ಬೆಂಗಳೂರು: ಎಚ್ಎಂಟಿ ವಶದಲ್ಲಿದ್ದ ಪೀಣ್ಯ-ಜಾಲಹಳ್ಳಿ ಸರ್ವೆ ನಂ.1ರಲ್ಲಿ ಇಂದು ಅರಣ್ಯ ಇಲಾಖೆ ಬೆಂಗಳೂರು ನಗರ ವಲಯದ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ 5 ಎಕರೆ ಖಾಲಿ ಜಮೀನನ್ನು ಮರುವಶಕ್ಕೆ ಪಡೆದಿದ್ದಾರೆ. ಜೊತೆಗೆ, ಕರ್ನಾಟಕ ಅರಣ್ಯ ಇಲಾಖೆಯ ಫಲಕ ಹಾಕಿದ್ದಾರೆ.
ಪೀಣ್ಯ, ಜಾಲಹಳ್ಳಿ ಪ್ಲಾಂಟೇಷನ್ನಲ್ಲಿರುವ 599 ಎಕರೆ ಜಮೀನು ಅರಣ್ಯವಾಗಿದೆ. ಅರಣ್ಯೇತರ ಉದ್ದೇಶಕ್ಕೆ ಭೂಪರಿವರ್ತನೆ ಆಗದ ಈ ಜಮೀನು ಒಂದು ಕಾಲದಲ್ಲಿದ್ದ ಅರಣ್ಯ, ಯಾವಾಗಲೂ ಅರಣ್ಯವಾಗಿರುತ್ತದೆ (once a forest is always a forest) ಎಂಬ ಸುಪ್ರೀಂ ಕೋರ್ಟ್ ಅಭಿಪ್ರಾಯದಂತೆ ಅರಣ್ಯವೇ ಆಗಿದೆ ಎಂದಿದ್ದ ಈಶ್ವರ ಖಂಡ್ರೆ, ಎಚ್ಎಂಟಿ ವಶದಲ್ಲಿರುವ ಪೀಣ್ಯ ಪ್ಲಾಂಟೇಷನ್ನ 599 ಎಕರೆ ಅರಣ್ಯದ ಪೈಕಿ ಅರಣ್ಯ ಸ್ವರೂಪದ ಮತ್ತು ಖಾಲಿ ಜಮೀನು ವಶಕ್ಕೆ ಪಡೆದು ಬೃಹತ್ ಉದ್ಯಾನ ನಿರ್ಮಿಸುವುದಾಗಿ ಹೇಳಿದ್ದರು.
ಹೀಗಾಗಿ ಇಂದು ಅರಣ್ಯ ಅಧಿಕಾರಿಗಳು ಐದು ಎಕರೆ ಖಾಲಿ ಜಮೀನನ್ನು ಎಚ್ಎಂಟಿಯಿಂದ ವಶಕ್ಕೆ ಪಡೆದರು. ಜಮೀನು ಅರಣ್ಯ ಸ್ವರೂಪ ಕಳೆದುಕೊಂಡಿದೆ ಎಂದು ಡಿನೋಟಿಫಿಕೇಷನ್ಗೆ ಅನುಮತಿ ಕೋರಿ ಅರಣ್ಯಾಧಿಕಾರಿಗಳು ನಿಯಮಬಾಹಿರವಾಗಿ ಸಲ್ಲಿಸಿದ್ದ ಇಂಟರ್ ಲೊಕೇಟರಿ ಅಪ್ಲಿಕೇಶನ್ (ಐ.ಎ.) ಹಿಂಪಡೆಯಲೂ ಸೂಚನೆ ನೀಡಿದ್ದರು. ಈ ಮಧ್ಯೆ ಎಚ್ಎಂಟಿ ತನ್ನ ವಶದಲ್ಲಿದ್ದ ಅರಣ್ಯ ಭೂಮಿಯ ಪೈಕಿ 165ಕ್ಕೂ ಹೆಚ್ಚು ಎಕರೆ ಜಮೀನನ್ನು ಕೇವಲ 300 ಕೋಟಿ ರೂಪಾಯಿಗಳಿಗೆ ಖಾಸಗಿ ಮತ್ತು ಸರ್ಕಾರದ ವಿವಿಧ ಸಂಸ್ಥೆಗಳಿಗೆ ಮಾರಾಟ ಮಾಡಿತ್ತು.
ಈ ಭೂಮಿಯನ್ನು ವಶಕ್ಕೆ ಪಡೆದು ಲಾಲ್ಬಾಗ್, ಕಬ್ಬನ್ ಪಾರ್ಕ್‌ನಂತಹ ಬೃಹತ್ ಉದ್ಯಾನ ಇಲ್ಲದ ಉತ್ತರ ಬೆಂಗಳೂರಿನಲ್ಲಿ ವೃಕ್ಷೋದ್ಯಾನ ನಿರ್ಮಿಸಿ ಆ ಭಾಗದ ಬೆಂಗಳೂರಿಗರಿಗೆ ಅತ್ಯುತ್ತಮ ಶ್ವಾಸತಾಣ ಮಾಡುವುದಾಗಿ ಸಚಿವ ಈಶ್ವರ ಖಂಡ್ರೆ ತಿಳಿಸಿದ್ದರು. ಈ ನಿಟ್ಟಿನಲ್ಲಿ ಇಂದು ಅರಣ್ಯ ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ.
ಇದನ್ನೂ ಓದಿ:ದಾವಣಗೆರೆಯ ಮಳೆಹಾನಿ ಪ್ರದೇಶಗಳಿಗೆ ಕೃಷ್ಣ ಬೈರೇಗೌಡ ಭೇಟಿ, ಪರಿಶೀಲನೆ