ಕರ್ನಾಟಕ

karnataka

ETV Bharat / state

'ತುರ್ತು ಪರಿಸ್ಥಿತಿ ಕುರಿತು ಇನ್ನಷ್ಟು ಅಧ್ಯಯನ ಅಗತ್ಯವಿದ್ದು, ಬಿಜೆಪಿಯಿಂದ ಜನಜಾಗೃತಿ ಮೂಡುತ್ತಿದೆ' - K Annamalai - K ANNAMALAI

ಭಾರತದ ಮೇಲೆ ಆಗಿನ ಪ್ರಧಾನಿ ಇಂದಿರಾ ಗಾಂಧಿ ಹೇರಿದ್ದ ತುರ್ತು ಪರಿಸ್ಥಿತಿ ಕುರಿತು ಇನ್ನಷ್ಟು ಅಧ್ಯಯನ ಅಗತ್ಯವಿದೆ. ಬಿಜೆಪಿಯು ಈ ತುರ್ತು ಪರಿಸ್ಥಿತಿ ಕುರಿತು ಜನಜಾಗೃತಿ ಮೂಡಿಸುತ್ತಾ ಬಂದಿದೆ ಎಂದು ಅಣ್ಣಾಮಲೈ ಹೇಳಿದ್ದಾರೆ.

ಅಣ್ಣಾಮಲೈ
ಅಣ್ಣಾಮಲೈ (ETV Bharat)

By ETV Bharat Karnataka Team

Published : Jun 26, 2024, 7:57 AM IST

ಬೆಂಗಳೂರು: 'ದೇಶದ ಮೇಲೆ ಇಂದಿರಾ ಗಾಂಧಿ ಹೇರಿದ್ದ ತುರ್ತು ಪರಿಸ್ಥಿತಿ ಕುರಿತು ಇನ್ನಷ್ಟು ಅಧ್ಯಯನ ಅಗತ್ಯವಿದೆ. ತುರ್ತು ಪರಿಸ್ಥಿತಿ ಕುರಿತು ಬಿಜೆಪಿ ಜನಜಾಗೃತಿ ಮೂಡಿಸುತ್ತಾ ಬಂದಿದೆ' ಎಂದು ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಕೆ. ಅಣ್ಣಾಮಲೈ ಅವರು ಹೇಳಿದ್ದಾರೆ.

“ತುರ್ತು ಪರಿಸ್ಥಿತಿ ಸಂವಿಧಾನಕ್ಕೆ ಮಾಡಿದ ಅಪಚಾರ” ಕುರಿತಂತೆ ಸಂವಾದ ಕಾರ್ಯಕ್ರಮ (ETV Bharat)

“ಸಿಟಿಜನ್ಸ್ ಫಾರ್ ಸೋಷಿಯಲ್ ಜಸ್ಟಿಸ್” ಬೆಂಗಳೂರು ಇವರ ವತಿಯಿಂದ ನಗರದ ಚೌಡಯ್ಯ ಮೆಮೋರಿಯಲ್ ಹಾಲ್​ನಲ್ಲಿ ಮಂಗಳವಾರ ಏರ್ಪಡಿಸಿದ್ದ “ತುರ್ತು ಪರಿಸ್ಥಿತಿ ಸಂವಿಧಾನಕ್ಕೆ ಮಾಡಿದ ಅಪಚಾರ” ಕುರಿತಂತೆ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅಣ್ಣಾಮಲೈ, "ಸಿಟಿಜನ್ಸ್ ಫಾರ್ ಸೋಷಿಯಲ್ ಜಸ್ಟಿಸ್ ಕೂಡ ತುರ್ತು ಪರಿಸ್ಥಿತಿಯಲ್ಲಿ ತೊಂದರೆಗೆ ಸಿಲುಕಿದ ನಾಗರಿಕರನ್ನು ಒಟ್ಟುಗೂಡಿಸಿ ಆ ಕರಾಳ ದಿನವನ್ನು ನೆನಪಿಸುವ ಕಾರ್ಯ ಮಾಡುತ್ತಿದೆ" ಎಂದು ವಿವರಿಸಿದರು.

ಮುಂದುವರೆದು, "ನೆಹರೂ ಅವರ ಸಂಪುಟದಿಂದ ಡಾ.ಅಂಬೇಡ್ಕರ್​​​​ ಅವರು ರಾಜೀನಾಮೆ ಕೊಟ್ಟದ್ದು ಯಾಕೆ? ಅವರ ರಾಜೀನಾಮೆ ಪತ್ರವನ್ನು ನಾವೆಲ್ಲರೂ ಓದಬೇಕು. ಇವತ್ತು ಕಾಂಗ್ರೆಸ್​​​​ನವರು ತಾವೆಲ್ಲ ಬಡವರ ಪರ, ಪರಿಶಿಷ್ಟ ಜಾತಿಯ ಪರ ಎನ್ನುತ್ತಾರೆ. ಅಂಬೇಡ್ಕರ್​ ಅವರ ರಾಜೀನಾಮೆ ಪತ್ರ ಓದಿದವರು ಕಾಂಗ್ರೆಸ್ಸಿನವರಿಗೆ ಜೀವಮಾನದಾದ್ಯಂತ ಕ್ಷಮೆ ಕೊಡಲು ಸಾಧ್ಯವಿಲ್ಲ. ಡಾ.ಅಂಬೇಡ್ಕರವರ ನೆನಪುಗಳೂ ನಮ್ಮ ಜೊತೆಗಿವೆ. ಕರ್ನಾಟಕದ ಜನರು ನರೇಂದ್ರ ಮೋದಿ ಅವರಿಗೆ ಬೆಂಬಲ ಕೊಡುವವರು" ಎಂದು ಮೆಚ್ಚುಗೆ ಸೂಚಿಸಿದರು.

“ತುರ್ತು ಪರಿಸ್ಥಿತಿ ಸಂವಿಧಾನಕ್ಕೆ ಮಾಡಿದ ಅಪಚಾರ” ಕುರಿತಂತೆ ಸಂವಾದ ಕಾರ್ಯಕ್ರಮ (ETV Bharat)

ಅಲ್ಲದೇ, "ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಬಂಧನಕ್ಕೆ ಒಳಗಾದವರಿಗೆ ಯಾವಾಗ ಹೊರಗೆ ಬರುತ್ತೇವೆ ಎಂಬುದು ಗೊತ್ತಿರಲಿಲ್ಲ. 21 ತಿಂಗಳಲ್ಲಿ ತುರ್ತು ಪರಿಸ್ಥಿತಿ ಮುಗಿಯಿತು. ಆದರೆ, ಅದು 21 ವರ್ಷ ಇರಬಹುದೇ ಅಥವಾ 50 ವರ್ಷ ಇದ್ದೀತೆ ಎಂಬ ಸ್ಪಷ್ಟತೆ ಆಗ ಜೈಲಿನಲ್ಲಿ ಇದ್ದವರಿಗೆ ಮತ್ತು ಹೊರಗಿದ್ದ ನಾಗರಿಕರಿಗೆ ಇರಲಿಲ್ಲ. ನಾನು ತುರ್ತು ಪರಿಸ್ಥಿತಿಯ ಬಗ್ಗೆ ಓದಿ ತಿಳಿದುಕೊಂಡಿದ್ದೇನೆ. 1959ರಲ್ಲಿ ಇಂದಿರಾ ಗಾಂಧಿಯವರು ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾದ ಬಳಿಕ ಕೇರಳಕ್ಕೆ ತೆರಳಿದ್ದರು. ವಾಪಸ್​ ಆದ ಅವರು, ಅಲ್ಲಿನ ಕಮ್ಯುನಿಸ್ಟ್ ಸರಕಾರವನ್ನು ವಜಾ ಮಾಡುವಂತೆ ನೆಹರೂ ಅವರ ಮೇಲೆ ಒತ್ತಡ ಹೇರಿದ್ದರು. ಇಂದಿರಾ ಗಾಂಧಿಯವರ ಕೋರಿಕೆ ಮೇರೆಗೆ ಆಗ ಸರಕಾರವನ್ನು ವಜಾ ಮಾಡಲಾಗಿತ್ತು. ಕೇಂದ್ರ ಸರಕಾರವು ಯಾವುದೇ ರಾಜ್ಯ ಸರಕಾರವನ್ನು ವಜಾ ಮಾಡುವ ಹಕ್ಕನ್ನು ಹೊಂದಿದೆ ಎಂಬ ಪರಿಸ್ಥಿತಿ ಆಗ ಇತ್ತು".

"1966ರಲ್ಲಿ ಇಂದಿರಾ ಗಾಂಧಿಯವರು ಪ್ರಧಾನಿಯಾದ ಬಳಿಕ 6-6-1966ರಲ್ಲಿ ರೂಪಾಯಿ ಡೀವ್ಯಾಲ್ಯುವೇಶನ್ ಮಾಡಿದ್ದರು. 1967ರಲ್ಲಿ ಉಪ ಪ್ರಧಾನಿ ಮೊರಾರ್ಜಿ ದೇಸಾಯಿಯವರು ಅದನ್ನು ಖಂಡಿಸಿದ್ದರು. 1969ರಲ್ಲಿ ಅವರು 14 ಖಾಸಗಿ ಬ್ಯಾಂಕ್‍ಗಳ ರಾಷ್ಟ್ರೀಕರಣ ಮಾಡಿದ್ದರು. ಖಾಸಗಿ ಬ್ಯಾಂಕ್‍ಗಳು ಬಡವರಿಗೆ ಸಾಲ ಕೊಡುವುದಿಲ್ಲ ಎಂಬ ಕಾರಣ ನೀಡಿದ್ದರು. ಇಂದಿರಾ ಗಾಂಧಿಯವರ ಅವಧಿಯಲ್ಲಿ ನಾವು ಋಣಾತ್ಮಕ ಬೆಳವಣಿಗೆಯನ್ನು ದೇಶದಲ್ಲಿ ಕಾಣುವಂತಾಯಿತು, ಇವೆಲ್ಲವೂ ತುರ್ತು ಪರಿಸ್ಥಿತಿ ಹೇರಿಕೆಗೆ ಕಾರಣವಾಗಿತ್ತು ಕೋರ್ಟ್ ತೀರ್ಪನ್ನು ಕಡೆಗಣಿಸಿ ತುರ್ತು ಪರಿಸ್ಥಿತಿಯನ್ನು ಮಧ್ಯರಾತ್ರಿ ಹೇರಿದ್ದು, ಅದೇರಾತ್ರಿ ಪತ್ರಿಕೆಗಳು ಹೊರಬರದಂತೆ ನಿಯಂತ್ರಿಸಿದ್ದರು"

"ಕಾಂಗ್ರೆಸ್ಸಿಗರು ಮತ್ತು ಎಡಪಂಥೀಯರು ತುರ್ತು ಪರಿಸ್ಥಿತಿ ಕುರಿತು ಧನಾತ್ಮಕ ಕಥೆಯನ್ನೇ ಹೆಣೆಯುತ್ತ ಬಂದಿದ್ದರು. ಸಂಜಯ್​ ಗಾಂಧಿ ಆಗ ಸೂಪರ್​ ಪ್ರಧಾನಿ ಆಗಿದ್ದರು, 25ನೇ ಜೂನ್​​​ 1975 ರಂದು ತುರ್ತು ಪರಿಸ್ಥಿತಿ ಹೇರಿದ್ದ ಹಿನ್ನೆಲೆಯಲ್ಲಿ ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ದೇಶಾದ್ಯಂತ ಬ್ಲ್ಯಾಕ್​ ಡೇ (ಕರಾಳ ದಿನ) ಆಚರಿಸಲಾಗುತ್ತಿದೆ. ಎಲ್ಲ ಕಡೆ ಇಂಥ ವಿಚಾರಗೋಷ್ಠಿ, ಸಂವಾದ ನಡೆಯುತ್ತಿದೆ. ಇದು ಕೇವಲ ಕರಾಳ ದಿನವಲ್ಲ; ಹೀಗೆ ಮುಂದೆ ಆಗಬಾರದೆಂದು ಜಾಗೃತಿ ಮೂಡಿಸುವ ದಿನ ಕೂಡ".

"1975ರಿಂದ 21 ತಿಂಗಳ ಕಾಲ ದೇಶದ ಮೇಲೆ ಹೇರಿದ್ದ ತುರ್ತು ಪರಿಸ್ಥಿತಿ ದಿನಗಳು ಮತ್ತೆ ಬರಬಾರದೆಂಬ ದೃಷ್ಟಿಯಿಂದ ಜನಜಾಗೃತಿ ಕಾರ್ಯ ನಡೆಯುತ್ತಿದೆ. ಈ ಕಾರ್ಯಕ್ರಮದ ಆಯೋಜಕರಿಗೆ ಅಭಿನಂದನೆಗಳು, ಈ ಸಭಾಂಗಣ ಭರ್ತಿಯಾಗಿ ಜನರು ಹೊರಗಡೆಯೂ ನಿಂತಿದ್ದಾರೆ. ಇದಕ್ಕಾಗಿ ಅಭಿನಂದನೆಗಳು. ಏನೇ ಒತ್ತಡವಿದ್ದರೂ ಸಮರ್ಥ ಸಂವಿಧಾನವನ್ನು ಬಾಬಾ ಸಾಹೇಬ ಡಾ.ಅಂಬೇಡ್ಕರ್ ಅವರು ನಮಗೆ ನೀಡಿದ್ದಾರೆ. ಅವರೊಬ್ಬ ಮಹಾನ್ ವ್ಯಕ್ತಿ. ಅವರಿಗೆ ನಾವೆಲ್ಲರೂ ಅಭಾರಿಗಳು. ಆದರೆ, ಅಂಬೇಡ್ಕರ್​ ಅವರನ್ನು ಕಾಂಗ್ರೆಸ್ ಪಕ್ಷ ಕೆಟ್ಟದ್ದಾಗಿ ನಡೆಸಿಕೊಂಡಿತ್ತು ಎಂದು ಅಣ್ಣಾಮಲೈ ಆರೋಪಿಸಿದರು.

ರಾಜಕೀಯ ಚಿಂತಕ ಹಾಗೂ ಹಿರಿಯ ಪತ್ರಕರ್ತ ರವೀಂದ್ರ ರೇಷ್ಮೆ, ತುರ್ತು ಪರಿಸ್ಥಿತಿಯ ಹೋರಾಟಗಾರರಾದ ಗಾಯತ್ರಿ ಚ.ಸು. ಹನುಮಂತ ರಾವ್, ದಲಿತ ಸಮುದಾಯದ ಮುಖಂಡ ಪಟಾಪಟ್ ಶ್ರೀನಿವಾಸ್, ಉಪಸ್ಥಿತರಿದ್ದರು.

ಇದನ್ನೂ ಓದಿ:'ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿದ್ದಕ್ಕೆ ರಾಹುಲ್ ಗಾಂಧಿ ಕ್ಷಮೆ ಕೇಳಲಿ': ಹಳೆ ಸೆಂಟ್ರಲ್​ ಜೈಲಿ​ನಲ್ಲಿ ಬಿಜೆಪಿ ಪ್ರತಿಭಟನೆ - BJP Protest In Old Central Jail

ABOUT THE AUTHOR

...view details