಇದನ್ನು ಅರ್ಜಿದಾರರು ಸುಪ್ರೀಂಕೋರ್ಟ್ಗೆ ವಿಶೇಷ ಮೇಲ್ಮನವಿ ಸಲ್ಲಿಸಿದ್ದರು. ದ್ವಿಸದಸ್ಯ ಪೀಠದ ಆದೇಶಕ್ಕೆ ತಡೆ ನೀಡಿದ್ದ ಸುಪ್ರೀಂಕೋರ್ಟ್ ದ್ವಿಸದಸ್ಯ ಪೀಠದ ಮುಂದೆ ಸರ್ಕಾರ ಸಲ್ಲಿಸಿರುವ ಮೇಲ್ಮನವಿಯನ್ನು ಆದಷ್ಟು ಶೀಘ್ರವಾಗಿ ವಿಚಾರಣೆ ನಡೆಸಿ, ಸೂಕ್ತ ಆದೇಶ ನೀಡುವಂತೆ ಸೂಚನೆ ನೀಡಿತ್ತು.
ಇದನ್ನೂ ಓದಿ:ಏಕರೂಪ ಶಿಕ್ಷಣ ವ್ಯವಸ್ಥೆ ಜಾರಿಗಾಗಿ ಬೋರ್ಡ್ ಪರೀಕ್ಷೆ: ಸರ್ಕಾರದ ಸಮರ್ಥನೆ