ದಾವಣಗೆರೆ:ಗಣೇಶ ನಿಮಜ್ಜನ ಮೆರವಣಿಗೆ ವೇಳೆ ನಡೆದಕಲ್ಲು ತೂರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಸದ್ಯ ಪರಿಸ್ಥಿತಿ ಶಾಂತಿಯುತವಾಗಿದೆ. ಇಲ್ಲಿ ತನಕ ಒಟ್ಟು 6 ಪ್ರಕರಣ ದಾಖಲಾಗಿದ್ದು, ಒಟ್ಟು 48 ಮಂದಿಯನ್ನು ಬಂಧನ ಮಾಡಿದ್ದಾರೆ.
ಈ ಬಗ್ಗೆ ಶನಿವಾರ ಬಸವನಗರ ಪೊಲೀಸ್ ಠಾಣೆಯಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್, ''ಇದುವರೆಗೂ 48 ಮಂದಿಯನ್ನು ಅರೆಸ್ಟ್ ಮಾಡಿದ್ದೇವೆ. ಘಟನೆ ಸಂಬಂಧ 6 ಪ್ರಕರಣ ದಾಖಲಾಗಿವೆ. ತನಿಖೆ ಸಹ ಚುರುಕಾಗಿ ಮುಂದುವರೆದಿದ್ದು, ಇನ್ನೂ ಯಾರ್ಯಾರು ಆರೋಪಿಗಳಿದ್ದಾರೋ, ಅವರನ್ನೂ ಬಂಧಿಸುತ್ತೇವೆ'' ಎಂದು ತಿಳಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ (ETV Bharat) ''ಎರಡೂ ಕಡೆಯಿಂದಲೂ ಅಮಾಯಕರನ್ನು ಬಂಧನ ಮಾಡಿದ್ದಾರೆ ಅಂತ ಹೇಳುತ್ತಿದ್ದಾರೆ. ಆದರೆ ನಾವು ಸಾಕ್ಷ್ಯಾಧಾರಗಳ ಮೇಲೆಯೇ ಬಂಧನ ಮಾಡಿದ್ದೇವೆ. ಅಮಾಯಕರನ್ನು ಬಂಧನ ಮಾಡಿಲ್ಲ'' ಎಂದು ಎಸ್ಪಿ ಸ್ಪಷ್ಟಪಡಿಸಿದರು.
''ಎರಡೂ ಕಡೆಯವರ ಸಮ್ಮುಖದಲ್ಲಿ ನಾಳೆ ಅಥವಾ ನಾಡಿದ್ದು ಶಾಂತಿ ಸಭೆಯನ್ನೂ ಸಹ ಮಾಡುತ್ತೇವೆ. ಮುಂದಿನ ಗಣೇಶ ಮೂರ್ತಿಗಳ ನಿಮಜ್ಜನವೂ ಎಂದಿನಂತೆ ಮುಂದುವರೆಯುತ್ತದೆ. ಮುಂದಿನ ದಿನಗಳಲ್ಲಿ ನಡೆಯುವ ಮೆರವಣಿಗೆಗಳಲ್ಲಿ ಸದ್ಯ ಡಿಜೆಗೆ ಅನುಮತಿ ಇಲ್ಲ. ಪರಿಸ್ಥಿತಿ ನೋಡಿಕೊಂಡು ನಿರ್ಧಾರ ಮಾಡುತ್ತೇವೆ'' ಎಂದರು.
''ಘಟನೆಯಲ್ಲಿ ಮಕ್ಕಳೂ ಭಾಗಿಯಾಗಿದ್ದು ಕಂಡು ಬಂದಿದೆ. ತಕ್ಷಣಕ್ಕೆ ಮಕ್ಕಳು ಪ್ರಚೋದನೆಗೆ ಒಳಗಾಗಿದ್ದಾರೆ. ನಾವು ಮೊದಲೇ ಅದರ ಬಗ್ಗೆ ಅರಿವು ಮೂಡಿಸಿದ್ದೆವು. ಆದರೂ ಮಕ್ಕಳು ಪ್ರಚೋದಿತರಾಗಿದ್ದಾರೆ. ಪರಿಸ್ಥಿತಿ ನೋಡಿಕೊಂಡು ಬಂದೋಬಸ್ತ್ ಮುಂದುವರೆಸುತ್ತೇವೆ. ಇನ್ಮುಂದೆ ಇಂತಹ ಘಟನೆಗಳು ನಡೆಯದಂತೆ ನಾವು ಕ್ರಮ ಕೈಗೊಳ್ಳುತ್ತೇವೆ'' ಎಂದು ಎಸ್ಪಿ ಉಮಾ ಪ್ರಶಾಂತ್ ಹೇಳಿದರು.
ಇದನ್ನೂ ಓದಿ:ಚಾಮರಾಜನಗರ: ಕಾರಿನ ಹಿಂಬದಿ ಸೀಟ್ನಲ್ಲಿ ಕೊಳೆತ ಸ್ಥಿತಿಯಲ್ಲಿ ವ್ಯಕ್ತಿ ಶವ ಪತ್ತೆ! - Dead Body Found In Car