ಚಾಮರಾಜನಗರ:ಹನೂರು ತಾಲೂಕಿನ ಸುಳ್ವಾಡಿ ಗ್ರಾಮದ ಹೊರವಲದ ಕಿಚ್ಚುಗುತ್ತಿ ಮಾರಮ್ಮ ದೇವಾಲಯದಲ್ಲಿ ನಡೆದಿದ್ದ ವಿಷ ಪ್ರಸಾದ ದುರಂತಕ್ಕೆ 6 ವರ್ಷ ಕಳೆದರೂ ಸಂತ್ರಸ್ತ ಕುಟುಂಬಗಳು ಆಘಾತದಿಂದ ಇನ್ನೂ ಚೇತರಿಸಿಕೊಂಡಿಲ್ಲ. ಈ ದುರ್ಘಟನೆಯಲ್ಲಿ ಅಗಲಿದವರ ಸಮಾಧಿಗೆ ಕುಟುಂಬಸ್ಥರು ಪೂಜೆ ಸಲ್ಲಿಸಿ, ಕಂಬನಿ ಮಿಡಿದರು.
ಘಟನೆ ಹಿನ್ನೆಲೆ:2018ರ ಡಿ.14 ರಂದು ಹನೂರು ತಾಲೂಕಿನ ಮಾರ್ಟಳ್ಳಿ ಗ್ರಾಪಂ ವ್ಯಾಪ್ತಿಯ ಸುಳ್ವಾಡಿ ಕಿಚ್ಚುಗುತ್ತಿ ಮಾರಮ್ಮನ ದೇವಾಲಯದಲ್ಲಿ ದೇವರ ಪ್ರಸಾದಕ್ಕೆ ವಿಷ ಬೆರೆಸಿದ್ದ ಟೊಮೆಟೊ ಬಾತ್ ತಿಂದು ಎಂ. ಜಿ. ದೊಡ್ಡಿ, ಮಾರ್ಟಹಳ್ಳಿ ಸೇರಿದಂತೆ ವಿವಿಧ ಗ್ರಾಮಗಳಲ್ಲಿ 17 ಜನ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರು. 150ಕ್ಕೂ ಹೆಚ್ಚು ಜನ ವಿವಿಧ ನೂನ್ಯತೆಗಳಿಂದ ಹಾಗೂ ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದಾರೆ.
ಇಮ್ಮಡಿ ಮಹದೇವಸ್ವಾಮಿ ಜಾಮೀನು ಅರ್ಜಿ ವಜಾ:ಸುಳ್ವಾಡಿ ವಿಷ ಪ್ರಸಾದ ದುರಂತ ಪ್ರಕರಣದ ಮೊದಲನೇ ಆರೋಪಿಯಾಗಿರುವ ಇಮ್ಮಡಿ ಮಹದೇವಸ್ವಾಮಿ ಅವರ ಜಾಮೀನು ಅರ್ಜಿಯನ್ನು ನ.20ರಂದು ಚಾಮರಾಜನಗರ ಜಿಲ್ಲಾ ಪ್ರಧಾನ ನ್ಯಾಯಾಲಯ ವಜಾಗೊಳಿಸಿತ್ತು. ಅನಾರೋಗ್ಯದ ಕಾರಣಕ್ಕೆ ಜಾಮೀನು ನೀಡುವಂತೆ ಇಮ್ಮಡಿ ಮಹಾದೇಸ್ವಾಮಿ ಸಲ್ಲಿಸಿದ್ದ ಜಾಮೀನು ಅರ್ಜಿ ವಿಚಾರಣೆ ನಡೆಸಿದ್ದ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಬಿ. ಎಸ್. ಭಾರತಿ ಅವರು ವಜಾಗೊಳಿಸಿ ಆದೇಶಿಸಿದ್ದರು.
ಮೈಸೂರು ಜೈಲಿನಲ್ಲಿರುವ ಆರೋಪಿಗಳು:ಸದ್ಯ ಈ ಪ್ರಕರಣದ ಮೊದಲನೇ ಆರೋಪಿಯಾಗಿರುವ ಇಮ್ಮಡಿ ಮಹದೇವಸ್ವಾಮಿ, ಎರಡನೇ ಆರೋಪಿ ಅಂಬಿಕಾ, ಮೂರನೇ ಆರೋಪಿ ಮಹಾದೇವಸ್ವಾಮಿ ಹಾಗೂ ನಾಲ್ಕನೇ ಆರೋಪಿ ದೊಡ್ಡಯ್ಯ ಆರು ವರ್ಷಗಳಿಂದ ಮೈಸೂರು ಜೈಲಿನಲ್ಲಿದ್ದಾರೆ.
ಇದನ್ನೂ ಓದಿ:ಮನೆಯಲ್ಲಿ ಸಿಲಿಂಡರ್ ಸ್ಫೋಟ; ತಾಯಿ ಸಾವು, ಮೂವರು ಮಕ್ಕಳಿಗೆ ಮುಂದುವರಿದ ಚಿಕಿತ್ಸೆ