ಅನಂತವಾಡಿ ಗ್ರಾಮಸ್ಥರ ಎಚ್ಚರಿಕೆ ಕಾರವಾರ:ರೈಲ್ವೆ ಮೇಲ್ಸೇತುವೆ ನಿರ್ಮಿಸಿ ಕೊಡದೇ ಇದ್ದರೆ ಲೋಕಸಭಾ ಚುನಾವಣೆಯಲ್ಲಿ ಮತದಾನ ಬಹಿಷ್ಕಾರ ಮಾಡುವುದಾಗಿ ಹೊನ್ನಾವರದ ಅನಂತವಾಡಿ ಗ್ರಾಮಸ್ಥರು ಎಚ್ಚರಿಸಿದ್ದಾರೆ.
ಅನಂತವಾಡಿ ಗ್ರಾಮ ಪಂಚಾಯಿತಿಯಲ್ಲಿ ಕೊಂಕಣ ರೈಲ್ವೆ ಹಳಿ ಹಾದು ಹೋಗಿದೆ. ಪರಿಣಾಮವಾಗಿ, ಕೋಟ, ತುಂಬೆಬೀಳು ಹಾಗೂ ಇತರೆ ಗ್ರಾಮಗಳನ್ನು ಸಂಪರ್ಕಿಸುವ ಮುಖ್ಯ ರಸ್ತೆಯಲ್ಲಿನ ರೈಲ್ವೆ ಗೇಟ್ ಯಾವಾಗಲೂ ಮುಚ್ಚಿರುತ್ತದೆ. ಇದರಿಂದ ಶಾಲೆಗೆ ತೆರಳುವ ಮಕ್ಕಳಿಗೆ ಸೇರಿದಂತೆ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಈ ಹಿನ್ನೆಲೆ ಲೋಕಸಭೆ ಚುನಾವಣೆಗೂ ಮುನ್ನ ರೈಲ್ವೆ ಮೇಲ್ಸೇತುವೆ ನಿರ್ಮಿಸಲು ಕ್ರಮ ಕೈಗೊಳ್ಳದೆ ಇದ್ದರೆ ಚುನಾವಣೆಯನ್ನು ಬಹಿಷ್ಕಾರ ಮಾಡುವುದಾಗಿ ರೈಲ್ವೆ ಮೇಲ್ಸೇತುವೆ ಹೋರಾಟ ಸಮಿತಿಯ ಸದಸ್ಯರು ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.
ರೈಲ್ವೆ ಮೇಲ್ಸೇತುವೆ ಹೋರಾಟ ಸಮಿತಿ ಅಧ್ಯಕ್ಷ ಗಜಾನನ ನಾಯ್ಕ ಮಾತನಾಡಿ, ಇಲ್ಲಿ ರೈಲ್ವೆ ಮೇಲ್ಸೇತುವೆಯನ್ನು ನಿರ್ಮಿಸುವಂತೆ ಒತ್ತಾಯಿಸಿ ಅಧಿಕಾರಿಗಳಿಗೆ ಹಾಗೂ ಕೊಂಕಣ ರೈಲ್ವೆ ಮುಖ್ಯ ಕಚೇರಿಗೆ ಕಳೆದ 5 ವರ್ಷದಿಂದ ನಿರಂತರವಾಗಿ ಮನವಿ ಸಲ್ಲಿಸುತ್ತಿದ್ದೇವೆ. ಜತೆಗೆ ಪ್ರಧಾನಮಂತ್ರಿ ಕಚೇರಿಗೂ ಪತ್ರ ಬರೆಯಲಾಗಿದೆ. ಆದರೆ ಸೂಕ್ತ ಉತ್ತರ ಬಂದಿಲ್ಲ. ಸಂಸದರಿಗೂ ಮೂರು ಬಾರಿ ಮನವಿ ನೀಡಿದ್ದು, ಇದಕ್ಕೆ ಯಾವುದೇ ಸ್ಪಂದನೆ ನೀಡಿಲ್ಲ. ಆದರೆ 2019 ರಲ್ಲಿ ಕೊಂಕಣ ರೈಲ್ವೆ ಕಚೇರಿಯಿಂದ ಉತ್ತರ ಬಂದಿದೆ. ಇದರಲ್ಲಿ ಸೇತುವೆ ನಿರ್ಮಾಣಕ್ಕೆ ರಾಜ್ಯ ಸರ್ಕಾರವು ಶೇ.50 ರಷ್ಟು ಹಣ ನೀಡಬೇಕು ಎಂದು ತಿಳಿಸಿದ್ದರೂ ಸರ್ಕಾರ ಈ ಬಗ್ಗೆ ಕ್ರಮ ಕೈಗೊಂಡಿಲ್ಲ. ಹೀಗಾಗಿ ಈ ಲೋಕಸಭೆ ಚುನಾವಣೆ ಮಾತ್ರವಲ್ಲದೇ ಮೇಲ್ಸೇತುವೆ ನಿರ್ಮಾಣವಾಗುವವರೆಗೂ ಯಾವುದೇ ಚುನಾವಣೆಗಳಲ್ಲಿ ಮತದಾನ ಮಾಡುವುದಿಲ್ಲ ಎಂದು ಆಕ್ರೋಶ ಹೊರಹಾಕಿದರು.
ಗ್ರಾಮಸ್ಥೆ ನಾಗಮ್ಮ ನಾಯ್ಕ ಎಂಬುವರು ಮಾತನಾಡಿ, ಮೇಲ್ಸೇತುವೆ ಇಲ್ಲದಿರುವುದರಿಂದ ಕಳೆದ 30 ವರ್ಷದಿಂದ ತೊಂದರೆ ಅನುಭವಿಸುತ್ತಿದ್ದೇವೆ. ಗೇಟ್ ಹಾಕಿದ 10 ನಿಮಿಷದಲ್ಲಿ ನೂರಾರು ವಾಹನಗಳು ಬಂದು ನಿಲ್ಲುತ್ತವೆ. ನಂತರ ಅಕ್ಕಪಕ್ಕದ ರೈಲ್ವೆ ನಿಲ್ದಾಣಗಳಿಗೆ ಸಂಪರ್ಕಿಸಿ 45 ನಿಮಿಷದ ಬಳಿಕ ಗೇಟ್ ತೆಗೆಯಲಾಗುತ್ತದೆ. ಹೀಗಾಗಿ ತುರ್ತು ಪರಿಸ್ಥಿತಿಯಲ್ಲಿ ಕೆಲವರು ಪ್ರಾಣ ಕಳೆದುಕೊಂಡಿರುವ ಉದಾಹರಣೆಗಳಿವೆ. ಈ ಗ್ರಾಮಗಳಲ್ಲಿ ನಾಲ್ಕು ಸಾವಿರಕ್ಕೂ ಹೆಚ್ಚು ಮತದಾರರಿದ್ದು, ಈ ಬಾರಿಯ ಲೋಕಸಭಾ ಚುನಾವಣೆಯನ್ನು ಬಹಿಷ್ಕಾರ ಮಾಡಲಿದ್ದೇವೆ. ನಮ್ಮ ಬೇಡಿಕೆಗೆ ಸ್ಪಂದಿಸದಿದ್ದರೆ ಮುಂದಿನ ದಿನಗಳಲ್ಲಿ ರೈಲ್ವೆ ಹಳಿಯ ಮೇಲೆ ಕೂತು ಪ್ರತಿಭಟನೆ ಮಾಡಲಿದ್ದೇವೆ. ಈ ಸಮಸ್ಯೆಯಿಂದಾಗಿ ಊರಿಗೆ ಸಾರಿಗೆ ಬಸ್ ಕೂಡ ಬರುವುದಿಲ್ಲ. ಬಸ್ಸಿಗಾಗಿ ನಾಲ್ಕು ಕಿ.ಮೀ ನಡೆಯಬೇಕಾಗುತ್ತದೆ. ಇದರಿಂದ ಶಾಲೆಯ ಮಕ್ಕಳು ಹಾಗೂ ಅನಾರೋಗ್ಯ ಪೀಡಿತರಿಗೆ ತೊಂದರೆಯಾಗುತ್ತದೆ ಎಂದು ಅಳಲು ತೋಡಿಕೊಂಡರು.
ಇದನ್ನೂ ಓದಿ:ಏ.2ರಿಂದ ನಿರ್ಮಾಣ ಹಂತದ ಕಟ್ಟಡಗಳಿಗೆ ಸಂಸ್ಕರಿಸಿದ ನೀರು ಪೂರೈಕೆ: ರಾಮ್ ಪ್ರಸಾತ್ ಮನೋಹರ್ - TREATED WATER SUPPLY