ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ನೆಲಮಂಗಲ : ಖಾಸಗಿ ಆಸ್ಪತ್ರೆಯಲ್ಲಿ ಕಾನೂನು ಬಾಹಿರವಾಗಿ 74 ಗರ್ಭಪಾತ ಪ್ರಕರಣಗಳು ನಡೆದಿದ್ದು, ಈ ಮೂಲಕ ರಾಜ್ಯದಲ್ಲಿ ಮತ್ತೆ ಭ್ರೂಣಹತ್ಯೆ ಸದ್ದು ಮಾಡಿದೆ. ಹೀಗಾಗಿ ಬಿಜೆಪಿಯವರು ಇಂದು ಆಸ್ಪತ್ರೆ ಮುಂಭಾಗವೇ ಪ್ರತಿಭಟನೆ ನಡೆಸಿದ್ದಾರೆ. ಭ್ರೂಣ ಪತ್ತೆ ಮಾಡುವುದು ಹಾಗೂ ಹತ್ಯೆ ಮಾಡುವುದು ಕಾನೂನು ಪ್ರಕಾರ ಅಪರಾಧ. ಈ ನಡುವೆ ಬೆಂಗಳೂರು ಹೊರವಲಯದ ನೆಲಮಂಗಲದ ಖಾಸಗಿ ಆಸ್ಪತ್ರೆಯಲ್ಲಿ ಭ್ರೂಣ ಹತ್ಯೆ ನಿಷೇಧ ಕಾಯಿದೆ ಉಲ್ಲಂಘನೆ ಆರೋಪ ಕೇಳಿ ಬಂದಿದೆ.
ಭ್ರೂಣ ಹತ್ಯೆ ನಿಷೇಧ ಕಾಯಿದೆಯಡಿ ನೋಂದಣಿ ಮಾಡದೇ ಕೇವಲ KPME ಪರವಾನಗಿ ಪಡೆದು ಅನಧಿಕೃತವಾಗಿ ಭ್ರೂಣ ಹತ್ಯೆ ಮಾಡಿರುವ ಗಂಭೀರವಾದ ಆರೋಪ ಕೇಳಿ ಬಂದಿದೆ. ಈ ಹಿನ್ನೆಲೆ ಜಿಲ್ಲಾ ಕುಟುಂಬ ಕಲ್ಯಾಣ ಆರೋಗ್ಯಾಧಿಕಾರಿಗಳು ಭೇಟಿ ಮಾಡಿ, ಪರಿಶೀಲನೆ ನಡೆಸಿದ ವೇಳೆ ಆಸ್ಪತ್ರೆಯ ವೈದ್ಯರು ಅಧಿಕಾರಿಗಳಿಗೆ, ಸೂಕ್ತ ದಾಖಲೆಗಳನ್ನ ಒದಗಿಸುವಲ್ಲಿ ವಿಫಲವಾಗಿದ್ದಾರೆ. ಈ ಹಿನ್ನೆಲೆ 2021ನೇ ಸಾಲಿನಿಂದ ಇಲ್ಲಿಯವರೆಗೂ 74 ಗರ್ಭಪಾತ ನಡೆಸಿರುವ ಬಗ್ಗೆ ಮಾಹಿತಿ ನೀಡಿ ಎಂದು ಆಸ್ಪತ್ರೆಗೆ ನೋಟಿಸ್ ನೀಡಲಾಗಿದೆ.
ವೈದ್ಯರು ಆಸರೆ ಆಸ್ಪತ್ರೆಗೆ ಕೇವಲ KPME ಪರವಾನಗಿ ಪಡೆದಿದ್ದಾರೆ. ಅಲ್ಲದೇ ಈ ಆಸ್ಪತ್ರೆಯಲ್ಲಿ ಸ್ಕ್ಯಾನಿಂಗ್ ಮಿಷನ್ ಇಲ್ಲದಿರುವುದು ತಿಳಿದು ಬಂದಿದೆ. ಅಧಿಕಾರಿಗಳ ದೂರಿನ ಆಧಾರದ ಮೇರೆಗೆ ಪ್ರಕರಣ ದಾಖಲಿಸಿಕೊಂಡ ನೆಲಮಂಗಲ ಟೌನ್ ಪೊಲೀಸರು, ಖಾಸಗಿ ಆಸ್ಪತ್ರೆ ವೈದ್ಯರಿಗೆ ನೋಟಿಸ್ ನೀಡಿದ್ದಾರೆ.
ಆಸ್ಪತ್ರೆಯಲ್ಲಿ 2021ನೇ ಸಾಲಿನಿಂದ ಇಲ್ಲಿಯವರೆಗೂ 74 ಗರ್ಭಪಾತ ನಡೆಸಿರುವ ಬಗ್ಗೆ ಮಾಹಿತಿ ಜೊತೆಗೆ ಸಿಸಿಟಿವಿ ದೃಶ್ಯ ಒದಗಿಸಿಲ್ಲ. ಆಸ್ಪತ್ರೆ ವೈದ್ಯರು ಎಸ್ಕೇಪ್ ಆಗಿದ್ದಾರೆ. ಅದಕ್ಕೆ ಸ್ಥಳೀಯರು ಇದರಲ್ಲಿ ಯಾರದ್ದೇ ಕೈವಾಡವಿದ್ದರೂ ಕೂಡ ಅಧಿಕಾರಿಗಳಿಂದ ತನಿಖೆಯಾಗಬೇಕು ಎಂದು ಹೇಳುತ್ತಿದ್ದಾರೆ.
ಇಂದು ನೆಲಮಂಗಲ ತಾಲೂಕಿನ ಬಿಜೆಪಿ ನೂತನ ಅಧ್ಯಕ್ಷ ಜಗದೀಶ್ ಚೌಧರಿ ಮತ್ತು ತಂಡ ಆಸ್ಪತ್ರೆ ಮುಂಭಾಗ ಪ್ರತಿಭಟನೆಗೆ ಮುಂದಾದಾಗ, ಪೊಲೀಸರು ತಡೆದಿದ್ದಾರೆ. ವೈದ್ಯರ ಫೋನ್ ಸ್ವಿಚ್ಡ್ ಆಫ್ ಆಗಿರುವುದು ಅನುಮಾನಕ್ಕೆ ಕಾರಣವಾಗಿದೆ. ಇನ್ನು ಇಂತಹ ಪ್ರಕರಣಗಳನ್ನ ಸೂಕ್ತ ಕಾಲಕಾಲದಲ್ಲಿ ಪತ್ತೆ ಹಚ್ಚುವಲ್ಲಿ ಜಿಲ್ಲಾ ವೈದ್ಯಾಧಿಕಾರಿಗಳು ಮೀನಮೇಷ ಎಣಿಸುತ್ತಿರುವುದು ಕೂಡ ಸಾಕಷ್ಟು ಅನುಮಾನಗಳಿಗೆ ಕಾರಣವಾಗಿದೆ. ಇಂತಹ ಪ್ರಕರಣದಲ್ಲಿ ಯಾರೆಲ್ಲಾ ಸಿಲುಕಿಕೊಂಡಿದ್ದಾರೆ ಅಂತಾ ತನಿಖೆಯ ನಂತರ ಗೊತ್ತಾಗ್ಬೇಕಿದೆ.
ಈ ಬಗ್ಗೆ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಅವರು ಮಾತನಾಡಿದ್ದು, ''ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ಮಂಜುನಾಥ್ ಅವರು ಮಾಮುಲಿಯಂತೆ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ಮಾಡುತ್ತಿದ್ದಾಗ ಖಾಸಗಿ ಆಸ್ಪತ್ರೆಯಲ್ಲಿ 2021ರಿಂದ ಇಲ್ಲಿಯವರೆಗೆ ಸರಿಯಾದ ಕ್ರಮವನ್ನ ಅನುಸರಿಸದೆ ಗರ್ಭಪಾತ ಮಾಡಿದ್ದಾರೆ ಎಂಬುದು ತಿಳಿದುಬಂದಿದೆ. ಹೀಗಾಗಿ ನಮ್ಮ ಪೊಲೀಸ್ ಠಾಣೆಗೆ ದಿನಾಂಕ 22-2-24 ರಂದು ಭೇಟಿ ನೀಡಿ ಒಂದು ಪ್ರಕರಣವನ್ನು ದಾಖಲು ಮಾಡಿದ್ದಾರೆ. ಸೆಕ್ಷನ್ 3122316 ಹಾಗೂ ಎಂಟಿಪಿ ಕಾಯ್ದೆ 1971 ಉಲ್ಲಂಘನೆ ಆಗಿದೆ ಎಂದು ಪ್ರಕರಣ ದಾಖಲಿಸಿಕೊಂಡಿದ್ದೇವೆ'' ಎಂದಿದ್ದಾರೆ.
ಇದನ್ನೂ ಓದಿ :ಭ್ರೂಣ ಹತ್ಯೆ ತಡೆಗೆ ರಾಜ್ಯ ಹಾಗೂ ಜಿಲ್ಲಾ ಮಟ್ಟದಲ್ಲಿ ಕಾರ್ಯಪಡೆ: ಆರೋಗ್ಯ ಸಚಿವ ದಿನೇಶ್ ಗುಂಡೂರಾವ್