ಕರ್ನಾಟಕ

karnataka

ETV Bharat / state

ರಾಮನಗರ ಬಳಿ ಕೆಎಸ್​ಆರ್​ಟಿಸಿ ಬಸ್​ - ಕಾರ್​ ನಡುವೆ ಭೀಕರ ಅಪಘಾತ: ಮೂವರು ಸ್ಥಳದಲ್ಲೇ ಸಾವು - KSRTC BUS AND CAR ACCIDENT

ಬೆಂಗಳೂರಿನಿಂದ ಮೈಸೂರಿಗೆ ಹೋಗುತ್ತಿದ್ದ ಕಾರು ಡಿವೈಡರ್​ಗೆ ಗುದ್ದಿ ಎದುರಲ್ಲಿ ಮೈಸೂರಿನಿಂದ ಬೆಂಗಳೂರಿಗೆ ಹೋಗುತ್ತಿದ್ದ ಕೆಎಸ್​ಆರ್​ಟಿಸಿ ಬಸ್​ಗೆ ಗುದ್ದಿದ ಪರಿಣಾಮ ಕಾರಿನಲ್ಲಿದ್ದ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ (ETV Bharat)

By ETV Bharat Karnataka Team

Published : Nov 27, 2024, 1:02 PM IST

ರಾಮನಗರ:ಕೆಎಸ್‌ಆರ್‌ಟಿಸಿ ಬಸ್ ಮತ್ತು ಕಾರಿನ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ದಂಪತಿ ಸೇರಿ ಮೂವರು ಸಾವನ್ನಪ್ಪಿರುವ ಘಟನೆ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ಹೈವೇಯ ಸಂಘಬಸವನದೊಡ್ಡಿ ಗ್ರಾಮದ ಬಳಿ ತಡರಾತ್ರಿ ನಡೆದಿದೆ.

ಲಿಯಾಖತ್ (50), ಆಸ್ಮಾ (38), ನೂರ್ ಅಹ್ಮದ್ (48) ಮೃತರು. ಸಾವನ್ನಪ್ಪಿದವರನ್ನು ಬೆಂಗಳೂರಿನ ಶಿವಾಜಿನಗರ ನಿವಾಸಿಗಳೆಂದು ಗುರುತಿಸಲಾಗಿದೆ. ಬೆಂಗಳೂರಿನಿಂದ ಮೈಸೂರು ಕಡೆಗೆ ಹೋಗುತ್ತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ ಹಾರಿ ಬಂದು ಬೆಂಗಳೂರು ಕಡೆಗೆ ತೆರಳುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ಸಿಗೆ ಡಿಕ್ಕಿ ಹೊಡೆದಿದೆ. ಕಾರಿನಲ್ಲಿದ್ದ, ಮೂರು ಮಂದಿ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ.

ಬೆಂಗಳೂರಿನ ಶಿವಾಜಿ ನಗರ ನಿವಾಸಿಯಾಗಿರುವ ಲಿಯಾಖತ್ ಮತ್ತು ದಂಪತಿ ಮೈಸೂರಿನ ತಮ್ಮ ಮಗಳ ಮನೆಗೆ ಸ್ನೇಹಿತ ನೂರ್ ಅಹ್ಮದ್‌ನ ಕಾರಿನಲ್ಲಿ ಹೊರಟಿದ್ದರು. ನೂರ್ ಅಹ್ಮದ್ ಕಾರು ಚಾಲನೆ ಮಾಡುತ್ತಿದ್ದರು. ಈ ವೇಳೆ ಕಾರಿನ ಅತಿಯಾದ ವೇಗದಿಂದ ಸಂಘ ಬಸವನದೊಡ್ಡಿ ಸಮೀಪ ರಾತ್ರಿ ಈ ಅಪಘಾತ ಸಂಭವಿಸಿದೆ.

ಸ್ಥಳಕ್ಕೆ ರಾಮನಗರ ಸಂಚಾರ ಪೊಲೀಸರು ಆಗಮಿಸಿ ಕಾರಿನಲ್ಲಿದ್ದ ಮೃತದೇಹಗಳನ್ನು ಹೊರತೆಗೆದು ಜಿಲ್ಲಾಸ್ಪತ್ರೆಗೆ ರವಾನಿಸಿದರು. ರಾಮನಗರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಇದನ್ನೂ ಓದಿ:ಎಕ್ಸ್​ಪ್ರೆಸ್​ವೇಯಲ್ಲಿ ಭೀಕರ ರಸ್ತೆ ಅಪಘಾತ: ನಾಲ್ವರು ವೈದ್ಯರ ದುರ್ಮರಣ

ABOUT THE AUTHOR

...view details