ಮಂಡ್ಯ:ಲೋಕಸಭಾ ಚುನಾವಣೆಗೆ ಇನ್ನೇನು ಕೆಲವೇ ತಿಂಗಳುಗಳು ಬಾಕಿ ಉಳಿದಿವೆ. ಒಂದು ಕಡೆ ಲೋಕಸಭಾ ಚುನಾವಣೆ ದೃಷ್ಟಿಯಿಂದ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಮಾಡಿಕೊಂಡಿದೆ. ಮತ್ತೊಂದು ಕಡೆ ಮಂಡ್ಯದ ಲೋಕ ಅಖಾಡ ಕೂಡ ರಂಗೇರುತ್ತಿದೆ. ಮಂಡ್ಯದ ಕ್ಷೇತ್ರದ ಟಿಕೆಟ್ ಈ ಬಾರಿ ಜೆಡಿಎಸ್ ಬದಲು, ಬಿಜೆಪಿಗೆ ನೀಡುವಂತೆ ಬಿಜೆಪಿ ಹೈಕಮಾಂಡ್ ಮೇಲೆ ಮಂಡ್ಯ ಜಿಲ್ಲೆಯ ನಾಯಕರು ಹಾಗೂ ಕಾರ್ಯಕರ್ತರು ಒತ್ತಡ ಹೇರುತ್ತಿದ್ದಾರೆ. ಈ ನಿಟ್ಟಿನಲ್ಲಿ ನಿನ್ನೆ ಕಾರ್ಯಕಾರಿಣಿ ಸಭೆ ಕೂಡ ನಡೆಸಿ ತೀರ್ಮಾನ ಕೂಡ ಮಾಡಿದ್ದಾರೆ.
ಮೂರರಿಂದ ಐದು ಕ್ಷೇತ್ರಗಳನ್ನ ಬಿಟ್ಟುಕೊಡುವಂತೆ ಬಿಜೆಪಿ ಮುಂದೆ ದಳಪತಿಗಳು ಬೇಡಿಕೆ ಇಟ್ಟಿದ್ದಾರೆ. ಅದರಲ್ಲೂ ಸಕ್ಕರಿನಗರಿ ಮಂಡ್ಯ ಹಾಗೂ ಹಾಸನ ಕ್ಷೇತ್ರಗಳನ್ನ ಜೆಡಿಎಸ್ ಬಿಟ್ಟುಕೊಡುವಂತೆ ಮನವಿ ಮಾಡಿದ್ದಾರೆ. ಆದರೆ, ಇದಕ್ಕೆ ಸವಾಲು ವೊಡ್ಡಿರುವ ಮಂಡ್ಯ ಜಿಲ್ಲೆಯ ಬಿಜೆಪಿ ನಾಯಕರು ಹಾಗೂ ಪದಾಧಿಕಾರಿಗಳು ಮಂಡ್ಯ ಕ್ಷೇತ್ರವನ್ನ ಬಿಜೆಪಿಯೇ ಉಳಿಸಿಕೊಳ್ಳಲು ತಯಾರಿ ಮಾಡಿಕೊಳ್ಳುತ್ತಿದ್ದಾರೆ.
ನಿನ್ನೆ ಪಾಂಡವಪುರದ ಖಾಸಗಿ ಕಲ್ಯಾಣ ಮಂಟಪದಲ್ಲಿ ಬಿಜೆಪಿ ಜಿಲ್ಲಾ ಕಾರ್ಯಕಾರಿಣಿ ಸಭೆ ನಡೆಸಿ ಸಾಕಷ್ಟು ಚರ್ಚೆ ನಡೆಸಲಾಗಿದೆ. ಸಭೆಯಲ್ಲಿ ಮಾಜಿ ಶಾಸಕರಾದ ಪ್ರೀತಂಗೌಡ, ರಾಮ್ ದಾಸ್ ಕೂಡ ಪಾಲ್ಗೊಂಡಿದ್ದರು. ಈ ವೇಳೆ ಮಾತನಾಡಿದ ಅವರು, ಹಾಸನ, ಮಂಡ್ಯದಲ್ಲೂ ಬಿಜೆಪಿಗೇ ಟಿಕೆಟ್ ನೀಡಬೇಕು ಎಂಬ ಅಪೇಕ್ಷೆ ಕಾರ್ಯಕರ್ತರಲ್ಲಿ ಇದೆ. ಬಿಜೆಪಿ 28ರಲ್ಲಿ ಎಷ್ಟು ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡುತ್ತದೆ ಎಂಬುದು ಇನ್ನೂ ತೀರ್ಮಾನ ಆಗಿಲ್ಲ. ಹಾಸನ , ಮಂಡ್ಯ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ಜೆಡಿಎಸ್ ಪ್ರಾಬಲ್ಯ ಇತ್ತು ಎಂದು ಮಾಜಿ ಶಾಸಕ ಪ್ರೀತಂಗೌಡ ತಿಳಿಸಿದರು.