ಮೈಸೂರು :ಮೂರ್ನಾಲ್ಕು ತಲೆಮಾರುಗಳಿಂದ ಕೃಷಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ರೈತರಿಗೆ ಅರಣ್ಯ ಇಲಾಖೆಯ ಪ್ರಕಟಣೆ ತಲೆನೋವಾಗಿ ಪರಿಣಮಿಸಿದೆ. ಇದರಿಂದಾಗಿ ರೈತನೊಬ್ಬ ಭೂಮಿ ಕಳೆದೊಗುತ್ತದೆ ಎಂಬ ಭಯದಿಂದ ತನ್ನ ಮಾವಿನ ತೋಟದಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದು, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿರುವ ಘಟನೆ ಎಚ್ಡಿ ಕೋಟೆ ತಾಲ್ಲೂಕಿನ ಕಣಿಯನ ಹುಂಡಿ ಗ್ರಾಮದಲ್ಲಿ ನಡೆದಿದೆ. ಆದ್ರೆ ಅರಣ್ಯ ಇಲಾಖೆ ಹೇಳೋದೆ ಬೇರೆ.
ಏನಿದು ಪ್ರಕರಣ:ಮೃತರನ್ನು ಕಣಿಯನಹುಂಡಿ ಗ್ರಾಮದ ರೈತ ಗಿರಿ ಗೌಡ (48) ಎಂದು ಗುರುತಿಸಲಾಗಿದೆ. ಗಿರಿ ಗೌಡ ಅವರು ತಮ್ಮ ಹಿರಿಯರಿಂದ ಬಂದ ಎರಡು ಎಕರೆ ಜಮೀನಿನಲ್ಲಿ ಬೇಸಾಯ ಮಾಡಿಕೊಂಡಿದ್ದರು. ಆ ಜಮೀನಿನಲ್ಲಿ 70 ಮಾವಿನ ಮರಗಳನ್ನು ಹಾಕಿಕೊಂಡು ಹಾಗೂ ಇತರ ಕೃಷಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಇತ್ತಿಚೆಗೆ ರಾಜ್ಯ ಸರ್ಕಾರದಿಂದ ನೇಮಕಗೊಂಡ ಅರಣ್ಯ ವ್ಯವಸ್ಥಾಪಕ ಅಧಿಕಾರಿ ಅವರು, ತಮ್ಮ ಬಳಿ ಇರುವ ದಾಖಲೆಗಳನ್ನು ನೀಡುವಂತೆ ಕಣಿಯನಹುಂಡಿಯ ಹಲವು ಸ್ಥಳಗಳಲ್ಲಿ ಪ್ರಕಟಣೆ ಅಂಟಿಸಿದ್ದರು.
ಗ್ರಾಮದಲ್ಲಿ ಪ್ರಕಟಣೆ ನೋಡಿ ಆತ್ಮಹತ್ಯೆ : ಕಣಿಯನಹುಂಡಿಯ ರೈತ ಗಿರಿ ಗೌಡ ಎರಡು ಎಕರೆ ಮಾವಿನ ತೋಟ ಹೊಂದಿದ್ದು, ಆ ತೋಟಕ್ಕೆ ಸಂಬಂಧಿಸಿದಂತೆ ಯಾವುದೇ ದಾಖಲಾತಿಗಳು ಅವರ ಬಳಿ ಇರಲಿಲ್ಲ ಎನ್ನಲಾಗ್ತಿದೆ. ಇದರಿಂದ ತಲಾತಲಾಂತರಿಂದ ಬಂದ ಬಂದ ಭೂಮಿ ಕೈ ತಪ್ಪಿ ಹೋಗುತ್ತದೆ ಎಂಬ ಭಯ ಕಾಡುತ್ತಿತ್ತು. ಇನ್ನು ಕೆಲವು ದಿನಗಳಲ್ಲಿ ಜಮೀನನ್ನು ಅರಣ್ಯ ಇಲಾಖೆಯವರು ಸ್ವಾಧೀನ ಪಡಿಸಿಕೊಳ್ಳುತ್ತಾರೆ ಎಂಬ ಭಯ ದಿನದಿಂದ ದಿನಕ್ಕೆ ಹೆಚ್ಚಾಗ ತೊಡಗಿತ್ತು. ರೈತ ಗಿರಿ ಗೌಡ ಕಳೆದ ಮಂಗಳವಾರ ತಮ್ಮ ಜಮೀನಿನಲ್ಲೇ ಆತ್ಮಹತ್ಯೆಗೆ ಯತ್ನಿಸಿದ್ದರು. ಕೂಡಲೇ ಕುಟುಂಬಸ್ಥರು ಮೈಸೂರಿನ ಕೆಆರ್ ಆಸ್ಪತ್ರೆಗೆ ದಾಖಲು ಮಾಡಿದ್ದರು. ಆದ್ರೆ ಇಂದು ಬೆಳಗ್ಗೆ ಚಿಕಿತ್ಸೆ ಫಲಕಾರಿಯಾಗದೇ ರೈತ ಮೃತಪಟ್ಟಿದ್ದಾರೆ. ಇದರಿಂದ ಕುಟುಂಬಸ್ಥರಿಗೆ ಸೂಕ್ತ ಪರಿಹಾರ ನೀಡುವಂತೆ ಜೊತೆಗೆ ತಮ್ಮ ಜಮೀನನ್ನು ಅರಣ್ಯ ಇಲಾಖೆಯವರು ಕಿತ್ತುಕೊಳ್ಳಬಾರದು ಎಂದು ಕುಟುಂಬಸ್ಥರು ಹಾಗೂ ರೈತರು ಕೆಆರ್ ಆಸ್ಪತ್ರೆಯ ಶವಾಗಾರದ ಮುಂದೆ ಪ್ರತಿಭಟನೆ ನಡೆಸಿದರು.
ಪತ್ನಿ ಹೇಳಿದ್ದೇನು: ಜಮೀನು ವಿಚಾರಕ್ಕೆ ನನ್ನ ಪತಿ ಗಿರಿ ಗೌಡ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನಾವು ಆ ಜಮೀನನ್ನು ಹಲವಾರು ತಲೆಮಾರುಗಳಿಂದ ಮಾಡಿಕೊಂಡು ಬಂದಿದ್ದೇವೆ. ಅಲ್ಲಿ ಮಾವಿನ ತೋಟ ಮಾಡಿದ್ದೇವೆ. ಇಬ್ಬರು ಹೆಣ್ಣು ಮಕ್ಕಳನ್ನು ಮದುವೆ ಮಾಡಿದ್ದೇವೆ. ಅದಕ್ಕಾಗಿ 10 ಲಕ್ಷ ರೂಪಾಯಿ ಸಾಲ ಆಗಿದೆ. ಈಗ ಆ ಸಾಲ ತೀರಿಸಬೆಕೆಂಬಷ್ಟರಲ್ಲಿ ಈ ರೀತಿ ಆಗಿದೆ. ಏನು ಮಾಡುವುದು ಎಂಬುದೇ ತಿಳಿಯುತ್ತಿಲ್ಲ. ಗ್ರಾಮದ ಕೆಲ ಸ್ಥಳಗಳಲ್ಲಿ ಫಾರೆಸ್ಟ್ನವರು ಪ್ರಕಟಣೆ ಅಂಟಿಸಿ ಹೋಗಿದ್ದರಂತೆ. ಕೂಲಿ ಮಾಡಿ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದೇವೆ. ದಯವಿಟ್ಟು ನಮ್ಮ ಜಮೀನನ್ನು ಉಳಿಸಿಕೊಡಿ ಎಂದು ಗಿರಿಗೌಡ ಅವರ ಪತ್ನಿ ಜಯಲಕ್ಷ್ಮಿ ಅವರು ಮನವಿ ಮಾಡಿದ್ದಾರೆ.