ಕರ್ನಾಟಕ

karnataka

ETV Bharat / state

ರಾಜ್ಯಾದ್ಯಂತ 78ನೇ ಸ್ವಾತಂತ್ರ್ಯೋತ್ಸವ ಸಂಭ್ರಮ: ಸಚಿವರುಗಳಿಂದ ರಾಷ್ಟ್ರ ಧ್ವಜಾರೋಹಣ - 78th Independence Day

ರಾಜ್ಯದ ಹಲವೆಡೆಗಳಲ್ಲಿ 78ನೇ ಸ್ವಾತಂತ್ರ್ಯೋತ್ಸವವನ್ನು ಸಡಗರ, ಸಂಭ್ರಮದಿಂದ ಆಚರಣೆ ಮಾಡಲಾಗುತ್ತಿದೆ.

independence day
ಸ್ವಾತಂತ್ರ್ಯೋತ್ಸವ (ETV Bharat)

By ETV Bharat Karnataka Team

Published : Aug 15, 2024, 12:43 PM IST

ದಾವಣಗೆರೆ/ಮೈಸೂರು:ಇಂದು ದೇಶಾದ್ಯಂತ 78ನೇ ಸ್ವಾತಂತ್ರ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ. ಜಿಲ್ಲಾಡಳಿತದಿಂದ ದಾವಣಗೆರೆ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಉಸ್ತುವಾರಿ ಸಚಿವ ಎಸ್​​.ಎಸ್.ಮಲ್ಲಿಕಾರ್ಜುನ್‌ ಧ್ವಜಾರೋಹಣ ನೆರವೇರಿಸಿದರು. ಬಳಿಕ ಸಚಿವರು ತೆರೆದ ವಾಹನದಲ್ಲಿ ತೆರಳಿ ಗೌರವ ವಂದನೆ ಸ್ವೀಕರಿಸಿದರು.

ಪೊಲೀಸ್, ಕೆಎಸ್​​ಆರ್​​ಪಿ ಹಾಗೂ ಡಿಎಅರ್ ಗೃಹ ರಕ್ಷಕ ದಳದವರು, ವಿವಿಧ ಶಾಲಾ ಕಾಲೇಜು ವಿದ್ಯಾರ್ಥಿಗಳು ಆಕರ್ಷಕ ಪರೇಡ್ ನಡೆಸಿದರು. ಈ ಸಂದರ್ಭದಲ್ಲಿ ಸ್ವಾತಂತ್ರ್ಯಕ್ಕಾಗಿ ದುಡಿದ ದಾವಣಗೆರೆಯ ಸೇನಾನಿಗಳಿಗೆ ಜಿಲ್ಲಾಡಳಿತದಿಂದ ಗೌರವಿಸಲಾಯಿತು. ವಿವಿಧ ಶಾಲೆಗಳ ಮಕ್ಕಳು ದೇಶ ಭಕ್ತಿಗೀತೆಗಳಿಗೆ ನೃತ್ಯ ಮಾಡಿ, ಜಿಲ್ಲಾ ಕ್ರೀಡಾಂಗಣದಲ್ಲಿ ನೆರೆದಿದ್ದ ಜನರನ್ನು ರಂಜಿಸಿದರು. ಈ ವೇಳೆ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೇರಿ ಇತರರು ಭಾಗಿಯಾಗಿದ್ದರು.

ಕಾರವಾರದಲ್ಲಿ ಸ್ವಾತಂತ್ರ್ಯೋತ್ಸವ:ಪೊಲೀಸ್ ಪರೇಡ್ ಮೈದಾನದಲ್ಲಿ ಜಿಲ್ಲಾ‌ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಧ್ವಜಾರೋಹಣ ನೆರವೇರಿಸಿದರು. ಬಳಿಕ ತೆರೆದ ವಾಹನದ ಮೂಲದ ಪರೇಡ್ ತಂಡಗಳ ಬಳಿ ತೆರಳಿ ಪರಿವೀಕ್ಷಣೆ ನಡೆಸಿದರು. ತದನಂತರ ಮೈದಾನದಲ್ಲಿ ಪೊಲೀಸ್,‌ ಅರಣ್ಯ, ಹೋಂ ಗಾರ್ಡ್, ಎನ್‌ಸಿಸಿ ಸೇರಿ ವಿವಿಧ ತಂಡಗಳಿಂದ ಆಕರ್ಷಕ ಪಥಸಂಚಲನ ನಡೆಯಿತು. ಸಚಿವರು ಪಥಸಂಚಲನ ತಂಡಗಳಿಂದ ಗೌರವ ವಂದನೆ ಸ್ವೀಕರಿಸಿದರು.

ರಾಜ್ಯಾದ್ಯಂತ 78ನೇ ಸ್ವಾತಂತ್ರ್ಯೋತ್ಸವ ಸಂಭ್ರಮ: ಸಚಿವರುಗಳಿಂದ ರಾಷ್ಟ್ರ ಧ್ವಜಾರೋಹಣ (ETV Bharat)

ಈ ವೇಳೆ ಮಾತನಾಡಿದ ಅವರು, ಜಿಲ್ಲೆಯಲ್ಲಿ‌ ಎರಡು ದುರಂತಗಳು ನಡೆದಾಗಲೂ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ‌ ಸಿಬ್ಬಂದಿ ಉತ್ತಮ‌ ಕಾರ್ಯ ನಿರ್ವಹಿಸಿದ್ದಾರೆ. ಅಂಕೋಲಾದ ನಿರಾಶ್ರಿತರಿಗೆ ಜಾಗ ಗುರುತಿಸಿ‌ ಮನೆ‌ ಕಟ್ಟಿಕೊಡುತ್ತೇವೆ. ನಮಗೆ ಜಲಮಾರ್ಗ ಇದ್ದರೂ ಕ್ರೀಸ್ ಬೋಟ್ ಬಂದು‌ ನಿಲ್ಲಲು ಸ್ಥಳ ಇಲ್ಲ. ಮಂಗಳೂರಿನಲ್ಲಿ‌ ಜಟ್ಟಿ‌ ಮಾಡಲಿದ್ದೇವೆ. ಮುಂದೆ ನಮ್ಮ‌ ಜಿಲ್ಲೆಗೂ ತರುತ್ತೇವೆ.‌ ರಾಜ್ಯದ 13 ಬಂದರುಗಳನ್ನು‌ ಮೇಲ್ದರ್ಜೆಗೆ ಏರಿಸುತ್ತೇವೆ. ಮುರುಡೇಶ್ವರದಲ್ಲಿ 340 ಕೋಟಿ ರೂ. ವೆಚ್ಚದಲ್ಲಿ ಹೊರ ಬಂದರು‌ ನಿರ್ಮಿಸಲಾಗುತ್ತದೆ ಎಂದು ತಿಳಿಸಿದರು.

ಮೈಸೂರಿನಲ್ಲಿ ಸ್ವಾತಂತ್ರೋತ್ಸವ ದಿನಾಚರಣೆ (ETV Bharat)

ಮೈಸೂರಿನಲ್ಲಿ ಸ್ವಾತಂತ್ರ್ಯೋತ್ಸವ ದಿನಾಚರಣೆ: ನಗರದ ಬನ್ನಿಮಂಟಪ ಪಂಜಿನ ಕವಾಯತು ಮೈದಾನದಲ್ಲಿ ಸ್ವಾತಂತ್ರ್ಯೋತ್ಸವ ಆಚರಣೆ ಮಾಡಲಾಯಿತು. ಸಮಾಜ ಕಲ್ಯಾಣ ಇಲಾಖೆಯ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಹೆಚ್.ಸಿ.ಮಹದೇವಪ್ಪ ಧ್ವಜಾರೋಹಣ ನೆರವೇರಿಸಿ, ಧ್ವಜ ವಂದನೆ ಸ್ವೀಕರಿಸಿದರು.

ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಗಾಂಧೀಜಿ ಹಾಗೂ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿದರು. ತೆರೆದ ವಾಹನದಲ್ಲಿ ಪರೇಡ್ ತಂಡಗಳ ಪರಿವೀಕ್ಷಣೆ ನಡೆಸಿದರು. ಪರೇಡ್ ತುಕಡಿಗಳಿಂದ ಆಕರ್ಷಕ ಪಥಸಂಚಲನ ನಡೆಯಿತು. ಪೊಲೀಸ್ ಇಲಾಖೆಯ ಪುರುಷ ಹಾಗೂ ಮಹಿಳಾ ತಂಡಗಳು, ಗೃಹ ರಕ್ಷಕ ದಳ, ಅಗ್ನಿಶಾಮಕ ದಳ, ಅಬಕಾರಿ ದಳ, ಎನ್​ಎಸ್​​ಎಸ್, ಎನ್​ಸಿಸಿ ತಂಡಗಳು, ವಿಶೇಷಚೇತನ ಮಕ್ಕಳ ತಂಡ ಹಾಗೂ ಶಾಲಾ ಕಾಲೇಜು ತಂಡಗಳು ಭಾಗವಹಿಸಿದ್ದವು.

ಚಾಮರಾಜನಗರದಲ್ಲಿ ಸ್ವಾತಂತ್ರ್ಯ ದಿನ (ETV Bharat)

ಚಾಮರಾಜನಗರದಲ್ಲಿ ಸ್ವಾತಂತ್ರ್ಯ ದಿನ:ಜಿಲ್ಲಾಡಳಿತದ ವತಿಯಿಂದ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ಸಂಭ್ರಮ, ಸಡಗರದಿಂದ 78ನೇ ಸ್ವಾತಂತ್ರ್ಯ ದಿನ ಆಚರಿಸಲಾಯಿತು. ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್ ಧ್ವಜಾರೋಹಣ ನೆರವೇರಿಸಿ, ವಿವಿಧ ತುಕಡಿಗಳಿಂದ ಗೌರವ ವಂದನೆ ಸ್ವೀಕರಿಸಿದರು. ಪೊಲೀಸರು ಸೇರಿದಂತೆ ವಿವಿಧ ಶಾಲಾ ಮಕ್ಕಳಿಂದ ಆಕರ್ಷಕ ಪಥಸಂಚಲನ ನಡೆಯಿತು‌.

ಬಳಿಕ ಕೆ.ವೆಂಕಟೇಶ್ ಸ್ವಾತಂತ್ರ್ಯೋತ್ಸವ ಭಾಷಣ ಮಾಡಿ, ಲಕ್ಷಾಂತರ ಮಂದಿ ದೇಶಭಕ್ತರ ತ್ಯಾಗ, ಬಲಿದಾನ ಸಮರ್ಪಣೆ ಮೂಲಕ ದೊರೆತ ಸ್ವಾತಂತ್ರ್ಯಕ್ಕೆ 78ರ ಸಂಭ್ರಮ. ನಮಗೆ ಭಾರತ ಒಂದು ಮಾತೃಭೂಮಿ. ಭಾವನಾತ್ಮಕ ಬೆಸುಗೆಯಿಂದ ಬೆಳೆದ ನಮಗೆ ದೇಶಭಕ್ತಿ ಎನ್ನುವುದು ಮಾತೃಪ್ರೇಮದಂತೆ ಹುಟ್ಟಿನಿಂದಲೂ ಬೆಳೆದು ಬಂದ ಸಹಜ ಸ್ವಭಾವ ಎಂದರು.

ರಾಷ್ಟ್ರೀಯ ಏಕತೆ ಮತ್ತು ಭಾವೈಕ್ಯತೆಯನ್ನು ಸಾಧಿಸುವುದರ ಜೊತೆ ಜೊತೆಗೆ ಎಲ್ಲಾ ಕ್ಷೇತ್ರದಲ್ಲೂ ಇರುವ ವಿಫುಲ ಅವಕಾಶ ಬಳಸಿಕೊಂಡು ದೇಶದ ಸರ್ವಾಂಗೀಣ ಅಭಿವೃದ್ಧಿಯತ್ತ ವಿಶೇಷ ಗಮನ ಹರಿಸಬೇಕಾಗಿದೆ. ದೇಶದ ಇತಿಹಾಸ, ಪರಂಪರೆ, ಸಂಸ್ಕೃತಿ, ದಿವ್ಯತೆ, ಭವ್ಯತೆಗಳ ಅರಿವಿನಿಂದ ನಮ್ಮ ಯುವ ಪೀಳಿಗೆ ಜಾಗೃತಗೊಳ್ಳಲಿ, ವಂದೇ ಭಾರತ ಎಂಬ ಕೂಗು ಒಮ್ಮೆಗೆ ಮೊಳಗಲಿ ಎಂದು ತಿಳಿಸಿದರು.

ಇದನ್ನೂ ಓದಿ:ಗ್ಯಾರಂಟಿಗಳಿಂದ ರಾಜ್ಯ ದಿವಾಳಿ ಎಂದವರಿಗೆ ಆರ್ಥಿಕ ಬೆಳವಣಿಗೆಯಿಂದಲೇ ಉತ್ತರ: ಸಿಎಂ ಸಿದ್ದರಾಮಯ್ಯ - Independence Day

ABOUT THE AUTHOR

...view details