ಬೆಂಗಳೂರು:ರಾಜ್ಯ ಬಿಜೆಪಿ ಲೋಕಸಭಾ ಕ್ಷೇತ್ರಗಳ ಅಸಮಾಧಾನಿತ ನಾಯಕರ ಜತೆ ಹಿರಿಯ ನಾಯಕ ಬಿ.ಎಸ್.ಯಡಿಯೂರಪ್ಪ ಸಂಧಾನ ಸಭೆ ನಡೆಸಿದ್ದರೂ ಪರಿಸ್ಥಿತಿ ಹತೋಟಿಯಲ್ಲಿಡಲು ಸಾಧ್ಯವಾಗಿಲ್ಲ. ಹೀಗಾಗಿ ಕೇಂದ್ರ ಸಚಿವ ಅಮಿತ್ ಶಾ ಅತೃಪ್ತ ನಾಯಕರೊಂದಿಗೆ ಇಂದು ಸಭೆ ನಡೆಸಿದ್ದಾರೆ.
ಚಿಕ್ಕಬಳ್ಳಾಪುರ, ತುಮಕೂರು, ಚಿತ್ರದುರ್ಗ, ದಾವಣಗೆರೆ ಲೋಕಸಭಾ ಕ್ಷೇತ್ರಗಳ ನಾಯಕರೊಂದಿಗೆ ಅಮಿತ್ ಶಾ ಮಾತುಕತೆ ಮಾಡಿದರು. ಅಸಮಾಧಾನಿತರ ಅಭಿಪ್ರಾಯ ಆಲಿಸಿ ನರೇಂದ್ರ ಮೋದಿ ಅವರಿಗಾಗಿ ಕೈಜೋಡಿಸಬೇಕು. ಅಸಮಾಧಾನ ಬಿಟ್ಟು ಅಭ್ಯರ್ಥಿಗಳನ್ನು ಗೆಲ್ಲಿಸುವ ಕಡೆ ಗಮನ ಹರಿಸಬೇಕು ಎಂದು ಮನವಿ ಮಾಡಿದರು.
ನಗರದ ರೇಸ್ ಕೋರ್ಸ್ ರಸ್ತೆಯಲ್ಲಿರುವ ತಾಜ್ ವೆಸ್ಟ್ ಎಂಡ್ ಹೋಟೆಲ್ನಲ್ಲಿ ನಡೆದ ಈ ಸಭೆಯಲ್ಲಿ ಬಿ.ಎಸ್.ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಪ್ರತಿಪಕ್ಷ ನಾಯಕ ಆರ್.ಅಶೋಕ್, ತುಮಕೂರು ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣ, ಎಂಟಿಬಿ ನಾಗರಾಜ್, ಸಂಸದ ಬಸವರಾಜ್, ಎಂ.ಪಿ.ರೇಣುಕಾಚಾರ್ಯ, ಕರುಣಾಕರ್ ರೆಡ್ಡಿ ಸೇರಿ ಹಲವು ನಾಯಕರು ಭಾಗಿಯಾಗಿದ್ದರು.
ಸಭೆಯಲ್ಲಿ ವೇದಿಕೆ ಮೇಲೆ ಕೂರದೇ ಮುಖಂಡರ ಜತೆ ಕೆಳಗಡೆಯಲ್ಲೇ ಕುಳಿತುಕೊಂಡ ಅಮಿತ್ ಶಾ ಕ್ಷೇತ್ರವಾರು ನಾಯಕರ ಅಭಿಪ್ರಾಯ ಆಲಿಸಿದರು. ಚಿಕ್ಕಬಳ್ಳಾಪುರ ಕ್ಷೇತ್ರದ ವಿಚಾರದಲ್ಲಿ ಎಸ್.ಆರ್.ವಿಶ್ವನಾಥ್ ಅಸಮಾಧಾನದ ಸಮಾಲೋಚನೆ ನಡೆಸಲಾಯಿತು. ನಂತರ ತುಮಕೂರು ಕ್ಷೇತ್ರದ ಚರ್ಚೆ ನಡೆಯಿತು. ಅಭ್ಯರ್ಥಿ ಸೋಮಣ್ಣ ಸಮ್ಮುಖದಲ್ಲಿ ಹಾಲಿ ಸಂಸದ ಬಸವರಾಜ್ ಕರೆಸಿ ಮಾತುಕತೆ ನಡೆಸಲಾಯಿತು. ಅಭ್ಯರ್ಥಿ ಪರ ಕೆಲಸ ಮಾಡುವಂತೆ ಸೂಚಿಸಲಾಯಿತು. ಮಾಧುಸ್ವಾಮಿ ಅಸಮಾಧಾನ ಕುರಿತು ಪ್ರಸ್ತಾಪವಾದರೂ ಅದನ್ನು ನಿರ್ವಹಿಸುವ ಜವಾಬ್ದಾರಿ ಯಡಿಯೂರಪ್ಪನವರಿಗೆ ನೀಡಿ ಜಿಲ್ಲೆಯ ಗೊಂದಲ ಸರಿಪಡಿಸಲಾಯಿತು.
ನಂತರ ಚಿತ್ರದುರ್ಗದ ಗೊಂದಲ ಕುರಿತು ಚರ್ಚಿಸಲಾಯಿತು. ಅಭ್ಯರ್ಥಿ ಸ್ಥಳೀಯ ಅಲ್ಲ ಎನ್ನುವ ಅಸಮಾಧಾನ ಕುರಿತು ಮುಖಂಡರಿಗೆ ತಿಳಿ ಹೇಳಲಾಯಿತು. ಅಭ್ಯರ್ಥಿ ನಮ್ಮ ಪಕ್ಷದವರು ಎಂದ ಮೇಲೆ ಕೆಲಸ ಮಾಡಬೇಕು ಎನ್ನುವ ಸೂಚನೆಯನ್ನು ಶಾ ನೀಡಿದರು. ನಂತರ ದಾವಣಗೆರೆ ವಿಚಾರದಲ್ಲಿಯೂ ಅಸಮಾಧಾನಿತ ನಾಯಕ ಎಂ.ಪಿ.ರೇಣುಕಾಚಾರ್ಯ, ಕರುಣಾಕರ ರೆಡ್ಡಿ ತಮ್ಮ ತಮ್ಮ ಅಸಮಾಧಾನ ವ್ಯಕ್ತಪಡಿಸಿ ಮಾತುಕತೆ ನಡೆಸಿದರು. ಅವರಿಗೂ ಅಭ್ಯರ್ಥಿ ಗೆಲ್ಲಿಸಬೇಕು ಎನ್ನುವ ಸೂಚನೆಯನ್ನೇ ನೀಡಲಾಯಿತು.
ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಎಂಟಿಬಿ ನಾಗರಾಜ್, ಅಮಿತ್ ಶಾ ಎಲ್ಲರೂ ಒಟ್ಟಾಗಿ ಕೆಲಸ ಮಾಡುವಂತೆ ಸೂಚಿಸಿದ್ದಾರೆ. ಕೋಲ್ಡ್ ವಾರ್ ಎಲ್ಲವೂ ಮುಗಿದಿದೆ. ಯಲಹಂಕ ವಿಶ್ವನಾಥ್ ಕೂಡ ಬಂದಿದ್ದರು. ಚಿಕ್ಕಬಳ್ಳಾಪುರ ಅಭ್ಯರ್ಥಿ ಸುಧಾಕರ್ ಗೆಲ್ಲಿಸಿ ಅಂತ ಸೂಚಿಸಿದ್ದಾರೆ. ನಾವೆಲ್ಲಾ ಸುಧಾಕರ್ ಪರ ಕೆಲಸ ಮಾಡುತ್ತೇವೆ ಎಂದರು.
ಚಿತ್ರದುರ್ಗದ ಪರವಾಗಿ ಹಾಜರಿದ್ದ ಜಿ.ಹೆಚ್.ತಿಪ್ಪಾರೆಡ್ಡಿ ಮಾತನಾಡಿ, ನಮ್ಮಲ್ಲಿ ಯಾವುದೇ ಗೊಂದಲ ಇಲ್ಲ. ಯಾವ ಎಲ್ಲ ಕ್ಷೇತ್ರಗಳಲ್ಲಿ ಗೊಂದಲ ಇದೆ ಅಂತ ಅಮಿತ್ ಶಾ ಕೇಳಿದರು. ಎಲ್ಲೂ ಗೊಂದಲ ಇಲ್ಲ, ಬಗೆಹರಿದಿದೆ ಅಂದೆವು, ಬೂತ್ ಮಟ್ಟದಿಂದ ಕೆಲಸ ಮಾಡಿ ಮತಗಳಿಕೆ ಜಾಸ್ತಿ ಮಾಡಲು ಸೂಚಿಸಿದ್ದಾರೆ. ನಾಡಿದ್ದು ಗೋವಿಂದ ಕಾರಜೋಳ ನಾಮಪತ್ರ ಸಲ್ಲಿಸುತ್ತಾರೆ. ನಾವೆಲ್ಲರೂ ಇರುತ್ತೇವೆ. ನಮ್ಮ ಜಿಲ್ಲೆಯಲ್ಲಿ ಗೊಂದಲ ಇಲ್ಲ ಎಂದು ಹೇಳಿದರು.
ಸೋಮಣ್ಣ ಮಾತನಾಡಿ, ಅಮಿತ್ ಶಾ ಅವರು ಚುನಾವಣೆ ಮಾಡುವಾಗ ಆದ್ಯತೆ ಏನು.? ಪೇಜ್ ಪ್ರಮುಖ್ ಏನು ಮಾಡಬೇಕು ಅಂತಿದೆ ಎಂದು ಕೇಳಿ ಮಾಹಿತಿ ಪಡೆದುಕೊಂಡರು. ಇದರ ಜೊತೆ ಕ್ಷೇತ್ರ ಹೇಗಿದೆ ಅಂತ ಕೇಳಿದರು. ಚೆನಾಗಿದೆ ಸರ್ ಅಂದೆ. ಅಮಿತ್ ಶಾ ನಮ್ಮ ಪರಮೋಚ್ಛ ನಾಯಕರು ಒಂದಷ್ಟು ಸೂಚನೆ ಅಮಿತ್ ಶಾ ಕೊಟ್ಟಿದ್ದಾರೆ.
ಮಾಧುಸ್ವಾಮಿ ಅಸಮಾಧಾನ ವಿಚಾರಕ್ಕೆ, ಬಿಡ್ರಯ್ಯಾ ಏನು ಮಾಧುಸ್ವಾಮಿ ಮಾಧುಸ್ವಾಮಿ. ಮಾದಪ್ಪಾನೆ ನಮ್ಮ ಜತೆಯಲ್ಲಿ ಇದ್ದಾನೆ. ಒಬ್ಬ ಮಾಧುಸ್ವಾಮಿ ಮುನಿಸಿಕೊಂಡಿದ್ದಾರೆ. ಅವರೂ ಮುಂದೊಂದು ದಿನ ಬರ್ತಾರೆ. ನಾಳೆ ಮಧ್ಯಾಹ್ನ 1.30ಕ್ಕೆ ನಾಮಪತ್ರ ಸಲ್ಲಿಸುತ್ತೇನೆ. ಯಡಿಯೂರಪ್ಪ, ಕುಮಾರಸ್ವಾಮಿ, ಅಶೋಕ್ ಬರುತ್ತಾರೆ ಎಂದರು.
ಚಿತ್ರದುರ್ಗ ಅಭ್ಯರ್ಥಿ ಗೋವಿಂದ ಕಾರಜೋಳ ಮಾತನಾಡಿ, 2024ರ ಚುನಾವಣೆ ದೇಶಕ್ಕಾಗಿ ನರೇಂದ್ರ ಮೋದಿ ಅನ್ನುವ ಭಾವನೆ 140 ಕೋಟಿ ಜನರಲ್ಲಿದೆ. ಕರ್ನಾಟಕದಲ್ಲಿ ಎರಡು ದೈತ್ಯ ಶಕ್ತಿಗಳು ಒಂದಾಗಿವೆ. ದೇವೇಗೌಡರು, ಯಡಿಯೂರಪ್ಪ ಅವರ ಶಕ್ತಿ ಒಂದಾಗಿದೆ. ದೇಶಕ್ಕಾಗಿ ಮೋದಿ, ಅಭಿವೃದ್ಧಿಗಾಗಿ ಮೋದಿ ಅನ್ನುವುದು. ಕಳಂಕ ರಹಿತ ಆಡಳಿತ ಅನ್ನೋದು ಜನರಿಗೆ ಮೆಚ್ಚುಗೆ ತರಿಸಿದೆ. ಮೋದಿ ಮತ್ತು ರಾಹುಲ್ ಗಾಂಧಿ ಅಂತ ಆಯ್ಕೆ ಬಂದಾಗ ಹುಚ್ಚರೂ ಕೂಡ ರಾಹುಲ್ ಗಾಂಧಿ ಆಯ್ಕೆ ಮಾಡಲ್ಲ ಎಂದು ವ್ಯಂಗ್ಯವಾಡಿದರು.
ದಾವಣಗೆರೆ ಕ್ಷೇತ್ರದ ಪರವಾಗಿ ಹಾಜರಿದ್ದ ಮಾಜಿ ಶಾಸಕ ಎಂ.ಪಿ.ರೇಣುಕಾಚಾರ್ಯ ಮಾತನಾಡಿ, ರಾಜ್ಯದಲ್ಲಿ 28 ಸಂಸದರೂ ಆಯ್ಕೆ ಆಗಬೇಕು ಎಂದು ನಮ್ಮ ನಾಯಕ ಅಮಿತ್ ಶಾ ನಮಗೆ ಸಲಹೆ ಸೂಚನೆ ಕೊಟ್ಟಿದ್ದಾರೆ. ನಮಗೆ ಅಭ್ಯರ್ಥಿ ಮುಖ್ಯವಲ್ಲ, ನರೇಂದ್ರ ಮೋದಿ ಪ್ರಧಾನಿ ಆಗಬೇಕು. ಯಡಿಯೂರಪ್ಪ, ವಿಜಯೇಂದ್ರ ಕೈ ಬಲಪಡಿಸಬೇಕು. ನಾವೆಲ್ಲರೂ ಒಟ್ಟಾಗಿ ಇದ್ದೇವೆ. ಅಮಿತ್ ಶಾ, ಯಡಿಯೂರಪ್ಪ, ವಿಜಯೇಂದ್ರ ಸಲಹೆ ಸೂಚನೆಯಿಂದ ದಾವಣಗೆರೆ ಬಿಜೆಪಿ ಅಭ್ಯರ್ಥಿ ಗೆಲ್ಲಿಸುತ್ತೇವೆ. ದಾವಣಗೆರೆ ಅಭ್ಯರ್ಥಿ ನೆಪ ಮಾತ್ರ, ಕಮಲ ಚಿಹ್ನೆ, ಬಿಜೆಪಿ ಅಭ್ಯರ್ಥಿಯನ್ನು ನಾವು ಗೆಲ್ಲಿಸುತ್ತೇವೆ ಎಂದು ತಮ್ಮಲ್ಲಿನ ಅಸಮಾಧಾನ ಇನ್ನೂ ಇದೆ ಎನ್ನುವುದನ್ನು ಪರೋಕ್ಷವಾಗಿ ವ್ಯಕ್ತಪಡಿಸಿದರು.
ಇದನ್ನೂ ಓದಿ :ಪ್ರಹ್ಲಾದ್ ಜೋಶಿ ವಿರುದ್ಧ ಸ್ಪರ್ಧಿಸಲು ಸಭೆಯಲ್ಲಿ ನಿರ್ಣಯ: ದಿಂಗಾಲೇಶ್ವರ ಸ್ವಾಮೀಜಿ - Dingaleshwar Swamiji