ಬೆಂಗಳೂರು: ಪಾಕಿಸ್ತಾನ ಪರ ಘೋಷಣೆ ಕೂಗಿದ ಆರೋಪದ ಹಿನ್ನೆಲೆಯಲ್ಲಿ ಬೆಂಗಳೂರು, ಮಂಗಳೂರು, ಹುಬ್ಬಳ್ಳಿ, ದಾವಣಗೆರೆ, ಚಾಮರಾಜನಗರ, ತುಮಕೂರು, ಬಳ್ಳಾರಿ ಮತ್ತು ಕೋಲಾರ ಜಿಲ್ಲೆಗಳಲ್ಲಿ ಇಂದು ಬಿಜೆಪಿ ಕಾರ್ಯಕರ್ತರು ಬೀದಿಗಿಳಿದು ಪ್ರತಿಭಟನೆ ನಡೆಸಿದರು. ಕೆಲವೆಡೆ ಹಲವು ಬಿಜೆಪಿ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದರು.
ಮಂಗಳೂರು-ಕಾಂಗ್ರೆಸ್ ಕಚೇರಿಗೆ ಮುತ್ತಿಗೆ ಯತ್ನ:ಮಲ್ಲಿಕಟ್ಟೆಯಲ್ಲಿರುವ ದ.ಕ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ನೂರಕ್ಕೂ ಹೆಚ್ಚು ಬಿಜೆಪಿ ಕಾರ್ಯಕರ್ತರು ಮುತ್ತಿಗೆ ಹಾಕಲು ಯತ್ನಿಸಿದರು. ಮುತ್ತಿಗೆ ಹಾಕುವ ಸುಳಿವು ಅರಿತ ಪೊಲೀಸರು ಕಚೇರಿಗೆ ಬಿಗಿ ಭದ್ರತೆ ಒದಗಿಸಿ, ಕಾರ್ಯಕರ್ತರನ್ನು ತಡೆದು ವಶಕ್ಕೆ ಪಡೆದರು. ಬಿಜೆಪಿಗರು ಕಾಂಗ್ರೆಸ್ ವಿರುದ್ಧ ಘೋಷಣೆಗಳನ್ನು ಕೂಗುತ್ತಿದ್ದಂತೆ ಕಚೇರಿ ಮುಂಭಾಗದಲ್ಲಿದ್ದ ಕಾಂಗ್ರೆಸ್ ಕಾರ್ಯಕರ್ತರು ಕಾಂಗ್ರೆಸ್ ಪಕ್ಷಕ್ಕೆ ಜೈಕಾರ ಹಾಕಿದರು.
ಹುಬ್ಬಳ್ಳಿಯಲ್ಲಿ ಪ್ರತಿಭಟನೆ:ಹುಬ್ಬಳ್ಳಿಯ ಸಂಗೊಳ್ಳಿ ರಾಯಣ್ಣ ಸರ್ಕಲ್ದಿಂದ ತಹಶೀಲ್ದಾರ್ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ ಬಿಜೆಪಿ ಕಾರ್ಯಕರ್ತರು ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಮೊಳಗಿಸಿ ಆಕ್ರೋಶ ವ್ಯಕ್ತಪಡಿಸಿದರು. ನಾಸಿರ್ ಹುಸೇನ್ ರಾಜೀನಾಮೆಗೆ ಒತ್ತಾಯಿಸಿದರು. "ಕಾಂಗ್ರೆಸ್ ದೇಶ ವಿರೋಧಿ ಹಾಗೂ ದೇಶದ್ರೋಹಿಗಳ ಪಕ್ಷ. ಇವರು ಅಧಿಕಾರಕ್ಕೆ ಬಂದಾಗಲೆಲ್ಲ ಇಂತಹ ಘಟನೆಗಳು ಮರುಕಳಿಸುತ್ತವೆ" ಎಂದು ಆಕ್ರೋಶ ವ್ಯಕ್ತಪಡಿಸಿದರು.
ಧಾರವಾಡ ಜಿಲ್ಲಾ ಬಿಜೆಪಿ ಜಿಲ್ಲಾಧ್ಯಕ್ಷ ತಿಪ್ಪಣ್ಣ ಮಜ್ಜಗಿ ಮಾತನಾಡಿ, "ರಾಜ್ಯಸಭಾ ಸದಸ್ಯರ ಹಿಂಬಾಲಕರು ವಿಧಾನಸೌಧದಲ್ಲಿ ಪಾಕಿಸ್ತಾನ ಪರವಾಗಿ ಘೋಷಣೆ ಕೂಗಿದ್ದು ಅಕ್ಷಮ್ಯ ಅಪರಾಧ. ಇದು ಕಾಂಗ್ರೆಸ್ ಸರ್ಕಾರದ ಅಧೋಗತಿಯನ್ನು ತೋರಿಸುತ್ತದೆ. ಕಾಂಗ್ರೆಸ್ ನಿರಂತರವಾಗಿ ಅಧಿಕಾರದಲ್ಲಿರಲು ಏನೂ ಬೇಕಾದರೂ ಮಾಡಬಹುದು ಎಂಬುದಕ್ಕೆ ನಿನ್ನೆ ನಡೆದ ಘಟನೆಯೇ ಸಾಕ್ಷಿ. ಇದನ್ನು ರಾಜ್ಯದ ಜನತೆ ಅರ್ಥಮಾಡಿಕೊಳ್ಳುತ್ತಾರೆ" ಎಂದರು. ಈ ಸಂದರ್ಭದಲ್ಲಿ ಮುಖಂಡರಾದ ರಾಜಣ್ಣ ಕೊರವಿ, ದತ್ತಮೂರ್ತಿ ಕುಲಕರ್ಣಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ದಾವಣಗೆರೆ- ಕಾಂಗ್ರೆಸ್ ಕಚೇರಿಗೆ ಮುತ್ತಿಗೆ ಯತ್ನ: ನಗರದಲ್ಲಿ ಬಿಜೆಪಿ ಯುವ ಮೋರ್ಚಾ ಪ್ರತಿಭಟನೆ ನಡೆಸಿತು. ಬಳಿಕ ನಿಜಲಿಂಗಪ್ಪ ಬಡಾವಣೆಯಲ್ಲಿರುವ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದರು. ನಿಜಲಿಂಗಪ್ಪ ಬಡಾವಣೆಯಲ್ಲಿರುವ ಅಮರ್ ಜವಾನ್ ಉದ್ಯಾನವನದಿಂದ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ನೂತನ ರಾಜ್ಯಸಭಾ ಸದಸ್ಯ ಡಾ.ನಾಸೀರ್ ಹುಸೇನ್ ಹಾಗು ಅವರ ಬೆಂಬಲಿಗರ ನಡೆಯನ್ನು ಖಂಡಿಸಿದರು.
ಬಿಜೆಪಿ ಕಾರ್ಯಕರ್ತರನ್ನು ವಶಕ್ಕೆ ಪಡೆಯುವಾಗ ಪೊಲೀಸರು ಹಾಗು ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆಯಿತು. ಹೀಗಿದ್ದರೂ ಕೆಲವು ಕಾರ್ಯಕರ್ತರು ಕಾಂಗ್ರೆಸ್ ಕಚೇರಿ ಕಡೆ ಓಡಿ ಹೋಗಿ ಮುತ್ತಿಗೆ ಹಾಕಲು ಯತ್ನಿಸಿದರು. ಅವರನ್ನು ಕೂಡ ಪೊಲೀಸರು ವಶಕ್ಕೆ ಪಡೆದರು.
ನಾಸಿರ್ ಹುಸೇನ್ ಫೋಟೋ ಸುಡಲು ಯತ್ನ: ಚಾಮರಾಜನಗರದಲ್ಲಿ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ರಸ್ತೆ ತಡೆ ನಡೆಸಿ ಆಕ್ರೋಶ ಹೊರಹಾಕಿದರು. ಇಲ್ಲಿನ ಚಾಮರಾಜೇಶ್ವರ ದೇಗುಲ ಮುಂಭಾಗದಿಂದ ಭುವನೇಶ್ವರಿ ವೃತ್ತದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ ಬಿಜೆಪಿ ಕಾರ್ಯಕರ್ತರು ರಾಷ್ಟ್ರೀಯ ಹೆದ್ದಾರಿ ತಡೆದರು. ನಾಸಿರ್ ಹುಸೇನ್ ಭಾವಚಿತ್ರಕ್ಕೆ ಬೆಂಕಿ ಹಚ್ಚಲು ಮುಂದಾದಾಗ ಮಧ್ಯಪ್ರವೇಶಿಸಿದ ಪೊಲೀಸರು ಭಾವಚಿತ್ರಗಳನ್ನು ವಶಕ್ಕೆ ಪಡೆಯಲು ಮುಂದಾದರು. ಪೊಲೀಸರ ಕ್ರಮಕ್ಕೆ ಆಕ್ರೋಶ ವ್ಯಕ್ತಪಡಿಸಿದ ಕಾರ್ಯಕರ್ತರು ಮಾತಿನ ಚಕಮಕಿ ನಡೆಸಿದರು. 20ಕ್ಕೂ ಹೆಚ್ಚು ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದರು. ಈ ವೇಳೆ, ಹೈಡ್ರಾಮವೇ ನಡೆದು ಪೊಲೀಸ್ ವಾಹನದ ಮುಂದೆ ಬಿಜೆಪಿ ಮುಖಂಡರು ಮಲಗಿ ಆಕ್ರೋಶ ವ್ಯಕ್ತಪಡಿಸಿದರು.