ಬೆಂಗಳೂರು: ಸೋಮವಾರದಂದು ರಾಜ್ಯದಲ್ಲಿ ಸಂಭವಿಸಿದ ಪ್ರತ್ಯೇಕ ಘಟನೆಗಳಲ್ಲಿ ಇಬ್ಬರು ಬಾಲಕರು ಸೇರಿದಂತೆ ಒಟ್ಟು 6 ಜನರು ಅಸುನೀಗಿದ್ದಾರೆ.
ನೀರುಪಾಲು:ಕೆರೆಗೆ ಈಜಲು ಹೋಗಿ ಬಾಲಕರಿಬ್ಬರು ಮೃತಪಟ್ಟ ಘಟನೆ ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಬನಹಟ್ಟಿ ಪಟ್ಟಣದಲ್ಲಿ ನಡೆದಿದೆ. ಶಾಲೆ ರಜೆ ಇರುವ ಹಿನ್ನೆಲೆ ಸೋಮವಾರ ಪಟ್ಟಣದ ಕೆರೆಯಲ್ಲಿ ಈಜಲು ಹೋಗಿದ್ದರು. ಈ ವೇಳೆ ನೀರಿನಲ್ಲಿ ಮುಳುಗಿ ಸಂಜಯ್ ಲಕ್ಷ್ಮಣ್ ತಳವಾರ(12) ಹಾಗೂ ಸಮರ್ಥ ಸದಾಶಿವ ಜುಲ್ಫಿ (10) ಸಾವನ್ನಪ್ಪಿದ್ದಾರೆ. ಸ್ಥಳಕ್ಕೆ ಬನಹಟ್ಟಿ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತ ದೇಹಗಳನ್ನು ಹೂರ ತೆಗೆದು ರಬಕವಿ ಬನಹಟ್ಟಿ ತಾಲೂಕ ಸರ್ಕಾರಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಬನಹಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಲಾಗುತ್ತಿದೆ.
ಹಿಟ್ ಆಂಡ್ ರನ್: ದಕ್ಷಿಣ ಕನ್ನಡ ಜಿಲ್ಲೆಯಬಂಟ್ವಾಳ ತಾಲೂಕಿನ ಮಂಚಿ ಎಂಬಲ್ಲಿ ಸಂಭವಿಸಿದ ಅಪಘಾತದಲ್ಲಿ ಪುತ್ತೂರಿನ ನಿವೃತ್ತ ಸೈನಿಕ ಸಾವನ್ನಪ್ಪಿದ್ದಾರೆ. ಚಿದಾನಂದ ಕಾಮತ್ (55) ಮೃತರು. ನಿನ್ನೆ ಮಧ್ಯಾಹ್ನ ಚಿದಾನಂದ ಸ್ಕೂಟರ್ನಲ್ಲಿ ಚಲಿಸುತ್ತಿದ್ದ ವೇಳೆ ಅಪರಿಚಿತ ಕಾರೊಂದು ಡಿಕ್ಕಿ ಹೊಡೆದು ಪರಾರಿಯಾಗಿದೆ. ಗಂಭೀರವಾಗಿ ಗಾಯಗೊಂಡಿದ್ದ ಚಿದಾನಂದ ಅವರನ್ನು ಸ್ಥಳೀಯರು ಕೂಡಲೇ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಚಿದಾನಂದ ಮೃತಪಟ್ಟಿದ್ದಾರೆ.
ಮಾಜಿ ಯೋಧ ಸಾವು (ETV Bharat) ಬಳಿಕ ಪೊಲೀಸರು ಕಾರು ಚಾಲಕನನ್ನು ಪತ್ತೆಹಚ್ಚಿದ್ದು, ಇದೀಗ ಆತನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಮೆಲ್ಕಾರ್ ಟ್ರಾಫಿಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ, ತನಿಖೆ ನಡೆಸಲಾಗುತ್ತಿದೆ.
ಬೈಕ್ಗೆ ಆಟೋ ಡಿಕ್ಕಿ:ಮಂಗಳೂರು ನಗರದಲ್ಲಿ ಸೋಮವಾರ ಸಂಜೆ ಆಟೋ ಮತ್ತು ಬೈಕ್ ನಡುವೆ ಡಿಕ್ಕಿ ಸಂಭವಿಸಿದ ಪರಿಣಾಮ ಆಟೋ ಪಲ್ಟಿಯಾಗಿ ಪ್ರಯಾಣಿಕ ಸಾವನ್ನಪ್ಪಿದ್ದಾನೆ. ಸಜೀಪ ನಿವಾಸಿ ಅಲ್ತಾಫ್ (18) ಮೃತ ದುರ್ದೈವಿ.
ಬಿ ಸಿ ರೋಡಿನಿಂದ ಬರುತ್ತಿದ್ದ ಆಟೋ ಹಾಗೂ ಪಾಣೆ ಮಂಗಳೂರು ಪೇಟೆಯಿಂದ ಬರುತ್ತಿದ್ದ ಬೈಕ್ ನಡುವೆ ಅಪಘಾತ ಸಂಭವಿಸಿದ್ದು, ಅಪಘಾತದಿಂದ ಆಟೋ ನಿಯಂತ್ರಣ ಕಳೆದುಕೊಂಡು ಪಲ್ಟಿಯಾಗಿ ಈ ವೇಳೆ ಪ್ರಯಾಣಿಕ ರಸ್ತೆಗೆ ಬಿದ್ದು ತಲೆಗೆ ಗಂಭೀರಗಾಯವಾಗಿದೆ. ಕೂಡಲೇ ಆತನನ್ನು ಆಸ್ಪತ್ರೆಗೆ ಸಾಗಿಸಲಾಗಿತ್ತಾದರೂ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾನೆ. ಘಟನಾ ಸ್ಥಳಕ್ಕೆ ಮೆಲ್ಕಾರ್ ಟ್ರಾಫಿಕ್ ಪೋಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಬಸ್ ಮತ್ತು ಕಾರು ನಡುವೆ ಅಪಘಾತ:ಕೆ.ಎಸ್.ಆರ್.ಟಿ.ಸಿ ಬಸ್ ಹಾಗೂ ಸ್ವಿಫ್ಟ್ ಕಾರಿನ ನಡುವೆ ಡಿಕ್ಕಿ ಸಂಭವಿಸಿ ಸ್ಥಳದಲ್ಲೇ ಓರ್ವ ವ್ಯಕ್ತಿ ಸಾವನ್ನಪ್ಪಿದ್ದು ನಾಲ್ವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಮಂಡ್ಯ ಜಿಲ್ಲೆ ಮದ್ದೂರು ತಾಲ್ಲೂಕಿನ ಬೋರಾಪುರ ಗೇಟ್ ಬಳಿಯ ಮಳವಳ್ಳಿ-ಮದ್ದೂರು ರಸ್ತೆಯಲ್ಲಿ ನಡೆದಿದೆ. ಮಳವಳ್ಳಿ ಪಟ್ಟಣದ ಅಕ್ಷಯ್ (25)ಮೃತ ಯುವಕ. ಮದು, ಮನು, ಮಾದೇಗೌಡ ಹಾಗೂ ಬಸವರಾಜು ಗಾಯಗೊಂಡವರಾಗಿದ್ದಾರೆ.
ಮದ್ದೂರಿನಿಂದ ಮಳವಳ್ಳಿ ಕಡೆಗೆ ತೆರಳುತ್ತಿದ್ದ ಸ್ವಿಫ್ಟ್ ಕಾರು ಮತ್ತು ಮಳವಳ್ಳಿಯಿಂದ-ಮದ್ದೂರು ಕಡೆಗೆ ಬರ್ತಿದ್ದ KSRTC ಬಸ್ಸು ನಡುವೇ ಅಪಘಾತ ಸಂಭಿವಿಸಿದೆ. ಘಟನಾ ಸ್ಥಳಕ್ಕೆ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಮದ್ದೂರು ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ:ದಕ್ಷಿಣ ಕನ್ನಡ: ಶಾಲಾ ಕಾಂಪೌಂಡ್ ಗೋಡೆ ಕುಸಿದು 3ನೇ ತರಗತಿ ಬಾಲಕಿ ಸಾವು - School Compound Wall Collapse